ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ದಾಂಪತ್ಯ ಮತ್ತು ಕೌಟುಂಬಿಕ ಕಲಹದಿಂದ ವಿಚ್ಛೇದನ ಕೋರಿ ದಾವೆ ಹೂಡಿದ್ದ ಇಬ್ಬರು ದಂಪತಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಹಿತವಚನಗಳಿಗೆ ತಲೆಬಾಗಿ ಮತ್ತೆ ಬಾಳ ಸಂಗಾತಿಗಳಾದ ಪ್ರಸಂಗ ಜರುಗಿತು.ಪಟ್ಟಣದ ಲೀಲಾವತಿ ಬಡಾವಣೆಯ ಬಿಇ ಪದವೀಧರರಾದ ಎಂ.ಪಿ.ರಜತ್ ಹಾಗೂ ಅನುಪಮಾ ಮತ್ತು ಖಾಸಗಿ ಕಂಪನಿಯೊಂದರ ಉದ್ಯೋಗಿ ಗಂಗಾಧರ್ ಹಾಗೂ ಛಾಯಾಶ್ರೀ ಕೌಟುಂಬಿಕ ಕಲಹದಿಂದಾಗಿ ವಿಚ್ಛೇದನ ಕೋರಿ ತಮ್ಮ ಪರ ವಕೀಲರ ಮೂಲಕ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದರು.
ಇಬ್ಬರು ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಜಿತ್ ದೇವರಮನೆ, ಲೋಕ ಅದಾಲತ್‌ನಲ್ಲಿ ಜೀವನದ ಮಹತ್ವ ಕುರಿತು ಹಿತವಚನ ನೀಡಿ ಭವಿಷ್ಯದ ದೃಷ್ಟಿಯಿಂದ ಒಂದಾಗಿ ಬಾಳ್ವೆ ನಡೆಸುವಂತೆ ಕಿವಿಮಾತು ಹೇಳಿದರು.ನ್ಯಾಯಾಧೀಶರ ಮಾತಿಗೆ ತಲೆಬಾಗಿದ ಎಂ.ಪಿ.ರಜತ್ ಮತ್ತು ಅನುಪಮಾ, ಮತ್ತೋರ್ವ ದಂಪತಿ ಗಂಗಾಧರ್ ಮತ್ತು ಛಾಯಶ್ರೀ ವಿಚ್ಛೇದನ ಮತ್ತು ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದು ಒಂದಾಗಿ ಬಾಳ್ವೆ ನಡೆಸುವುದಾಗಿ ನ್ಯಾಯಾಧೀಶರಿಗೆ ಭರವಸೆ ನೀಡಿದರು.
ನಂತರ ನ್ಯಾಯಾಧೀಶ ಅಜಿತ್ ದೇವರಮನೆ ಅವರು ನ್ಯಾಯಾಲಯದ ಸಭಾಂಗಣದಲ್ಲಿ ನೆರೆದಿದ್ದ ವಕೀಲರು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಉಭಯ ದಂಪತಿಗಳು ಪರಸ್ಪರ ಮಾಲಾರ್ಪಣೆ ಮಾಡಿಕೊಂಡು ನ್ಯಾಯಾಧೀಶರ ಆಶೀರ್ವಾದದೊಂದಿಗೆ ಕೈ ಹಿಡಿದುಕೊಂಡು ನ್ಯಾಯಾಲಯದಿಂದ ಹಸನ್ಮುಖಿಗಳಾಗಿ ನಿರ್ಗಮಿಸಿದರು.ಇಬ್ಬರು ದಂಪತಿಗಳ ಪರ ಟಿ.ನಾಗರಾಜು, ಎಂ.ಕೆ.ಜಗದೀಶ್, ಎಚ್.ಸುರೇಶ್ ಹಾಗೂ ದೇವರಾಜು ವಕಾಲತ್ತು ಹೂಡಿದ್ದರು.
ಅದಾಲತ್: ನೂರಾರು ಕೇಸು ಇತ್ಯರ್ಥಕೆ.ಆರ್.ಪೇಟೆ:ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ರಾಜಿಸಂಧಾನದ ಮೂಲಕ ನೂರಾರು ಪ್ರಕರಣಗಳು ಇತ್ಯರ್ಥ ಪಡಿಸಿದರು.
ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕೃಪಾ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ವಕೀಲರ ಸಂಘದ ಸಹಕಾರದಿಂದ ಹತ್ತಾರು ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ನೂರಾರು ಪ್ರಕರಣಗಳನ್ನು ರಾಜಿ ಸಂಧಾನ ನಡೆಸಿ ಪರಸ್ಪರ ಮಾತುಕತೆ ಮೂಲಕ ಮನವೊಲಿಸಿ ವ್ಯಾಜ್ಯಗಳನ್ನು ಮುಕ್ತಾಯಗೊಳಿಸಲಾಯಿತು ಎಂದರು.ಸಣ್ಣ ಪುಟ್ಟ ವಿಚಾರಗಳಿಗೆ ದ್ವೇಷ ಸಾಧಿಸಿ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಬರುತ್ತಿದ್ದ ಕಕ್ಷಿದಾರರು ಇಂದು ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಬಗೆಹರಿಸಿಕೊಂಡು ಸಂತೋಷದಿಂದ ತಮ್ಮ ಮನೆಗೆ ಹೋಗುತ್ತಿದ್ದದು ಕಂಡು ಬಂತು.ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ, ಅರ್ಪಿತಾ, ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವಪ್ಪ, ಜಿ.ಸುರೇಂದ್ರ, ವೀರಭದ್ರ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಹಾಗೂ ಕಕ್ಷಿದಾರರು ಭಾಗವಹಿಸಿದ್ದರು.