ಮಾಜಿ ಸಚಿವ ಡಾ.ಸಿ.ಟಿ.ರವಿ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ‘ಭೀಮೋತ್ಸವ’ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶದಲ್ಲಿ ಜಾತಿ ವ್ಯವಸ್ಥೆ ಇಲ್ಲವಾದರೆ ಕಾಂಗ್ರೆಸ್‌ ಬದುಕುವುದಿಲ್ಲ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು.

ಚಿಕ್ಕಮಗಳೂರಿನ ಮಾಜಿ ಸಚಿವ ಡಾ.ಸಿ.ಟಿ.ರವಿ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ‘ಭೀಮೋತ್ಸವ’ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಆರ್‌ಎಸ್‌ಎಸ್‌ ಪ್ರಬಲವಾದರೆ ಜಾತಿ ವ್ಯವಸ್ಥೆ ಇರುವುದಿಲ್ಲ ಎಂಬ ಕಾರಣಕ್ಕೆ ದಲಿತರಿಗೆ ಮತ್ತು ದಲಿತ ಸಂಘಟನೆಗಳಿಗೆ ಆರ್‌ಎಸ್‌ಎಸ್‌ ಬಗ್ಗೆ ತಪ್ಪು ಭಾವನೆ ಮೂಡಿಸಿ ಸಂಘದಿಂದ ದೂರವಿಡುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದು ದೂರಿದರು.

ಆರ್‌ಎಸ್‌ಎಸ್‌ನಲ್ಲಿ ಎಂದಿಗೂ ಜಾತಿ ಕೇಳುವುದಿಲ್ಲ. ಆರ್‌ಎಸ್‌ಎಸ್‌ಗೆ ಜಾತೀಯತೆ ನಿರ್ಮೂಲನೆ ಆಗಬೇಕೆಂದು ಶ್ರಮಿಸುತ್ತಿದೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ದೇಶ ಸುಭದ್ರವಾಗಲಿದೆ. ಈ ಕಾರಣದಿಂದ ಎಲ್ಲರೂ ಒಗ್ಗಟ್ಟಾಗಬೇಕಿದೆ. ಇಲ್ಲವಾದರೆ, ದಲಿತರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಸಿದರು.


ಬಿಜೆಪಿಯಲ್ಲಿ ಗರ್ಭಗುಡಿ ಇದೆ. ದಲಿತರು ಹೋದರೆ, ಅಲ್ಲಿಗೆ ಬಿಡುವುದಿಲ್ಲ ಎಂಬ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಕಾಂಗ್ರೆಸ್‌ ಇಂದಿಗೂ ಮಾಡುತ್ತಿದೆ. ವಾಸ್ತವಾಗಿ ಬಿಜೆಪಿಯಲ್ಲಿ ಗರ್ಭಗುಡಿ ಎಂಬುದೇ ಇಲ್ಲ. ರಾಜಕೀಯ ವೇದಿಕೆಗಳು ಇರುವುದು ಜಾತಿ ಭೇದ ಮಾಡುವುದಕ್ಕೆ ಅಲ್ಲ. ಯಾರು ವಂಚಿತರು, ಶೋಷಿತರಿದ್ದಾರೋ ಅವರಿಗೆ ಭವಿಷ್ಯ ರೂಪಿಸುವ ಕೆಲಸ ರಾಜಕೀಯ ಪಕ್ಷಗಳು ಮಾಡಬೇಕು. ಇಂದಿನ ರಾಜಕೀಯ ಪಕ್ಷಗಳು ಈ ಕೆಲಸ ಮಾಡುತ್ತಿಲ್ಲ ಎಂದರು.

ಸಿ.ಟಿ.ರವಿ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರಿನಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಿದಾಗ ರಾಜಕೀಯವಾಗಿ ಟೀಕೆ, ಪ್ರಶ್ನೆ ಮಾಡುವುದು ಸಹಜ. ಆದರೆ, ಈ ಬಗ್ಗೆ ಅಲೋಚನೆ ಮಾಡದೇ ನಿಮ್ಮ ಕೆಲಸ ಮುಂದುವರಿಸಿ. ಒಂದು ದಿನ ನಿಮ್ಮ ಕೆಲಸ ಟೀಕೆ ಮಾಡಿದವರಿಗೆ ಉತ್ತರ ನೀಡಲಿವೆ ಎಂದರು.

ಎಲ್ಲರ ಹಿತ ಬಯಸುವುದೇ ಧರ್ಮ ಎಂದು ಬಿಜೆಪಿ ಭಾವಿಸಿದೆ. ಈ ಮೂಲಕ ದೇಶ ಕಟ್ಟುವ, ರಕ್ಷಣೆ ಕೆಲಸ ಮಾಡುತ್ತಿದ್ದೇವೆ. ಈ ದೇಶ ಕಾಪಾಡಬೇಕೆಂದರೆ ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಅತಿ ಮುಖ್ಯ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಡಾ.ಸಿ.ಟಿ.ರವಿ ಮಾತನಾಡಿ, ಸಿದ್ದಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಅದು ಸಹ ದೇಶ ಮೊದಲು, ಹಿಂದುತ್ವ, ಸಮಾಜದ ಕಟ್ಟಕಡೆ ಮನುಷ್ಯನಿಗೆ ನೆರವಾಗುವುದು ಎಂಬ ಸಿದ್ದಾಂತವಾಗಿದೆ. ಈ ಹಿನ್ನೆಲೆಯಲ್ಲಿ ಭೀಮೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬರೀ ರಾಜಕಾರಣ ಮಾಡುವುದು ಸುಲಭದ ಕೆಲಸ. ಸಮಾಜವನ್ನು ಒಡೆದು ರಾಜಕಾರಣ ಮಾಡಿಕೊಂಡು ಬಂದವರೇ ಹೆಚ್ಚು. ಈ ತತ್ವದ ಮೇಲೆ ನಂಬಿಕೆ ಇಲ್ಲ. ಸಮಾಜವನ್ನು ಒಗ್ಗೂಡಿಸುವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದರು.

