ಬದುಕು ಕೊಟ್ಟ ತಾಯಿ ಋಣ ತೀರಿಸಲಾಗದು

| Published : May 16 2025, 01:59 AM IST

ಸಾರಾಂಶ

ಶಿಕ್ಷಣದ ಜೊತೆಗೆ ನೈತಿಕತೆ ಹಾಗೂ ಮಾನವೀಯತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಈ ಭೂಮಿಯನ್ನು ಪ್ರಥಮದಲ್ಲಿ ಪರಿಚಯಿಸಿ ಸುಂದರ ಬದುಕು ಕಲ್ಪಿಸಿ ಕೊಟ್ಟ ತಾಯಿಯ ಋಣ ತೀರಿಸಲಾಗದು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ನಗರದ ಚಾಂದ್ ನದಾಫ್ ಅವರ ಚಾಂದ್ ಫೌಂಡೇಶನ್ ಅಡಿಯಲ್ಲಿ ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಹೆತ್ತ ತಾಯಿ ಗೌರವಿಸೋಣ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ತೀರ್ಥಯಾತ್ರೆ, ದೇವಸ್ಥಾನಗಳಿಗೆ ಭೇಟಿ ನೀಡುವುದು, ಶಾಸ್ತ್ರ, ಪುರಾಣ, ವ್ರತ ಮಾಡುವ ಬದಲು ತಮ್ಮ ತಂದೆ-ತಾಯಿಯರಲ್ಲಿ ದೇವರನ್ನು ಕಾಣಬೇಕು ಎಂದರು .

ತಂದೆ-ತಾಯಿ ಗೌರವಿಸುವುದನ್ನು ಬರೀ ಭಾಷಣದಲ್ಲಿ ಹೇಳದೆ ನಾನು ಸ್ವತಃ ನಮ್ಮ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಂದೆ-ತಾಯಿ ಮಂದಿರ ಕಟ್ಟಿಸಿದ್ದೇನೆ. ನಿಮ್ಮನ್ನು ಹೆತ್ತವರ ಮಂದಿರ ಎಂದು ಹೆಸರಿಟ್ಟಿದ್ದೇನೆ. ಅಲ್ಲದೆ ಇಲ್ಲಿಗೆ ಬರುವ ಪ್ರತಿಯೊಬ್ಬ ರೋಗಿಯು ಶಸ್ತ್ರಚಿಕಿತ್ಸೆ ಅಥವಾ ಮುಂತಾದ ಪರೀಕ್ಷೆಗೆ ಒಳಪಡುವಾಗ ನಿಮ್ಮ ತಂದೆ-ತಾಯಿಯರ ಸ್ಮರಿಸಿ ಮುಂದೆ ಸಾಗಿ ಎಂಬುದು ನನ್ನ ತತ್ವ. ಆದ್ದರಿಂದ ಶಿಕ್ಷಣದ ಜೊತೆಗೆ ನೈತಿಕತೆ ಹಾಗೂ ಮಾನವಿಯತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ವಿದ್ಯಾವಂತನಲ್ಲದ ಚಾಂದ ತಮ್ಮ-ತಾಯಿಯರೊಂದಿಗೆ ಇತರ ತಾಯಿಯರನ್ನು ಗೌರವಿಸುತ್ತಿರುವುದು ಸಂತಸದ ವಿಷಯ ಎಂದರು.

ಅನುವಾಲ್ ಬೆಟ್ಟದ ಪೂಜ್ಯ ಕೈಲಾಸ ಪತಿ ಶ್ರೀಗಳು ಮಾತನಾಡಿ, ತಂದೆ-ತಾಯಿ ಇದ್ದಾಗ ಅವರನ್ನು ಉಪವಾಸ ಕೆಡವಿ ಸತ್ತ ಮೇಲೆ ಭರ್ಜರಿ ಕಾರ್ಯಕ್ರಮ ಮಾಡುವವರು ಇಂದು ಹೆಚ್ಚಾಗಿದ್ದಾರೆ. ಸತ್ತಾಗ ಹಣ ಖರ್ಚು ಮಾಡದೆ ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಬೇಕು ಎಂದರು. ನಗರದ ಚರ್ಮರೋಗ ತಜ್ಞೆ ಮದರ್ ಕರ್ ಮಾತನಾಡಿ, ಎಂದು ಹೆಣ್ಣಿಗೆ ಗೌರವವಿಲ್ಲದಂತಾಗಿದ್ದು. ಎಲ್ಲರೂ ಗಂಡು ಮಕ್ಕಳನ್ನು ಬಯಸುತ್ತಾರೆ. ಆದ್ದರಿಂದ ಇಂದು ಗಂಡಿನ ಸಂಖ್ಯೆ ಹೆಚ್ಚಾಗಿದ್ದು ಹೆಣ್ಣಿನ ಸಂತತಿ ಕಡಿಮೆಯಾಗಿದೆ ಎಂದರು.

ನಗರಸಭೆಯ ಅಧ್ಯಕ್ಷರು ಸವಿತಾ ಲಂಕಣ್ಣವರ್ ಮಾತನಾಡಿ, ಇಂದು ಕಲಿತವರು, ಸುಧಾರಿಸಿದವರು, ಸಿರಿವಂತರು ತಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿದ್ದಾರೆ. ಅಂತವರಲ್ಲಿ ಶಾಲೆಯನ್ನು ಕಲಿಯದ ಚಾಂದ ಅವರು ತಮ್ಮ ತಾಯಿ ಗೌರವಿಸುತ್ತಿರುವುದು ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾನೆ ಎಂದರು.

ಇದೇ ಸಂದರ್ಭದಲ್ಲಿ 40 ಜನ ಬಡ ಹೆಣ್ಣು ಮಕ್ಕಳನ್ನು ಗೌರವಿಸಲಾಯಿತು. ಈ ಬಾರಿ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅರಕೇರಿ ಮಠದ ಪೂಜ್ಯರು, ನದಾಫ್, ಎ.ಎ.ತಿಮ್ಮಾಪುರ್, ಸೈದೂಸಾಬ್ ಹೊಸಮನಿ, ಉಸ್ಮಾನ್ ಸಾಬ್ ಬೇವೂರ್, ಇಮಾಮ್ ಹುಸೇನ್, ಖಾಜಿ ಕೆಎಚ್ ಹುಬ್ಬಳ್ಳಿ ಇದ್ದರು.