ರಂಗೇರಿದ ಮುಳುಗಡೆ ನಗರಿಯ ರಂಗಿನಾಟ

| Published : Mar 15 2025, 01:06 AM IST / Updated: Mar 15 2025, 01:07 AM IST

ಸಾರಾಂಶ

ಐತಿಹಾಸಿಕ ಬಾಗಲಕೋಟೆ ಹೋಳಿಗೆ ಚಾಲನೆ ದೊರೆತಿದ್ದು, ಮೊದಲ ದಿನ ಶುಕ್ರವಾರ ಬಣ್ಣಾದಾಟ ಅದ್ಧೂರಿಯಾಗಿ ಆರಂಭಗೊಂಡಿತು. ವಿದ್ಯಾಗಿರಿ, ನವನಗರ, ಹಳೇ ಬಾಗಲಕೋಟೆ ನಗರ ಅಕ್ಷರಶಃ ಬಣ್ಣದ ಲೋಕದಲ್ಲಿ ಮಿಂದೆದ್ದಿತು. ಎಲ್ಲಡೆ ಸಂಭ್ರಮ, ಸಂತಸ ತೇಲುವಂತೆ ಮಾಡಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಐತಿಹಾಸಿಕ ಬಾಗಲಕೋಟೆ ಹೋಳಿಗೆ ಚಾಲನೆ ದೊರೆತಿದ್ದು, ಮೊದಲ ದಿನ ಶುಕ್ರವಾರ ಬಣ್ಣಾದಾಟ ಅದ್ಧೂರಿಯಾಗಿ ಆರಂಭಗೊಂಡಿತು. ವಿದ್ಯಾಗಿರಿ, ನವನಗರ, ಹಳೇ ಬಾಗಲಕೋಟೆ ನಗರ ಅಕ್ಷರಶಃ ಬಣ್ಣದ ಲೋಕದಲ್ಲಿ ಮಿಂದೆದ್ದಿತು. ಎಲ್ಲಡೆ ಸಂಭ್ರಮ, ಸಂತಸ ತೇಲುವಂತೆ ಮಾಡಿತು.

ನವನಗರದ, ವಿದ್ಯಾಗಿರಿ ಭಾಗದಲ್ಲಿ ಬೆಳಗ್ಗೆ ರಂಗಿನಾಟಕ್ಕೆ ಚಾಲನೆ ದೊರೆಯಿತು. ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು, ಹಿರಿಯರು ಹಲಗೆ ಬಾರಿಸುತ್ತಾ ಸಂಭ್ರಮದಿಂದ ಪಾಲ್ಗೊಂಡಿದ್ದರು. ಮಧ್ಯಾಹ್ನ ನಂತರ ಕಿಲ್ಲಾ ಓಣಿ ಬಣ್ಣದಾಟ ರಂಗು ಪಡೆದುಕೊಂಡಿತು. 4 ಗಂಟೆ ಬಳಿಕ ಈಡೀ ಪಟ್ಟಣವೇ ಕಲರ್ ಫುಲ್ ಆಗಿ ಕಂಗೂಳಿಸಿತು.

ನವನಗರದ ಜಿಹವೇಶ್ವರ ದೇವಸ್ಥಾನದಿಂದ ನವನಗರದ ಜನತೆ, ವಿದ್ಯಾಗಿರಿ ಆಂಜನೇಯಸ್ವಾಮಿ ದೇವಸ್ಥಾನದಿಂದ ವಿದ್ಯಾಗಿರಿ ಜನತೆ ಬಣ್ಣದ ಬಂಡಿಗಳ ಮೆರವಣಿಗೆ ಚಾಲನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿದ್ದ ಟ್ರ್ಯಾಕ್ಟರ್, ಎತ್ತಿನ ಬಂಡಿಗಳಲ್ಲಿ ತುರಾಯಿ ಹಲಗೆ ಮುಂಚೂಣಿಯಲ್ಲಿ ನಡೆದ ಮೆರವಣಿಗೆ ನೋಡುಗರಿಗೆ ಗಮನ ಸೆಳೆಯಿತು. ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ನಗರಸಭೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆಯಲ್ಲಿ ಪರಸ್ಪರ ಸಮಾಗಮಗೊಳ್ಳುವ ದೃಶ್ಯ ಮನಮೋಹಕವಾಗಿತ್ತು.

ಮೊದಲ ದಿನದ ಕಿಲ್ಲಾಗಲ್ಲಿಯ ರಂಗಿನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.

ನಗರದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಬಂದ್‌ ಕರೆ ರೀತಿ ಗೋಚರಿಸಿತು. ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆಳಗ್ಗೆಯಿಂದ ಮಕ್ಕಳು ಹಲಿಗೆ ಬಾರಿಸುತ್ತ ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಬಣ್ಣದ ನೀರು ತುಂಬಿಕೊಂಡು ಪ್ರಮುಖ ರಸ್ತೆಗಳಲ್ಲಿ ಓಕುಳಿಯಾಡುತ್ತ ಜನರನ್ನು ರಂಜಿಸಿದರು. ವಿಭಿನ್ನ ವೇಷ, ಪೋಷಾಕು ಧರಿಸಿದ್ದ ಯುವಕರು ನಟನೆ ಮಾಡುತ್ತಾ ಗಮನ ಸೆಳೆದರು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಮೊದಲ ದಿನ ಕೋಟೆನಗರಿ ರಂಗಿನಾಟ ನೋಡುಗರನ್ನು ಸೆಳೆಯಿತು.

ಬಣ್ಣದ ಬಂಡಿಗಳ ಸಮಾಗಮ:

2ನೇ ದಿನ ಶನಿವಾರ ಬಣ್ಣದ ರಂಗು ಮತ್ತಷ್ಟು ರಂಗು ಪಡೆಯಲಿದೆ. ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಬಣ್ಣದೋಕುಳಿ ನಡೆಯಲಿದೆ. ಓಣಿಗಳಲ್ಲಿ ಓಕುಳಿ ಆಡಿದ ನಂತರ ಬಣ್ಣದ ಬಂಡಿಗಳು ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದವರೆಗೆ ಎದುರು ಬದುರು ಸಮಾಗಮಗೊಳ್ಳಲಿವೆ.