ಸಾರಾಂಶ
2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 84.99ರಷ್ಟು ಫಲಿತಾಂಶ ಬಂದಿದೆ. ರಾಜ್ಯದಲ್ಲಿ 14ಸ್ಥಾನ ಗಳಿಸಿದೆ.
ಚಾಮರಾಜನಗರ : 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 84.99ರಷ್ಟು ಫಲಿತಾಂಶ ಬಂದಿದೆ. ರಾಜ್ಯದಲ್ಲಿ 14ಸ್ಥಾನ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಶೇ 81.92ರಷ್ಟು ಫಲಿತಾಂಶ ದಾಖಲಿಸಿ, ರಾಜ್ಯದಲ್ಲಿ 12ನೇ ಸ್ಥಾನ ಗಳಿಸಿತ್ತು.6,342 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 5,390 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ಬಾಲಕಿಯರ ಸಂಖ್ಯೆ 3970 ಇದ್ದು, ಇದರಲ್ಲಿ ಉತ್ತೀರ್ಣಗೊಂಡವರ ಸಂಖ್ಯೆ 3355 ಆಗಿದೆ. ಶೇ. 84.51 ಆಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ಬಾಲಕರ ಸಂಖ್ಯೆ 3136 ಆಗಿದ್ದು, ಇವರಲ್ಲಿ ಉತ್ತೀರ್ಣಗೊಂಡವರ ಸಂಖ್ಯೆ 2366, ಶೇ. 75.45 ಇದೆ.
ವಾಣಿಜ್ಯ ವಿಭಾಗದಲ್ಲಿ 2216 ವಿದ್ಯಾರ್ಥಿಗಳ ಪೈಕಿ 1932 ಉತ್ತೀರ್ಣಗೊಂಡಿದ್ದು, ಶೇ. 87.18 ಮಂದಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 2163 ಮಂದಿಯ ಪೈಕಿ 1707 ಮಂದಿ ಉತ್ತೀರ್ಣರಾಗಿದ್ದು ಶೇ. 78.92 ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 1963 ಮಂದಿಯ ಪೈಕಿ 1751 ಮಂದಿ ಉತ್ತೀರ್ಣರಾಗಿದ್ದು, ಶೇ. 89.02 ರಷ್ಟು ಫಲಿತಾಂಶ ಬಂದಿದೆ.ಈ ಮೂಲಕ ವಿಜ್ಞಾನ ವಿಭಾಗ ಪ್ರಥಮ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗ ಎರಡು ಹಾಗೂ ಕಲಾ ವಿಭಾಗ ಮೂರನೇ ಸ್ಥಾನ ಪಡೆದಿದೆ.
ನಗರ ಪ್ರದೇಶದವರೇ ಮೇಲುಗೈ:
ಈ ಬಾರಿ ನಗರ ಪ್ರದೇಶದಲ್ಲಿ 4650 ವಿದ್ಯಾರ್ಥಿಗಳಲ್ಲಿ 3977 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.85.53 ಫಲಿತಾಂಶ ಪಡೆದಿದ್ದಾರೆ. ಗ್ರಾಮೀಣ ಭಾಗದ 1692 ವಿದ್ಯಾರ್ಥಿಗಳಲ್ಲಿ 1413 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಶೇ. 83.51 ರಷ್ಟು ಫಲಿತಾಂಶ ಪಡೆದಿದ್ದಾರೆ.ಈ ಮೂಲಕ ನಗರ ಪ್ರದೇಶದ ಮಕ್ಕಳೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 3 ಟಾಪರ್ಸ್‌ವಾಣಿಜ್ಯ ವಿಭಾಗದಲ್ಲಿ ಒಂದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುವುದು ವಿಶೇಷ. ಮೂವರಿಗೂ ಸಮಾನ ಅಂಕಗಳು ಬಂದಿವೆ. ಚಾಮರಾಜನಗರದ ಬ್ರೈಟ್ ಕಾಲೇಜಿನ ರೋಹಿತ್ ಪ್ರಸಾದ್ 589 ಅಂಕ ಶೇ.98.16 ಅದೇ ಕಾಲೇಜಿನ ದೀಕ್ಷಿತ್ ದರ್ಶಿನಿ 589 ಅಂಕ, ಶೇ. 98.16 ಹಾಗೂ ದೀಪಿಕಾ ಎನ್. 589 ಅಂಕ, ಶೇ. 98.16 (ಮೂವರು ಪ್ರಥಮ). ಕೊಳ್ಳೇಗಾಲ ನಿಸರ್ಗ ಕಾಲೇಜಿನ ಬಿ.ಭಾವನಾ, ಅದೇ ಕಾಲೇಜಿನ ಎಸ್. ಭವಾನಿ ತಲಾ 586 ಅಂಕ, ಶೇ. 97.66 ಹಾಗೂ ಗುಂಡ್ಲುಪೇಟೆ ಜೆಎಸ್‌ಎಸ್ ಕಾಲೇಜಿನ ಡಿ.ಎಸ್. ರಂಜಿತಾ 585 ಅಂಕ, ಶೇ. 97.50.
