ಸಾರಾಂಶ
ಸಿ.ಕೆ. ನಾಗರಾಜ
ಮರಿಯಮ್ಮನಹಳ್ಳಿ: ಇಲ್ಲಿಗೆ ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ಹರಿಯುತ್ತಿರುವ ಹಳ್ಳದ ನೀರಿನಲ್ಲೇ ಮೃತದೇಹ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ನೆರವೇರಿಸುವಂತಹ ಸ್ಥಿತಿ ಈಗಲೂ ಇದೆ.ಇನ್ನು ಗ್ರಾಮದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಸ್ಮಶಾನಕ್ಕೆ ಅನೇಕ ವರ್ಷಗಳಿಂದ ಸರಿಯಾದ ದಾರಿಯೇ ಇಲ್ಲ. ಹೀಗಾಗಿ ಈ ಊರಿನಲ್ಲಿ ಗ್ರಾಮಸ್ಥರು ಯಾರಾದರೂ ಸತ್ತರೆ ಸಾವಿನ ಶೋಕದ ಜತೆಗೆ ಸ್ಮಶಾನಕ್ಕೆ ಹೆಣ ಸಾಗಿಸುವ ಕಷ್ಟವೂ ಬಾಧಿಸುತ್ತದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಕೆಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೆಣ ಹೂಳುವುದಕ್ಕೂ ಹೆಣಗಾಡುವ ಸ್ಥಿತಿ ಜಿ. ನಾಗಲಾಪುರ ಗ್ರಾಮದಲ್ಲಿ ನಿರ್ಮಾಣವಾಗಿದೆ. ಕಳೆದ ಶುಕ್ರವಾರ ಗ್ರಾಮದಲ್ಲಿ ಒಬ್ಬರು ತೀರಿಕೊಂಡಾಗ ಹಳ್ಳ ವಿಪರೀತಿ ತುಂಬಿ ಹರಿಯುತ್ತಿತ್ತು. ಸಂಜೆಯವರೆಗೂ ಕಾದು ಹಳ್ಳದ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾದ ಮೇಲೆ ಹಳ್ಳ ದಾಟಿಕೊಂಡೇ ಹೋಗಿ ಶವಸಂಸ್ಕಾರ ನೆರವೇರಿಸಿದರು.ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲ. ಮಳೆ ಬಂದರೆ ಸಾಕು ಹಳ್ಳದಲ್ಲಿ ಸಾಕಷ್ಟು ನೀರು ಹರಿಯುತ್ತದೆ. ಹರಿಯುವ ಹಳ್ಳದಲ್ಲೇ ಹೆಣ ಹೊತ್ತು ಸಾಗಬೇಕು. ನೀರಿನ ರಭಸ ಹೆಚ್ಚಾದರೆ ಕೊಚ್ಚಿಹೋಗುವ ಭಯ ಕಾಡುತ್ತದೆ. ಇದು ಮಳೆಗಾಲದಲ್ಲಿ ಜಿ. ನಾಗಲಾಪುರ ಗ್ರಾಮಸ್ಥರು ಅನುಭವಿಸುವಂತಹ ಯಾತನೆಯಾಗಿದೆ ಎನ್ನುತ್ತಾರೆ ಸ್ಥಳೀಯರಾದ ಎಂ. ಕಣಿಮೆಪ್ಪ.
ಅನೇಕ ವರ್ಷಗಳಿಂದ ಸ್ಮಶಾನಕ್ಕೆ ಸಮರ್ಪಕ ರಸ್ತೆ ಇಲ್ಲದೇ ಹಳ್ಳದಲ್ಲೇ ಸಾಗಬೇಕಾಗಿದೆ. ಸ್ಮಶಾನದ ರಸ್ತೆ ಅಭಿವೃದ್ಧಿ ಪಡಿಸುವಂತೆ ಮತ್ತು ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಗ್ರಾಮಸ್ಥರ ಮನವಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ಎಚ್. ಲಕ್ಷ್ಮಣ.ಜಿ. ನಾಗಲಾಪುರದಲ್ಲಿ ಸ್ಮಶಾನಕ್ಕೆ ಸರಿಯಾದ ದಾರಿ ಇಲ್ಲದೇ ಅನೇಕ ವರ್ಷಗಳಿಂದ ಸಮಸ್ಯೆ ಮುಂದುವರಿದಿದೆ. ಸ್ಮಶಾನಕ್ಕೆ ಹೋಗಬೇಕಾದರೆ ಹಳ್ಳದಲ್ಲಿ ಎದೆವರೆಗಿನ ನೀರಿನಲ್ಲಿ ಶವ ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ಇದೆ. ಹಳ್ಳಕ್ಕೆ ಸೇತುವೆ ನಿರ್ಮಿಸುವ ಮೂಲಕ ಈ ಸಮಸ್ಯೆ ಬಗೆಹರಿಸಲು ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಗಳು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಜಿ.ಸತೀಶ್.