ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಹೊಸ ಆವಿಷ್ಕಾರ, ತಂತ್ರಜ್ಞಾನಗಳು ಮುಂದುವರಿದಿದ್ದರೂ ಸಹ ಇಂದಿಗೂ ರಕ್ತವನ್ನು ಕೃತಕವಾಗಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ.

ಹುಬ್ಬಳ್ಳಿ:

ರಕ್ತವು ಕೃತಕವಾಗಿ ಸಿಗುವ ವಸ್ತುವಲ್ಲ. ಅದು ಮನುಷ್ಯರ ದೇಹದಲ್ಲೇ ಉತ್ಪತ್ತಿಯಾಗುವ ನೈಜ ಸಂಪನ್ಮೂಲವಾಗಿದ್ದು, ರಕ್ತದಾನದಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದ ಆತ್ಮತೃಪ್ತಿ ಸಿಗಲಿದೆ ಎಂದು ಗದಗ ಜಿಲ್ಲೆ ಹೊಸಹಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.

ಅವರು 80ನೇ ಸ್ವಾತಂತ್ರೋತ್ಸವ ನಿಮಿತ್ತ ಬಾಲಾಜಿ ಆಸ್ಪತ್ರೆ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಗುರುವಾರ ನಗರದ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ಸತತ 14ನೇ ಬಾರಿಗೆ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಹೊಸ ಆವಿಷ್ಕಾರ, ತಂತ್ರಜ್ಞಾನಗಳು ಮುಂದುವರಿದಿದ್ದರೂ ಸಹ ಇಂದಿಗೂ ರಕ್ತವನ್ನು ಕೃತಕವಾಗಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ತುರ್ತು ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗುವ ರಕ್ತವನ್ನು ಮತ್ತೊಬ್ಬರಿಂದಲೇ ಪಡೆಯಬೇಕಿದ್ದು, ರಕ್ತದಾನದ ಮೂಲಕ ಪ್ರತಿಯೊಬ್ಬರು ತಮ್ಮ ಜೀವನವನ್ನು ಮತ್ತೊಬ್ಬರಿಗೆ ಸಮರ್ಪಿಸಿಕೊಳ್ಳಬೇಕು ಎಂದರು.

ಶಿಬಿರದ ನೇತೃತ್ವ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್‌ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ದೇಹದಲ್ಲಿನ ಐದಾರು ಲೀಟರ್ ರಕ್ತದ ಪೈಕಿ ಕೇವಲ 350 ಮಿ.ಲೀನಷ್ಟು ಮಾತ್ರವೇ ರಕ್ತ ಪಡೆಯುವುದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಕಾಡದು. ಬದಲಾದ ವೈದ್ಯಕೀಯ ತಂತ್ರಜ್ಞಾನದಲ್ಲಿ ಒಬ್ಬರಿಂದ ಪಡೆದ ರಕ್ತದಿಂದ ಮೂವರ ಜೀವಗಳನ್ನು ಉಳಿಸಬಹುದಾಗಿದ್ದು, ರಕ್ತದಾನ ಬಗೆಗಿನ ಜನರಲ್ಲಿನ ತಪ್ಪು ಕಲ್ಪನೆ, ಮೂಢನಂಬಿಕೆ ಹೋಗಲಾಡಿಸಿ ಪ್ರತಿಯೊಬ್ಬರೂ ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗುವಂತೆ ಮಾಡಲು ಈ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಮಾತನಾಡಿದರು. ಶಿಬಿರದಲ್ಲಿ 35ಕ್ಕೂ ಹೆಚ್ಚು ಜನ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಬಾಲಾಜಿ ಆಸ್ಪತ್ರೆ ವೈದ್ಯರು, ಶುಶ್ರುಷಕರು, ಇನ್ನಿತರೆ ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.