ಸಂವಿಧಾನ ದೇಶದ ಆತ್ಮ. ಅದನ್ನು ಬಿಟ್ಟು ದೇಶಕಟ್ಟುವುದಕ್ಕೆ ಸಾಧ್ಯವಿಲ್ಲ. ಸಂವಿಧಾನದಿಂದ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಿದೆ. ಆದರೆ, ಸಮಾಜ ಪರಿವರ್ತನೆ ಆದಾಗ ಮಾತ್ರ ಸದೃಢ ಸಮಾಜದಿಂದ ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ ಎನ್ನುವ ತತ್ವದ ಆಧರಿಸಿ ಹಲವಾರು ವರ್ಷದಿಂದ ಬಸವ, ಕನಕದಾಸ, ಸರ್ವಜ್ಞ, ಅಂಬೇಡ್ಕರ್‌ ಜಯಂತಿಯನ್ನು ಜಾತಿಯಿಂದ ಹೊರತಾಗಿ ಮಾಡುತ್ತಿದ್ದೇವೆ.

ಕುವೆಂಪು, ಬಸವಣ್ಣ, ಅಂಬೇಡ್ಕರ್‌, ವಿವೇಕಾನಂದ ಕೇವಲ ಜಾತಿಗಾಗಿ ಬದುಕಿದವರಲ್ಲ. ಅವರ ಉಪದೇಶಗಳು, ಬದುಕಿನ ರೀತಿ ಜಾತಿ ಸಂಕೋಲೆ ಮೀರಿದ್ದಾಗಿತ್ತು. ಹೀಗಾಗಿ ಮನೆ ಮತ್ತು ಮನಗಳಲ್ಲಿ ಬದಲಾವಣೆ ತರಬೇಕೆಂಬ ಹಿನ್ನೆಲೆಯಲ್ಲಿ ಈ ಬಾರಿ ಅಂಬೇಡ್ಕರ್‌ ಅವರ 135ನೇ ಜಯಂತಿಯನ್ನು 135 ಮನೆಗಳಲ್ಲಿ ಆಚರಣೆ ಮಾಡಬೇಕೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಕರಡಿಗವಿ ಮಠದ ಪೀಠಾಧ್ಯಕ್ಷ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಮಹಾ ಸಂಸ್ಥಾನದ ಬಸವನಾಗಿದೇವ ಶರಣರು, ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ವಾಗ್ಮಿ ಶ್ರೀಕಾಂತ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮಡಪ್ಪ, ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂತೋಷ್‌ ಕೋಟ್ಯಾನ್‌, ಬಿಜೆಪಿ ಮುಖಂಡರಾದ ಪುಷ್ಪರಾಜ್‌, ವಿಜಯಕುಮಾರ್‌, ರಾಜೀವ್‌ ಮೊದಲಾದವರಿದ್ದರು.

-- ಕೋಟ್‌ --

ಬಿಜೆಪಿ ಕಾರ್ಯಕರ್ತರು ಕೇವಲ ಅಧಿಕಾರಕ್ಕೆ ಕೆಲಸ ಮಾಡುವವರಲ್ಲ. ಅಧಿಕಾರ ಕೇವಲ ಸಾಧನ ಮಾತ್ರ. ಆ ಸಾಧನವನ್ನು ಉಪಯೋಗಿಸಿಕೊಂಡು ರಾಷ್ಟ್ರವನ್ನು ಬಲಗೊಳಿಸಬೇಕು. ಸಮಾಜ ಪರಿವರ್ತನೆ ಆಗಬೇಕೆಂಬ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.

- ಡಾ.ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯರು

-- ಬಾಕ್ಸ್‌ --

ಬಸವಣ್ಣ ವಚನ ಪಾಲನೆಗಿಂತ ಶ್ರೇಷ್ಠ ಧರ್ಮ ಆಚರಣೆ ಇಲ್ಲ

ಧರ್ಮವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೊಡ್ಡ ಗ್ರಂಥಗಳು ಬೇಕಿಲ್ಲ. ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’ ಈ ಒಂದು ವಚನವನ್ನು ಬದುಕಿನಲ್ಲಿ ಪಾಲನೆ ಮಾಡಿದರೆ ಇದಕ್ಕಿಂತ ಶೇಷ್ಠ ಧಾರ್ಮಿಕ ಆಚರಣೆ ಬೇರೆಯಾವುದೂ ಇಲ್ಲ. ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆ ಎಂದರೆ, ಶಿವದಾರ, ಜನಿವಾರ, ಉಡುದಾರಕ್ಕೆ, ವಿಭೂತಿ, ಕುಂಕುಮಕ್ಕೆ ಸೀಮಿತವಾಗಿಲ್ಲ ಎಂದು ಸಿ.ಟಿ.ರವಿ ಹೇಳಿದರು.ಫೋಟೋ

ಚಿಕ್ಕಮಗಳೂರಿನ ಡಾ.ಸಿ.ಟಿ.ರವಿ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಭೀಮೋತ್ಸವ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ.ರವಿ, ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಬಸವನಾಗಿದೇವ ಶರಣರು, ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಮೊದಲಾದವರಿದ್ದರು.