ವಿಜ್ಞಾನ ವಿಭಾಗ: ಚಾ.ನಗರದ ಜೆಎಸ್‌ಎಸ್ ಕಾಲೇಜಿನ ಎಸ್.ನಿಶ್ಚಿತಾ 588 ಶೇ. 98 ಅಂಕ, ಕೊಳ್ಳೇಗಾಲ ನಿಸರ್ಗ ಕಾಲೇಜಿನ ಸಿ.ಅನು 587, ಶೇ.97.83 ಅಂಕ, ಕೊಳ್ಳೇಗಾಲ ವಾಸವಿ ಕಾಲೇಜಿನ ಎಸ್.ಭಾವನಾ 585, ಶೇ. 97.50 ಅಂಕ ಪಡೆದಿದ್ದಾರೆ.
ಕಲಾ ವಿಭಾಗ: ಗುಂಡ್ಲುಪೇಟೆ ತಾಲೂಕು ಬೇಗೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಕೂಲಿ ಕಾರ್ಮಿಕನ ಪುತ್ರಿ ಮಹಾದೇವಿ 591, ಶೇ. 98.50 ಅಂಕಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಕೊಳ್ಳೇಗಾಲ ನಿಸರ್ಗ ಕಾಲೇಜಿನ ಎಲ್. ಐಶ್ವರ್ಯ 588, ಶೇ. 98 ಹಾಗೂ ಕೊಳ್ಳೇಗಾಲ ಎಸ್‌ವಿಕೆ ಕಾಲೇಜಿನ ಬಿ.ಎನ್. ಸುಜಾತಾ 580, ಶೇ. 96.66 ಅಂಕಗಳನ್ನು ಪಡೆದಿದ್ದಾರೆ.
3 ಕಾಲೇಜುಗಳಿಗೆ 100 ರಷ್ಟು ಫಲಿತಾಂಶ ಜಿಲ್ಲೆಯಲ್ಲಿ ಚಾ.ನಗರದ ಬ್ರೈಟ್ ಪದವಿ ಪೂರ್ವ ಕಾಲೇಜು ಹಾಗೂ ಹನೂರು ತಾಲೂಕಿನ ಕಾಮಗೆರೆ ಗ್ರಾಮದ ಸೇಂಟ್ ಮಾರ್ಗರೇಟ್ ಪದವಿ ಪೂರ್ವ ಕಾಲೇಜು ಹಾಗೂ ಕೊಳ್ಳೇಗಾಲದ ವಿಶ್ವ ಚೇತನ ಪದವಿ ಪೂರ್ವ ಕಾಲೇಜುಗಳು ಶೇ. 100 ರಷ್ಟು ಲಿತಾಂಶವನ್ನು ಪಡೆದಿವೆ. ಸರ್ಕಾರಿ ಕಾಲೇಜುಗಳ ಪೈಕಿ ಬಂಡಳ್ಳಿ ಪದವಿ ಪೂರ್ವ ಕಾಲೇಜು ಶೇ. 96.55 ರಷ್ಟು ಫಲಿತಾಂಶ ಪಡೆದಿದೆ.