ಹಂಪಿಯಲ್ಲಿ ಮರಗಳ ಮಾರಣಹೋಮ!

| Published : Feb 28 2024, 02:30 AM IST

ಸಾರಾಂಶ

ಮರಗಳನ್ನು ಬೆಳೆಸಿ ಹಂಪಿಯಲ್ಲಿ ಸ್ಮಾರಕಗಳ ಜತೆಗೆ ಪರಿಸರ ಸಂರಕ್ಷಣೆ ಮಾಡಬೇಕಾದ ಕೇಂದ್ರ ಪುರಾತತ್ವ ಇಲಾಖೆಯೇ ಸಿಬ್ಬಂದಿಯನ್ನು ಬಳಸಿ ಮರಗಳನ್ನು ಕಡಿದು ಹಾಕಿದೆ.

ಹೊಸಪೇಟೆ: ಹಂಪಿಯಲ್ಲಿ ಪ್ರವಾಸಿಗರು ನೆರಳಿಲ್ಲದೇ ಬಿರುಬಿಸಿಲಿನಲ್ಲಿ ಪರಿತಪಿಸುತ್ತಿದ್ದರೆ, ಇತ್ತ ಪುರಾತತ್ವ ಇಲಾಖೆಯೇ ನೆಲಸ್ತರದ ಶಿವ ದೇವಾಲಯದ ಬಳಿಯ ಪ್ರದೇಶದಲ್ಲಿ ಬೆಳೆದು ನಿಂತಿರುವ ಹತ್ತಾರು ಮರಗಳನ್ನು ನೆಲಕ್ಕುರುಳಿಸಿದೆ. ಮರಗಳಿಗೆ ಕೊಡಲಿ ಪೆಟ್ಟು ನೀಡಲಾಗುತ್ತಿದ್ದು, ಪರಿಸರಪ್ರೇಮಿಗಳು ಆತಂಕಗೊಂಡಿದ್ದಾರೆ.

ಈ ಮರಗಳನ್ನು ಬೆಳೆಸಿ ಹಂಪಿಯಲ್ಲಿ ಸ್ಮಾರಕಗಳ ಜತೆಗೆ ಪರಿಸರ ಸಂರಕ್ಷಣೆ ಮಾಡಬೇಕಾದ ಕೇಂದ್ರ ಪುರಾತತ್ವ ಇಲಾಖೆಯೇ ಸಿಬ್ಬಂದಿಯನ್ನು ಬಳಸಿ ಮರಗಳನ್ನು ಕಡಿದು ಹಾಕಿದೆ. ಇಲಾಖೆಯ ಈ ನಡೆ ಪರಿಸರಪ್ರಿಯರ ಕೆಂಗಣ್ಣಿಗೂ ಗುರಿಯಾಗಿದೆ.

ಹಂಪಿ ಪ್ರವಾಸಕ್ಕೆ ಬರುವ ಶಾಲಾ- ಕಾಲೇಜು ಮಕ್ಕಳು ದಣಿವಾರಿಸಿಕೊಳ್ಳಲು ಮರಗಳು ಆಸರೆಯಾಗಲಿವೆ. ಆದರೂ ಇಲಾಖೆ ಮಾತ್ರ ತಾನು ಮಾಡಿದ್ದೇ ಶಾಸನ ಎಂಬಂತೆ ಮರಗಳನ್ನು ಉರುಳಿಸಿದೆ. ಹಂಪಿಯಲ್ಲಿ ಮರಗಳನ್ನು ಉರುಳಿಸುವ ಕೆಲಸ ಮಾಡಿರುವ ಅಧಿಕಾರಿಗಳು ಅಲ್ಲಿ ಸಸಿಗಳನ್ನು ಕೂಡ ನೆಟ್ಟಿಲ್ಲ. ಒಂದು ಮರ ಕಡಿದರೆ ಎರಡು ಸಸಿಗಳನ್ನುನೆಡಬೇಕು ಎಂಬುದು ಅರಣ್ಯ ಇಲಾಖೆಯ ನಿಯಮವಾಗಿದೆ. ಆದರೂ ಪುರಾತತ್ವ ಇಲಾಖೆಯಿಂದ ಇದುವರೆಗೆ ಈ ಕಾರ್ಯ ಮಾಡಲಾಗಿಲ್ಲ.

ಹಂಪಿಯಲ್ಲಿ ಮರಗಳನ್ನು ಕಡಿದು ಹಾಕಿರುವುದರಿಂದ ಸ್ಮಾರಕಗಳ ಬಳಿ ಬೆಳೆದು ನಿಂತಿರುವ ಮರಗಳನ್ನು ಕಡಿದು ಹಾಕುತ್ತಾರೆಯೇ? ಎಂಬ ಆತಂಕ ಪರಿಸರಪ್ರೇಮಿಗಳನ್ನು ಕಾಡುತ್ತಿದೆ. ಹಂಪಿಯ ಐತಿಹಾಸಿಕ ಸ್ಮಾರಕಗಳ ಜತೆಗೆ ಬೆಳೆದು ನಿಂತಿರುವ ಈ ಮರಗಳನ್ನು ಕೂಡ ಕಾಪಾಡಬೇಕಿದೆ. ಆದರೆ. ಇಲಾಖೆ ಮಾತ್ರ ಮರಗಳಿಗೆ ಕೊಡಲಿಪೆಟ್ಟು ನೀಡುತ್ತಿದೆ.

ಈ ಹಿಂದೆ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಹಿಂಬದಿಯಲ್ಲಿ ಮರಗಳನ್ನು ಪರಿಶೀಲಿಸಿದ ತಜ್ಞರ ತಂಡ ಈ ಮರಗಳು ಕೂಡ ಐತಿಹಾಸಿಕವಾಗಿವೆ. ಈ ಮರಗಳು ನೂರಾರು ವರ್ಷಗಳ ಹಳೆಯದ್ದಾಗಿವೆ ಎಂದು ಹೇಳಿದ್ದರು. ಆದರೆ ಈಗ ನೆಲಸ್ತರದ ಶಿವಾಲಯದ ಬಳಿ ಮರಗಳಿಗೆ ಕೊಡಲಿಪೆಟ್ಟು ನೀಡಲಾಗಿದ್ದು, ಇದೇ ರೀತಿ ಹಂಪಿಯ ಉಳಿದೆಡೆ ಮರಗಳಿಗೂ ಕೊಡಲಿಪೆಟ್ಟು ನೀಡಿದರೆ ಏನು ಮಾಡುವುದು. ಈ ಬಗ್ಗೆ ಸಂಬಂಧಿಸಿದ ಇಲಾಖೆ ಕ್ರಮವಹಿಸಲಿ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರು ಕನ್ನಡಪ್ರಭಕ್ಕೆ ತಿಳಿಸಿದರು.