ಸಾರಾಂಶ
- ಮುಗಳಿಹಳ್ಳಿಯಲ್ಲಿ ಜೋಡೆತ್ತಿನ ಗಾಡಿ ಓಟ ಸ್ಪರ್ಧೆ । ಬಹುಮಾನ ವಿತರಣೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಇಂದಿನ ಆಧುನಿಕ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಷಿಹೋಗುತ್ತಿದ್ದು, ಅವನತಿ ಹಾದಿಯಲ್ಲಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಮುಗಳಿಹಳ್ಳಿ ಗ್ರಾಮದ ನವಕ್ರಾಂತಿ ಯುವಕ ಸಂಘದಿಂದ ರಾಜ್ಯಮಟ್ಟದ ಜೋಡು ಎತ್ತಿನ ಗಾಡಿಗಳ ಓಟ ಸ್ಪರ್ಧೆ ಆಯೋಜನೆ ಶ್ಲಾಘನೀಯವಾಗಿದೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ತಾಲೂಕಿನ ಮುಗಳಿಹಳ್ಳಿ ಗ್ರಾಮದಲ್ಲಿ ಗ್ರಾಮದ ನವಕ್ರಾಂತಿ ಯುವಕ ಸಂಘ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಜೋಡು ಎತ್ತಿನ ಗಾಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ಜೀವನಾಡಿ ಆಗಿರುವ ಎತ್ತುಗಳು ಬಳಕೆ ಪ್ರಸ್ತುತ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಕೃಷಿ ಬದುಕಿನ ಭಾಗವಾಗಿ ಎತ್ತುಗಳು ರೈತರ ಸಂಗಾತಿಗಳಾಗಿದ್ದವು. ಎತ್ತುಗಳಿಲ್ಲದೇ ಗಾಡಿಗಳ ಬಳಕೆ ಸಹ ಜನಮಾನಸದಿಂದ ಕಣ್ಮರೆಯಾಗುತ್ತಿವೆ ಎಂದರು.ಒಂದು ಕಾಲದಲ್ಲಿ ಜಾತ್ರೆ, ಹಬ್ಬ, ಮದುವೆ, ವೆರಣಿಗೆಯಂತಹ ಸಂದರ್ಭದಲ್ಲಿ ಎತ್ತಿನ ಗಾಡಿಗಳನ್ನು ಬಳಸುತ್ತಿದ್ದೆವು. ಇಂದು ಎತ್ತಿನ ಗಾಡಿ ಇರಲಿ, ಎತ್ತುಗಳನ್ನೇ ಸಾಕುವುದು ಕೃಷಿ ಜೀವನದಲ್ಲಿ ಮರೆಯಾಗುತ್ತಿದೆ. ಇದು ವಿಷಾದನೀಯ ಸಂಗತಿಯೂ ಹೌದು ಎಂದರು.
ಭಾರತ ದೇಶದ ಗ್ರಾಮೀಣ ಪ್ರದೇಶದ ಪ್ರತೀಕವಾಗಿದ್ದ ಎತ್ತಿನ ಬಂಡಿಗಳನ್ನು ಈಗ ಚಿತ್ರಗಳಲ್ಲಿ ನೋಡುವಂತಹ ಕಾಲ ಬಂದೊದಗಿದೆ. ಅಳಿವಿನ ಅಂಚಿನಲ್ಲಿರುವ ಎತ್ತಿನ ಬಂಡಿಗಳ ಓಟದ ಸ್ಪರ್ಧೆ ಏರ್ಪಡಿಸಿರುವ ಮುಗಳಿಹಳ್ಳಿ ಗ್ರಾಮದ ಯುವಕರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಸ್ಪರ್ಧೆಯಲ್ಲಿ ನಾಡಿನ ವಿವಿಧ ಭಾಗದಿಂದ ಸುಮಾರು 40 ಎತ್ತಿನ ಬಂಡಿಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಸಾಣೇಹಳ್ಳಿಯ ಶೌರ್ಯ ರವಿಕುಮಾರ್ ಪ್ರಥಮ ಬಹುಮಾನವಾಗಿ ₹1 ಲಕ್ಷ ನಗದು ಪಡೆದರೆ, 2ನೇ ಬಹುಮಾನವನ್ನು ತರೀಕೆರೆ ತಾಲೂಕಿನ ಡಣಾಯಕಪುರದ ನವೀನ್ ₹75 ಸಾವಿರ ನಗದು ಬಹುಮಾನ ಪಡೆದರು. ಮೂರನೇ ಬಹುಮಾನವನ್ನು ಚಿಕ್ಕಮಗಳೂರು ಜಿಲ್ಲೆಯ ನೀರೊಳೆ ಗ್ರಾಮದ ಹರೀಶ್ ₹50 ಸಾವಿರ ನಗದು ಮತ್ತು ನಾಲ್ಕನೇ ಬಹುಮಾನವಾಗಿ ಚಿಕ್ಕಮಗಳೂರು ಜಿಲ್ಲೆಯ ಕ್ಯಾತನಬೀಡು ಗ್ರಾಮದ ಸ್ವಾಮಿ ಅವರು ₹25 ಸಾವಿರ ನಗದನ್ನು ಪಡೆದರು.
ಎತ್ತಿನ ಬಂಡಿ ಓಟದ ಸ್ಪರ್ಧೆಯನ್ನು ಗ್ರಾಮದ ಮುಖಂಡ ಎಂ.ಜಿ.ಶಾಂತವೀರಪ್ಪ ನೆರವೇರಿಸಿದರು. ಅಧ್ಯಕ್ಷತೆಯನ್ನು ತಾವರೆಕೆರೆ ಗ್ರಾಪಂ ಅಧ್ಯಕ್ಷೆ ಮಂಜುಳಾ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯ ಡಾ.ಧನಂಜಯಸರ್ಜಿ, ತುಮ್ಕೋಸ್ ನಿರ್ದೇಶಕ ಜಿ.ಎಸ್.ಶಿವಕುಮಾರ್, ತಿಪ್ಪಣ್ಣ, ಸರ್ಜಿ ರಮೇಶ್, ಲಿಂಗರಾಜ್, ರುದ್ರೇಶ್, ಮಧುಸೂದನ್, ರಮೇಶ್, ಧನಂಜಯ, ನವಕ್ರಾಂತಿ ಯುವಕ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
- - --24ಕೆಸಿಎನ್ಜಿ4: ಸ್ಫರ್ಧೆಯಲ್ಲಿ ಗೆಲುವಿಗಾಗಿ ಎತ್ತಿನ ಬಂಡಿಗಳ ಓಟದ ದೃಶ್ಯ.-24ಕೆಸಿಎನ್ಜಿ3.ಜೆಪಿಜಿ:
ಚನ್ನಗಿರಿ ತಾಲೂಕಿನ ಮುಗಳಿಹಳ್ಳಿಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಎತ್ತಿನ ಬಂಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿದರು.