ಮಣ್ಣಿನ ಆರೋಗ್ಯ ಕುಸಿತ ಆತಂಕಕಾರಿ : ಗಂಭೀರ ಅಪಾಯ

| Published : May 30 2024, 01:31 AM IST / Updated: May 30 2024, 09:25 AM IST

ಸಾರಾಂಶ

ಮಣ್ಣಿನ ಆರೋಗ್ಯದ ಸ್ಥಿತಿಯು ಆತಂಕಕಾರಿಯಾಗಿ ಕುಸಿಯುತ್ತಿರುವುದು ಕೃಷಿ ಪರಿಸರಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ। ಎಸ್‌.ವಿ.ಸುರೇಶ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು : ಮಣ್ಣಿನ ಆರೋಗ್ಯದ ಸ್ಥಿತಿಯು ಆತಂಕಕಾರಿಯಾಗಿ ಕುಸಿಯುತ್ತಿರುವುದು ಕೃಷಿ ಪರಿಸರಕ್ಕೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ। ಎಸ್‌.ವಿ.ಸುರೇಶ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಕೃಷಿ ವಿವಿಯಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಕಾಂಪೋಸ್ಟಿಂಗ್‌ ಮತ್ತು ಸಸ್ಯ ಆರೋಗ್ಯ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಆಹಾರ ಪದಾರ್ಥಕ್ಕಾಗಿ ವಿದೇಶಗಳನ್ನು ಅವಲಂಬಿಸಿದ್ದೆವು. ಬಳಿಕ ಡಾ.ಎಂ.ಎಸ್‌.ಸ್ವಾಮಿನಾಥನ್‌ ಅವರ ಮುಂದಾಳತ್ವದಲ್ಲಿ ಹಸಿರು ಕ್ರಾಂತಿಯಿಂದಾಗಿ ಆಹಾರ ಪದಾರ್ಥಗಳಲ್ಲಿ ಸ್ವಾವಲಂಬನೆ ಸಾಧಿಸಿದೆವು. ಆದರೆ ಹೆಚ್ಚಿನ ಪ್ರಮಾಣದ ರಾಸಾಯನಿಕ ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಕುಸಿಯುತ್ತಿದ್ದು ಪರಿಸರಕ್ಕೆ ಗಂಭೀರವಾದ ಅಪಾಯವನ್ನು ಉಂಟು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿಯಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಅರ್ಧದಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಂಡು ಶೇ.80 ರಷ್ಟು ಮಣ್ಣಿನ ಅವನತಿಯನ್ನು ಸಾವಯವ ವಸ್ತುಗಳ ಸಮರ್ಪಕ ಬಳಕೆಯಿಂದ ತಡೆಗಟ್ಟಬಹುದು. ಹವಾಮಾನ ಬದಲಾವಣೆಯಿಂದ ಭೂಮಿಯನ್ನು ರಕ್ಷಿಸಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಜನರಿಗೆ ಜಾಗೃತಿ ಮೂಡಿಸುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.

ಕೃಷಿ ವಿಸ್ತರಣಾ ವಿಭಾಗವು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ) ವಿದ್ಯಾರ್ಥಿ ಬಸವಲಿಂಗಪ್ಪ ನಾಯಕ್‍ ಅವರ ಛಾಯಾಚಿತ್ರ ಪ್ರಥಮ ಬಹುಮಾನಕ್ಕೆ ಭಾಜನವಾಯಿತು. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಅಂತಾರಾಷ್ಟ್ರೀಯ ಸಾವಯವ ಕೃಷಿ ಸಾಮರ್ಥ್ಯ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಮೆನನ್, ಮಂಡ್ಯದ ಪ್ರಗತಿಪರ ರೈತ ಶಿವಣ್ಣ, ವಿವಿ ಕುಲಸಚಿವ ಡಾ। ಬಸವೇಗೌಡ, ಕೃಷಿ ವಿಭಾಗದ ಮುಖ್ಯಸ್ಥ ಡಾ। ಎನ್.ಬಿ.ಪ್ರಕಾಶ್ ಉಪಸ್ಥಿತರಿದ್ದರು.