ಸಾರಾಂಶ
ದಕ್ಷಿಣ ಕೊಡಗಿನ ಕೋತೂರಿನ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 9ನೇ ವಾರ್ಷಿಕ ಮಹಾಸಭೆ ನಡೆಯಿತು. ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಆರ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೃಷಿ ಸಂಸ್ಕೃತಿಯ ವಾರಸುದಾರರಾಗಿ ಅನ್ನದಾತರು ಮತ್ತು ಶ್ರಮದಾತರು ಎಂದು ಕರೆಸಿಕೊಂಡಿರುವ ಒಕ್ಕಲಿಗರು ತಮ್ಮ ಅನ್ನದಾತರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಿಳಿಸಬೇಕು ಎಂದು ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಆರ್. ಸುರೇಶ್ ಕರೆ ನೀಡಿದ್ದಾರೆ.ದಕ್ಷಿಣ ಕೊಡಗಿನ ಕೋತೂರಿನ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 9ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಲಕಸುಬನ್ನು ಕಡೆಗಣಿಸಿದರೆ ಯಾವುದೇ ಜನಾಂಗಗಳ ಸರಿಯಾದ ಅಸ್ತಿತ್ವ ಉಳಿಯಲು ಸಾಧ್ಯವಿಲ್ಲ. ಅದ್ದರಿಂದ ತಮ್ಮ ಮೂಲ ಸಂಸ್ಕೃತಿ ಮುಂದುವರಿಸಲು ಇಂದಿನ ಯುವ ಸಮುದಾಯಕ್ಕೆ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಶಿಕ್ಷಣವು ಜನಾಂಗಗಳ ಮತ್ತು ಜನಾಂಗೀಯ ಸಂಘಟನೆಗಳ ಸದಸ್ಯರ ಬೆಳವಣಿಗೆ, ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಅತ್ಯಗತ್ಯ ಅಂಶವಾಗಿದೆ. ಶಿಕ್ಷಣವು ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡುತ್ತದೆ. ವಿದ್ಯಾವಂತ ಸಮಾಜವು ಭವಿಷ್ಯದ ಪೀಳಿಗೆಯ ಸುಸ್ಥಿರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಭದ್ರವಾದ ಬುನಾದಿ ಕಲ್ಪಿಸುತ್ತದೆ ಎಂದರು.ಸಂಘದ ಗೌರವ ಕಾರ್ಯದರ್ಶಿ ವಿ.ವೈ. ಗಣೇಶ್ ವರದಿ ವಾಚಿಸಿದರು. ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳಾದ ವಿ.ಆರ್. ಪರಮೇಶ್, ವಿ.ವಿ. ಉಲ್ಲಾಸ್, ಕೆ.ಕೆ. ಮಂಜುನಾಥ್, ವಿ.ಟಿ. ತಮ್ಮಯ್ಯ, ವಿ.ಆರ್. ಗೌರಮ್ಮ, ವಿ.ಎನ್. ಸರಸ್ವತಿ, ವಿ.ಆರ್. ಸತೀಶ್ ಹಾಗೂ ವಿ.ಎಸ್ ಸುಬ್ರಮಣಿ ಇದ್ದರು. ನಿರ್ದೇಶಕ ವಿ. ಆರ್. ಪರಮೇಶ್ ಸ್ವಾಗತಿಸಿ ವಂದಿಸಿದರು.