ಸಾರಾಂಶ
ಮುಂಡರಗಿ:ಈ ನಾಡಿನಲ್ಲಿರುವ ಅನೇಕ ಲಿಂಗಾಯತ ಮಠಗಳು ಬಡ ಹಾಗೂ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿವೆ. ಅಂತಹ ಸಂಸ್ಥೆಗಳಲ್ಲಿ ನಮ್ಮ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠವೂ ಒಂದು. ಇಂತಹ ಗ್ರಾಮೀಣ ಪ್ರದೇಶದಲ್ಲಿ ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಸಂಸ್ಥೆ ತೆರೆದು ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದ ಕೀರ್ತಿ ಇಲ್ಲಿನ ಅನ್ನದಾನೀಶ್ವರ ಶ್ರೀಗಳಿಗೆ ಸಲ್ಲುತ್ತದೆ ಎಂದು ಧಾರವಾಡ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಹೇಳಿದರು.
ಅವರು ಭಾನುವಾರ ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮದಅಡಿಯಲ್ಲಿ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತ ಆಶ್ರಯದಲ್ಲಿ ಜರುಗಿದ ಗುರುವಂದನೆ, ಹಿರಿಯ ವಿದ್ಯಾರ್ಥಿಗಳ ಸಮಾಗಮ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ನಾವು ಈ ಕಾಲೇಜಿನಲ್ಲಿ ಓದುತ್ತಿರುವಾಗ ಇಲ್ಲಿನ ಪ್ರಾಧ್ಯಾಪಕರು ನಮಗೆ ಕೇವಲ ಪಠ್ಯದಲ್ಲಿನ ಪಾಠಗಳನ್ನು ಹೇಳದೇ ನಾವು ಬದುಕಿನಲ್ಲಿ ಹೇಗೆ ಬದುಕಬೇಕೆನ್ನುವ ಜೀವನಾನುಭವದ ಪಾಠವನ್ನು ಕಲಿಸಿಕೊಟ್ಟಿದ್ದಾರೆ. ಇಲ್ಲಿನ ಪ್ರಾಚಾರ್ಯರ ಶಿಸ್ತು, ಶ್ರದ್ಧೆ, ಸಮಯ ಪ್ರಜ್ಞೆ, ಇದೀಗ ನಾವು ಉನ್ನತ ಹುದ್ದೆಯಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಿರುವಾಗ ಹೆಚ್ಚು ಉಪಯುಕ್ತವಾಗುತ್ತಿದೆ. ಹೀಗಾಗಿ ಸಂಸ್ಥೆಯ ಪ್ರಗತಿಗಾಗಿ ನಾವೆಲ್ಲರೂ ತನು, ಮನ, ಧನದಿಂದ ಸಹಾಯ ಮಾಡಿ ಇಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಅನುಕೂಲ ಮಾಡಿಕೊಡೋಣ ಎಂದರು.ಇನ್ನೋರ್ವ ಅತಿಥಿ ಹರಪನಹಳ್ಳಿ ಡಿ.ವೈ.ಎಸ್.ಪಿ. ವೆಂಕಟಪ್ಪನಾಯಕ ಮಾತನಾಡಿ, ಹಾ.ಮಾ.ನಾಯಕ್, ಎಚ್.ಎಸ್. ವೆಂಕಟೇಶಮೂರ್ತಿ, ಚನ್ನವೀರ ಕಣವಿ, ಸಿದ್ದಲಿಂಗ ಪಟ್ಟಣಶೆಟ್ಟಿ ಸೇರಿದಂತೆ ನಾಡಿನ ಖ್ಯಾತ ಸಾಹಿತಿಗಳನ್ನು, ವಿದ್ವಾಂಸರನ್ನು ಕರೆದು ಕಾಲೇಜಿನಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಕೀರ್ತಿ ಮುಂಡರಗಿ ಕ.ರಾ.ಬೆಲ್ಲದ ಮಹಾವಿದ್ಯಾಲಯಕ್ಕೆ ಸಲ್ಲುತ್ತದೆ. ಈ ಮಹಾವಿದ್ಯಾಲಯವು ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದೆ. ಕಷ್ಟ ಅನುಭವಿಸಿದವರಿಗೆ ಮಾತ್ರ ನಿಜವಾದ ಸುಖದ ಮಹತ್ವ ತಿಳಿಯುತ್ತದೆ. ಕಡುಬಡತನದಲ್ಲಿ ಜನಿಸಿದ ನಮಗೆ ಅನ್ನ,ಅಕ್ಷರ, ಅರಿವು ನೀಡಿದ ವಿದ್ಯಾ ಸಮಿತಿಗೆ, ನಮ್ಮ ಮಹಾವಿದ್ಯಾಲಯದ ಅಭಿವೃದ್ಧಿಗೆ ನಾವೆಲ್ಲರೂ ಸದಾ ಕಂಕಣಬದ್ಧರಾಗಿ ನಿಲ್ಲೋಣ ಎಂದರು.
