ಮಹಿಳೆ ಅಡುಗೆ ಮನೆಗೆ ಸೀಮಿತ ಎಂಬುದು ಸಂಘದ ಸಂಸ್ಕೃತಿ

| Published : Apr 04 2024, 01:03 AM IST

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಘನತೆ, ಗೌರವವಿದೆ. ಮನು ಸಂಸ್ಕೃತಿಯ ಆರ್‌ಎಸ್‌ಎಸ್‌, ಬಿಜೆಪಿಯವರು ಮಹಿಳೆಯು ಅಡುಗೆ ಮನೆಗೇ ಸೀಮಿತವೆಂಬ ಸಿದ್ಧಾಂತದಲ್ಲೇ ಬಂದಿದ್ದಾರೆ ಎಂದು ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ಶಾಸಕ ಶಾಮನೂರು ವಿರುದ್ಧ ಬಿಜೆಪಿ ಅಪಪ್ರಚಾರ: ಡಿ.ಬಸವರಾಜ ಟೀಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಘನತೆ, ಗೌರವವಿದೆ. ಮನು ಸಂಸ್ಕೃತಿಯ ಆರ್‌ಎಸ್‌ಎಸ್‌, ಬಿಜೆಪಿಯವರು ಮಹಿಳೆಯು ಅಡುಗೆ ಮನೆಗೇ ಸೀಮಿತವೆಂಬ ಸಿದ್ಧಾಂತದಲ್ಲೇ ಬಂದಿದ್ದಾರೆ ಎಂದು ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಹಿಳೆಯರಿಗೆ ಅವಕಾಶ, ಅಧಿಕಾರ, ಸ್ಥಾನಮಾನಗಳ ನೀಡಿರುವ ಪಕ್ಷವಾಗಿದೆ. ಇಂದಿರಾ ಗಾಂಧಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಆಗಿದ್ದವರು. 15 ವರ್ಷ ಕಾಲ ದೇಶವನ್ನು ಮುನ್ನಡೆಸಿ, ಇಡೀ ದೇಶದ ಪ್ರಗತಿಗೆ ಶ್ರಮಿಸಿದರು. ಪ್ರತಿಭಾ ಪಾಟೀಲರನ್ನು ದೇಶದ ಪ್ರಪ್ರಥಮ ರಾಷ್ಟ್ರಪತಿಯಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 6 ಕಡೆ ಮಹಿಳೆಯರಿಗೆ ಟಿಕೆಟ್ ನೀಡಿದ ಪಕ್ಷ ನಮ್ಮದು. ಬಿಜೆಪಿ ಎಷ್ಟು ಮಹಿಳೆಯರಿಗೆ ಟಿಕೆಟ್ ನೀಡಿದೆ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 6 ಕಡೆ ಮಹಿಳೆಯರಿಗೆ ಟಿಕೆಟ್ ನೀಡಿ, ಶೇ.25 ಮೀಸಲಾತಿ ನೀಡಿದ್ದೇವೆ. ಮಹಿಳಾ ಮೀಸಲಾತಿ ಜಾರಿಗೊಳಿಸುತ್ತಿದ್ದೇವೆ, ಅದು ಜಾರಿಗೊಳ್ಳಲು 10 ವರ್ಷ ಬೇಕೆಂಬ ಹೇಳಿಕೆ ನೀಡಿರುವ ಮೋದಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಸುಗ್ರೀವಾಜ್ಞೆ ಹೊರಡಿಸಿ, ಮಹಿಳಾ ಮೀಸಲಾತಿ ಜಾರಿಗೆ ತರಬೇಕಿತ್ತು ಎಂದರು.

ಪಕ್ಷದ ಹಿರಿಯ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಹಿಳೆಯರಿಗೆ ಅವಮಾನಿಸಿದ್ದಾರೆಂದು ಬಿಜೆಪಿಯವರು ಅಪಪ್ರಚಾರ ನಡೆಸಿದ್ದಾರೆ. ದಾವಣಗೆರೆಯಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಬಿಜೆಪಿ ಹೀಗೆ ವಿನಾಕಾರಣ ಅಪಪ್ರಚಾರ ಮಾಡುತ್ತಾ, ಪ್ರತಿಭಟನೆ ನಡೆಸುತ್ತಾ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ನಿನ್ನೆಯಷ್ಟೇ ಮಾರಮ್ಮನ ಗುಡಿ ಪೂಜಾರಿಯಂತೆ ಚನ್ನಪಟ್ಟಣದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕ ರೋಡ್ ಶೋ ಮಾಡಿ ಹೋಗಿದ್ದಾರೆ ಎಂದು ಅಮಿತ್ ಶಾ ಬಗ್ಗೆ ಅವರು ವ್ಯಂಗ್ಯವಾಡಿದರು.

ಪಕ್ಷದ ಮುಖಂಡರಾದ ಡೋಲಿ ಚಂದ್ರು, ಹರಪನಹಳ್ಳಿ ಎಂ.ವಿ. ಅಂಜಿನಪ್ಪ, ವಕೀಲ ಆವರಗೆರೆ ಎಸ್.ಪರಮೇಶ, ಹರಪನಹಳ್ಳಿ ಗೊಂಗಡಿ ನಾಗರಾಜ, ಡಿ.ಎಚ್. ಉದಯಕುಮಾರ, ಡಿ.ಶಿವಕುಮಾರ, ಸುರೇಶ, ಮುಬಾರಕ್‌, ಬಿ.ವಿನಾಯಕ ಇತರರು ಇದ್ದರು.

- - - ಬಾಕ್ಸ್‌ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ದಾವಣಗೆರೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಹಿರಿಯ ಮುಖಂಡ, ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿ 1984ರಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ. 1986ರಲ್ಲಿ ಎನ್ಎಸ್‌ಯುಐ ಉಪಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಕ್ತಾರನಾಗಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದನ್ನು ಗುರುತಿಸಿ, ಪಕ್ಷ ಹೊಸ ಜವಾಬ್ದಾರಿ ವಹಿಸಿದೆ ಎಂದರು.

ದಾವಣಗೆರೆ ನಗರಸಭೆ ಅಧ್ಯಕ್ಷ, ಕೆಎಸ್ಐಸಿ ಅಧ್ಯಕ್ಷ, ಕೆಪಿಸಿಸಿ ವಕ್ತಾರನಾಗಿ ಕೆಲಸ ಮಾಡಿದ್ದೇನೆ. ಇದೀಗ ಪಕ್ಷ ವಹಿಸಿರುವ ನೂತನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದು ಡಿ.ಬಸವರಾಜ ತಿಳಿಸಿದರು.

- - - -3ಕೆಡಿವಿಜಿ63:

ದಾವಣಗೆರೆಯಲ್ಲಿ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.