ಹೆತ್ತ ಮಗ ಮೃತಪಟ್ಟ ದುಃಖದ ನಡುವೆಯೂ ಮತದಾನ ಮಾಡಿ ದಂಪತಿ

| Published : May 08 2024, 01:01 AM IST

ಸಾರಾಂಶ

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ನಾಗಪ್ಪ ಬಂಕಾಪುರ ಹಾಗೂ ಪ್ರೇಮವ್ವ ದಂಪತಿ ಮಗನ ಮರಣದ ದುಃಖದ ನಡುವೆಯೂ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.

ಮುಂಡಗೋಡ: ಹೆತ್ತ ಮಗ ಮೃತಪಟ್ಟ ಸುದ್ದಿ ಕೇಳಿದ ಬಳಿಕವೂ ಕೂಡ ಧೃತಿಗೆಡದೆ ದುಃಖದ ನಡುವೆ ದಂಪತಿ ಮತದಾನ ಮಾಡಿ ಜವಾಬ್ದಾರಿ ಮೆರೆದ ವಿಶೇಷ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ನಾಗಪ್ಪ ಶಿವಪ್ಪ ಬಂಕಾಪುರ (ಕುಸುಗಲ್) ಹಾಗೂ ಪ್ರೇಮವ್ವ ನಾಗಪ್ಪ ಬಂಕಾಪುರ ಮಗನನ್ನು ಕಳೆದುಕೊಂಡ ದುಃಖದ ನಡುವೆ ಮತದಾನ ಮಾಡಿದರು.

ಮಗ ರಾಜು ಬಂಕಾಪುರ (26) ತುಮಕೂರಿನಲ್ಲಿ ಖಾಸಗಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೆಟ್ರೋಲ್‌ ಬಂಕ್‌ನಲ್ಲಿ ವಾಹನಕ್ಕೆ ಡೀಸೆಲ್‌ ಹಾಕಿಸುವಾಗ ಪಿಟ್ಸ್‌ ಬಂದು ಬಿದ್ದಿದ್ದಾರೆ. ತಲೆಗೆ ಬಲವಾದ ಏಟು ಬಿದ್ದಿತ್ತು. ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು.

ಮೃತರಿಗೆ ಗರ್ಭಿಣಿ ಪತ್ನಿ, ಸಣ್ಣ ಮಗು ಇದೆ. ಮಗ ಮೃತಪಟ್ಟ ಸುದ್ದಿ ತಂದೆ-ತಾಯಿಗಳಿಗೆ ಸಿಕ್ಕಿತ್ತು. ಇಡೀ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿತ್ತು. ಪಾರ್ಥಿವ ಶರೀರ ತರುತ್ತಿರುವ ಮಾಹಿತಿ ದೊರೆಯಿತು. ಈ ನಡುವೆಯೂ ನನ್ನ ಮತ ನನ್ನ ಹಕ್ಕು ಎಂಬಂತೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ತಮ್ಮ ಜವಾಬ್ದಾರಿ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ.