ಸಾರಾಂಶ
ನವರಾತ್ರಿ ಪ್ರಯುಕ್ತ ನಡೆಯುವ ದಾಂಡಿಯಾ ನೃತ್ಯವು ತಾಲೂಕಿನಾದ್ಯಂತ ದಸರಾ ವೈಭವವನ್ನು ಹೆಚ್ಚಿಸಿದೆ. ನವರಾತ್ರಿಯ ಮೊದಲ ದಿನದಿಂದಲೇ ನಡೆಯುವ ದಾಂಡಿಯಾ ನೃತ್ಯವು ಒಂಬತ್ತು ದಿನಗಳ ಕಾಲ ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ನಡೆಯುತ್ತದೆ.
ಕನ್ನಡಪ್ರಭ ವಾರ್ತೆ ದಾಂಡೇಲಿ
ನವರಾತ್ರಿ ಪ್ರಯುಕ್ತ ನಡೆಯುವ ದಾಂಡಿಯಾ ನೃತ್ಯವು ತಾಲೂಕಿನಾದ್ಯಂತ ದಸರಾ ವೈಭವವನ್ನು ಹೆಚ್ಚಿಸಿದೆ. ನವರಾತ್ರಿಯ ಮೊದಲ ದಿನದಿಂದಲೇ ನಡೆಯುವ ದಾಂಡಿಯಾ ನೃತ್ಯವು ಒಂಬತ್ತು ದಿನಗಳ ಕಾಲ ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ನಡೆಯುತ್ತದೆ. ಪುರುಷರು, ಮಹಿಳೆಯರು, ಮಕ್ಕಳು, ಹೆಣ್ಣು ಮಕ್ಕಳು ಸೇರಿದಂತೆ ಈ ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.ಡಿ.ಎಫ್.ಎಸ್.ಎ ದಲ್ಲಿರುವ ದುರ್ಗಾ ದೇವಿಯ ಮಂದಿರದಲ್ಲಿ ಮೊದಲು ದಾಂಡಿಯಾ ನೃತ್ಯ ಪ್ರಾರಂಭಗೊಂಡಿತ್ತು. ಸುಮಾರ ೬ ದಶಕಗಳಿಂದ ನಡೆಯುತ್ತಿದೆ. ನಂತರ ದಾಂಡೇಲಿ ಕಾಗದ ಕಾರ್ಖಾನೆಯ ಬಂಗೂರ ನಗರ ಪ್ರದೇಶದಲ್ಲಿ ದಾಂಡಿಯಾ ನೃತ್ಯ ನಡೆಯಲಾರಂಭಿಸಿತು. ಸದ್ಯದ ಮಟ್ಟಿಗೆ ದಾಂಡಿಯಾ ನೃತ್ಯ ದಾಂಡೇಲಿಯದ್ದೆ ಎನ್ನುವಷ್ಟು ಚಿರಪರಿಚಿತವಾಗಿದೆ.
ಅದೇನೆ ಇರಲಿ ದಾಂಡೇಲಿಯಲ್ಲಿ ಎಲ್ಲ ಧರ್ಮದ ಜನರನ್ನು ಒಳಗೊಂಡು ನಡೆಯುವ ದಾಂಡಿಯಾ ನೃತ್ಯವನ್ನು ನೋಡಿ, ಅದರಲ್ಲಿ ಪಾಲ್ಗೊಂಡು ಪುನೀತರಾಗುವುದೇ ಒಂದು ವಿಶೇಷವಾಗಿದೆ.ಕಳೆದ ನಾಲ್ಕು ವರ್ಷದಿಂದ ನಗರದ ಹಳೆ ನಗರಸಭೆ ಮೈದಾನದಲ್ಲಿ ತಾಯಿ ದುರ್ಗಾ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ 9 ದಿನಗಳ ಕಾಲ ನಡೆಯುವ ದಾಂಡಿಯಾ ನೃತ್ಯದಲ್ಲಿ ನೂರಾರು ಜನರು ವೃತ್ತಾಕಾರದಲ್ಲಿ ಹೆಜ್ಜೆ ಹಾಕುವುದನ್ನು ನೋಡಲು ಸಾವಿರಾರು ಜನ ಜಮಾಯಿಸುತ್ತಾರೆ. ದೇವಿ ಪ್ರತಿಮೆಗೆ ಸಂಜೆ ವೇಳೆಗೆ ಪೂಜೆ ಸಲ್ಲಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಎಲ್ಲರೂ ಸೇರಿಕೊಂಡು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ದೈವೀ ಕತೆಯನ್ನು ಸಂಭ್ರಮಿಸುತ್ತಾರೆ ಎಂದು ಹೇಳುತ್ತಾರೆ ದುರ್ಗಾ ಉತ್ಸವ ಸಮಿತಿ ಅಧ್ಯಕ್ಷ ಟಿ.ಎಸ್. ಬಾಲಮಣಿ.
ಗ್ರಾಮೀಣ ಹಾಗೂ ನಗರ ಭಾಗ ಸೇರಿದಂತೆ ಸುಮಾರು ೨೫ ಕಡೆಗಳಲ್ಲಿ ದಾಂಡಿಯಾ ಸಮಿತಿಗಳು ಈ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ರಾಜ್ಯ ಸರ್ಕಾರ ನಿರ್ದೇಶನದಂತೆ ದಾಂಡಿಯಾ ಸಮಿತಿಗಳಿಗೆ ಅನುಮತಿ ನೀಡಲಾಗಿದೆ. ರಾತ್ರಿ ೧೦ ಗಂಟೆ ವರೆಗೆ ಅವಕಾಶ ನೀಡಲಾಗಿದ್ದು, ಅತಿಯಾದ ಧ್ವನಿ ವರ್ಧಕ ಬಳಕೆಗೆ ಕಡಿವಾಣ ಹಾಕಲಾಗಿದೆ ಹಾಗೂ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ನಗರ ಠಾಣೆ ಪಿಎಸ್‌ಐ ಕಿರಣ ಪಾಟೀಲ ಮಾಹಿತಿ ನೀಡಿದರು.