ಪ್ರಸ್ತುತ ಜನಪದ ಸೃಷ್ಟಿ ಮಾಡಲಾಗದ ಸ್ಥಿತಿ: ಡಾ.ಹಿ.ಶಿ.ರಾಮಚಂದ್ರೇಗೌಡ

| Published : Sep 03 2025, 01:00 AM IST

ಪ್ರಸ್ತುತ ಜನಪದ ಸೃಷ್ಟಿ ಮಾಡಲಾಗದ ಸ್ಥಿತಿ: ಡಾ.ಹಿ.ಶಿ.ರಾಮಚಂದ್ರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದರು ನಿತ್ಯದ ಗೋಳು, ಶ್ರಮದಿಂದ ಬಿಡುಗಡೆ ಪಡೆಯಲು, ಮನಸ್ಸನ್ನು ಪರಿಶುದ್ಧ ಮಾಡಿಕೊಳ್ಳುವ ಸಲುವಾಗಿ ಜನಪದವನ್ನು ಸೃಷ್ಟಿ ಮಾಡಿದರು. ಮನಸ್ಸನ್ನು ಕಳೆದುಕೊಂಡರೆ ಏನನ್ನೂ ಸೃಷ್ಟಿ ಮಾಡಲಾಗದು. ಪ್ರಸ್ತುತ ಜನಪದ ಕಲೆಗಳನ್ನು ಬಳಸಿಕೊಳ್ಳುತ್ತಿದ್ದೇವೆಯೇ ಹೊರತು ಮತ್ತೆ ಸೃಷ್ಟಿ ಮಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರಮ ಸಂಸ್ಕೃತಿಯಿಂದ ಬಿಡುಗಡೆ ಪಡೆಯಲು ಜನರು ಜನಪದವನ್ನು ಸೃಷ್ಟಿ ಮಾಡಿದರು. ಆದರೆ, ಇಂದು ಅಂತಹ ಜನಪದವನ್ನು ಸೃಷ್ಟಿ ಮಾಡಲಾಗುತ್ತಿಲ್ಲ ಎಂದು ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ವಿಷಾದಿಸಿದರು

ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಮತ್ತು ತಾಲೂಕು ಘಟಕಗಳು, ಕರ್ನಾಟಕ ಸಂಘ, ಉದ್ದೇಶಿತ ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕೆವಿಎಸ್ ಭವನದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಮತ್ತು ನಾಡೋಜ ಜಿ.ನಾರಾಯಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದರು ನಿತ್ಯದ ಗೋಳು, ಶ್ರಮದಿಂದ ಬಿಡುಗಡೆ ಪಡೆಯಲು, ಮನಸ್ಸನ್ನು ಪರಿಶುದ್ಧ ಮಾಡಿಕೊಳ್ಳುವ ಸಲುವಾಗಿ ಜನಪದವನ್ನು ಸೃಷ್ಟಿ ಮಾಡಿದರು. ಮನಸ್ಸನ್ನು ಕಳೆದುಕೊಂಡರೆ ಏನನ್ನೂ ಸೃಷ್ಟಿ ಮಾಡಲಾಗದು. ಪ್ರಸ್ತುತ ಜನಪದ ಕಲೆಗಳನ್ನು ಬಳಸಿಕೊಳ್ಳುತ್ತಿದ್ದೇವೆಯೇ ಹೊರತು ಮತ್ತೆ ಸೃಷ್ಟಿ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ರಾಜಕಾರಣ, ಸಂಪತ್ತು ಕೆಲ ದಿನ ಮಾತ್ರ ಇರುತ್ತೆ. ಆದರೆ ಸಂಸ್ಕೃತಿ ಮತ್ತು ನಡವಳಿಕೆ ಮಾತ್ರ ಶಾಶ್ವತವಾಗಿರುತ್ತದೆ. ನಮ್ಮನ್ನು ಪುನಃ ಪುನಃ ಸೃಷ್ಠಿ ಮಾಡುವುದಕ್ಕೆ ಪ್ರೇರೇಪಿಸುವುದು, ಜಾತ್ರೆ, ಹಬ್ಬಗಳಲ್ಲಿ ಮನಸ್ಸು ಅರಳುವಂತೆ ಮಾಡುವುದು ಜಾನಪದ ಮಾತ್ರ ಎಂದು ಅಭಿಪ್ರಾಯಿಸಿದರು.

೧೮ನೇ ಶತಮಾನದಲ್ಲಿ ಇಂಗ್ಲೇಂಡ್‌ನಲ್ಲಿ ಪ್ರಪಂಚಕ್ಕೇ ಮಾದರಿಯಾದ ದೊಡ್ಡ ವಿಜ್ಞಾನ ಸ್ಫೋಟ ಶುರುವಾಗಿತ್ತು. ಕೈಗಾರಿಕಾ ಪ್ರಭುಗಳು ಬಂದರು. ಎಲ್ಲವೂ ಕೈಗಾರಿಕೆಯಿಂದಲೇ ಸಾಧ್ಯ ಎಂದು ಬಿಂಬಿಸಲು ಪ್ರಾರಂಭಿಸಿದರು. ಮನುಷ್ಯನನ್ನು ಇದು ಕೇವಲ ಬಳಸಿ ಬಿಸಾಡುವಂತಹ ಸಂಸ್ಕೃತಿಯಾಗಿದೆ. ಇದು ಮಾನವ ಕುಲಕ್ಕೇ ಸಂಚಕಾರ ಎಂದು ಅರಿತ ಸಾಹಿತಿಗಳು, ಚಿಂತಕರು ಒಂದೆಡೆ ಕಲೆತು ಅಭಿಪ್ರಾಯಗಳನ್ನು ಮಂಡಿಸಿದರು. ಇದರಲ್ಲೇ ಪ್ಲೋಕ್ ಎಂಬ ಪದ ಹುಟ್ಟಿಕೊಂಡಿತು ಎಂದು ಉದಾಹರಣೆ ಸಮೇತ ವಿವರಿಸಿದರು.

ಮನುಷ್ಯರನ್ನು ಬಳಸಿಕೊಳ್ಳುತ್ತಾ ಹೋದರೆ, ಗುಲಾಮರಾಗುತ್ತಾ ಹೋಗುತ್ತಾರೆ. ಕೈಗಾರಿಕೆಯಲ್ಲಿ ಉದ್ಯಮಿಪತಿಗಳು ಬಂದು ಜನರನ್ನು ವಸ್ತುಗಳ ರೂಪದಲ್ಲಿ ಬಳಸಿಕೊಳ್ಳುವ ಕಾಲ ಶುರುವಾಗಿದ್ದ ಕಾಲಘಟ್ಟದೊಳಗೆ ಉದ್ಭವಿಸಿದ ಜನಪದ ಸಂಸ್ಕೃತಿ ಈಗ ಅರ್ಧಕ್ಕೇ ನಿಂತುಹೋಗಿದೆ. ಹೊಸದಾಗಿ ಸೃಷ್ಟಿಸುವಂತಹ ಸವಾಲು ನಮ್ಮ ಮುಂದಿದೆ ಎಂದು ಪ್ರತಿಪಾದಿಸಿದರು.

ಜನಪದ ಬಾಗಿನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮುಖ್ಯ ಆದಾಯ ತೆರಿಗೆ ಆಯುಕ್ತ ಜಯರಾಂ ರಾಯಪುರ ಮಾತನಾಡಿ, ಜನಪದರು ಕಟ್ಟಿ ಬೆಳೆಸಿದ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯತೆ ಇದೆ. ಹಿಂದೆಲ್ಲ, ಜಾತ್ರೆ, ಹಬ್ಬಗಳಲ್ಲಿ ಜನಪದವನ್ನು ಮೆರೆಸಲಾಗುತ್ತಿತ್ತು. ಆಧುನೀಕತೆಯ ಸೋಗಿನಲ್ಲಿ ಜನಪದ ನಿಧಾನವಾಗಿ ಜನರಿಂದ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಕ್ಷಗಾನದಂತಹ ಕಲೆಗಳನ್ನು ಮದುವೆ ಮತ್ತಿತರ ಸಮಾರಂಭಗಳಲ್ಲಿ ಕೆಲವರು ಮಾತ್ರ ಏರ್ಪಡಿಸುತ್ತಿದ್ದಾರೆ. ಇದು ಪ್ರತಿಯೊಂದು ಮದುವೆ ಮತ್ತಿತರ ಹಬ್ಬಗಳ ಸಂದರ್ಭದಲ್ಲೂ ಹಾಡುವ ಜನಪದವನ್ನು ಪ್ರೋತ್ಸಾಹಿಸಬೇಕು. ಹಾಗಾದಾಗ ಮಾತ್ರ ಜನಪದವನ್ನು ಕಟ್ಟಿಕೊಡಲು ಸಾಧ್ಯ ಎಂದು ಪ್ರತಿಪಾದಿಸಿದರು.

ಇಡೀ ರಾತ್ರಿ ನಡೆಯುತ್ತಿದ್ದ ಮೂಡಲಪಾಯ ಯಕ್ಷಗಾನ ಒಂದೆರಡು ಗಂಟೆಗಳಿಗೆ ಇಳಿಸುವ ಪ್ರಯತ್ನಗಳು ನಡೆಯುತ್ತಿವೆ. ಜನಪದಲ್ಲಿ ಏನೆಲ್ಲಾ ಸಂಶೋಧನೆಗಳನ್ನು ನಡೆಸಿದರೂ ಸಹ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಹ ಅಷ್ಟೇ ಮುಖ್ಯ ಎಂದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಕಲಾವಿದರನ್ನು ಕೂಲಿ ರೀತಿಯಲ್ಲೇ ನೋಡುತ್ತೇವೆ. ಇದು ಸರಿಯಲ್ಲ. ಕಲಾವಿದರಿಗೆ ಹೆಚ್ಚಿನ ಕೆಲಸ ಕೊಟ್ಟು ಕೈತುಂಬಾ ಹಣವನ್ನು ಕೊಡಬೇಕು ಎಂದು ಸಲಹೆ ನೀಡಿದರು.

ನಮ್ಮ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಉತ್ಸವಗಳಲ್ಲೂ ಸ್ಥಳೀಯ ಕಲಾವಿದರನ್ನೇ ಆಯ್ಕೆ ಮಾಡಿ ಅವರಿಗೆ ಹೆಚ್ಚಿನ ಸಂಭಾವನೆ ಕೊಡುವಂತೆ ಸಲಹೆ ನೀಡಿದ ಅವರು, ಬೆಂಗಳೂರು ಮತ್ತಿತರರ ಕಡೆಯಿಂದ ಕರೆತರುವ ದೊಡ್ಡ ಮಟ್ಟದ ಕಲಾವಿದರಿಗೆ ಹೆಚ್ಚಿನ ಹಣ ನೀಡುತ್ತಾರೆಯೇ ಹೊರತು ಸ್ಥಳೀಯ ಕಲಾವಿದರನ್ನು ಕಸಕ್ಕಿಂತ ಕಡೆಯಾಗಿಸುವುದು ಸರಿಯಲ್ಲ. ಕಲಾವಿದರ ಬದುಕು ದುಸ್ತರವಾಗಿರುತ್ತದೆ. ಅದನ್ನು ಕಂಡು ಹೆಚ್ಚಿನ ಸಂಭಾವನೆ ನೀಡುವಂತೆ ಕರೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ವಿ.ನಂದೀಶ್, ಕಾರಸವಾಡಿ ಮಹದೇವು, ಡಿ.ಪಿ.ಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.