ಸಾನಿಧ್ಯವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, 1924ರಲ್ಲಿ ಪ್ರಾರಂಭವಾದ ಜ.ಅ. ವಿದ್ಯಾ ಸಂಸ್ಥೆ ಇಂದು ನಾಡಿನಾದ್ಯಂತ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡುವ ಉದ್ದೇಶದಿಂದ 33 ಅಂಗ ಸಂಸ್ಥೆಗಳನ್ನು ತೆರೆದಿದ್ದು, ಇಲ್ಲಿಂದ ಕಲಿತು ಹೋದ ಲಕ್ಷಾಂತರ, ಕೋಟ್ಯಂತರ ಮಕ್ಕಳು ಇಂದು ನಾಡಿನಾದ್ಯಂತ ಉನ್ನತವಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಸಂಸ್ಥೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಸವಿನೆನಹಿನಲ್ಲಿ ಸುಮಾರು 6 ಕೋಟಿ ರು.ಗಳ ವೆಚ್ಚದಲ್ಲಿ ಇಲ್ಲಿನ ಜ.ಅ.ಪ.ಪೂ.ಮಹಾವಿದ್ಯಾಲಯದ ನೂತನ ಕಟ್ಟಡ ಕಾಮಗಾರಿ ಪ್ರಾರಂಭಿಸಿದ್ದು, ಎಲ್ಲರೂ ತನು, ಮನ, ಧನದಿಂದ ಸಹಾಯ ಸಹಕಾರ ಮಾಡಬೇಕು. ಜೂನ್ ಅಥವಾ ಜುಲೈ ತಿಂಗಳಿನಲ್ಲಿ 7 ದಿನಗಳ ಕಾಲ ಶತಮಾನೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದರು.ಜ.ಅ.ವಿದ್ಯಾ ಸಮಿತಿ ಗೌ. ಕಾರ್ಯದರ್ಶಿ ಆರ್.ಆರ್. ಹೆಗಡಾಳ ಕಾರ್ಯಕ್ರಮ ಉದ್ಘಾಟಿಸಿದರು. ಅವರ ಪರವಾಗಿ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಮಾತನಾಡಿದರು. ಕ.ರಾ. ಬೆಲ್ಲದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 75 ಜನ ಹಳೆಯ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಶ್ರೀಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹುಬ್ಬಳ್ಳಿಯ ಪ್ರಧಾನ ಹಿರಿಯ ನ್ಯಾಯಾಧೀಶ ಯಮನೂರಪ್ಪ ಕೆ. ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ.ಆರ್.ಎಲ್. ಪೊಲೀಸ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಾ.ಡಾ. ಡಿ.ಸಿ. ಮಠ, ಮಂಜುನಾಥ ಇಟಗಿ, ರಾಘವೇಂದ್ರ ಕುರಿಯವರ, ವಿರೇಶ ಸಜ್ಜನರ, ಯಲ್ಲಪ್ಪ ಕರಡಿ, ಉಮೇಶ ಹಿರೇಮಠ, ಶಿವು ನಾಡಗೌಡ್ರ, ಕೈಲಾಸಪತಿ ಹಿರೇಮಠ, ಈರಪ್ಪ ವಡ್ಡಟ್ಟಿ, ಮಂಜುನಾಥ ಮುಧೋಳ, ವೀರನಗೌಡ ಗುಡದಪ್ಪನವರ, ಬಿ.ಎಫ್. ಈಟಿ, ಎಂ.ಜಿ. ಗಚ್ಚಣ್ಣವರ, ಡಾ. ಸಂತೋಷ ಹಿರೇಮಠ, ಡಾ. ಸಚಿನ ಉಪ್ಪಾರ, ಡಾ. ಮನೋಜ ಕೋಪರ್ಡೆ, ಡಾ. ಕುಮಾರ ಜೆ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾ.ಡಾ.ಡಿ.ಸಿ. ಮಠ ಸ್ವಾಗತಿಸಿ, ಶಶಿಕಲಾ ಕುಕನೂರ, ಡಾ. ಸಂತೋಷ ಹಿರೇಮಠ ನಿರೂಪಿಸಿದರು.