ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಕ್ಷರ ದಾಸೋಹ (ಬಿಸಿಯೂಟ) ಕಾರ್ಯಕರ್ತೆಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಸಿಪಿಐ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತೆಯರು ನಗರದ ಪ್ರಮುಖ ರಸ್ತೆಗಳ ಮೂಲಕ ಆಜಾದ್ ಪಾರ್ಕ್ ವೃತ್ತಕ್ಕೆ ತೆರಳಿ ಪ್ರತಿಭಟಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ 6ನೇ ಗ್ಯಾರಂಟಿಯಾಗಿ ಬಿಸಿಯೂಟ ಕಾರ್ಯಕರ್ತೆಯರಿಗೆ ₹6 ಸಾವಿರ ವೇತನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಈವರೆಗೆ ಬೇಡಿಕೆ ಈಡೇರಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸುಮಾರು 22 ವರ್ಷಗಳಿಂದ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಸಂಬಳಕ್ಕೆ ದುಡಿದ ಕಾರ್ಯಕರ್ತೆಯರನ್ನು ಮಕ್ಕಳ ಸಂಖ್ಯೆ ಕೊರತೆ ನೆಪವೊಡ್ಡಿ ಯಾವುದೇ ಪರಿಹಾರವಿಲ್ಲದೇ ಬೇಷರತ್ ಕೆಲಸದಿಂದ ಬಿಡುಗಡೆಗೊಳಿಸಲಾಗುತ್ತಿದೆ. ಶಾಲಾ ಕರ್ತವ್ಯದ ಅವಧಿಯಲ್ಲಿ ಅಪಘಾತ, ಅವಘಡಗಳು ಸಂಭವಿಸಿದರೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೆ ಹಲವಾರು ಜನ ಅಂಗವಿಕಲರಾಗಿದ್ದು ಮತ್ತು ಕೆಲವರು ಮರಣ ಹೊಂದಿದ್ದಾರೆ. ಇಷ್ಟೆಲ್ಲಾ ಆದರೂ ಈ ತಳಮಟ್ಟದ ಕಾರ್ಯಕರ್ತೆಯರಿಗೆ ಪಿಎಫ್, ಇಎಸ್‌ಐ ಹಾಗೂ ವಿಮಾ ಸೌಲಭ್ಯವಿಲ್ಲದೆ ಸರ್ಕಾರದಿಂದಲೇ ಮಹಿಳೆಯರನ್ನು ಶೋಷಿಸಲಾಗುತ್ತಿದೆ.ಹಲವಾರು ಶಾಲೆಗಳಲ್ಲಿ ಎಸ್‌ಡಿಎಂಸಿ ಮತ್ತು ಶಿಕ್ಷಕರು ಹಾಗೂ ಸ್ಥಳೀಯ ರಾಜಕೀಯ ಪುಡಾರಿಗಳ ದಬ್ಬಾಳಿಕೆಯಿಂದ ಹಲವಾರು ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ರೀತಿ ವಜಾಗೊಂಡ ಕಾರ್ಯಕರ್ತೆಯರು ಹತ್ತಾರು ವರ್ಷಗಳ ಕಾಲ ದುಡಿದಿದ್ದರೂ ಸಹ ಬಿಡಿಗಾಸು ನೀಡದೆ ಮನೆಗೆ ಕಳುಹಿಸಲಾಗುತ್ತಿದೆ.
ಪ್ರತಿ ತಿಂಗಳು ಸಂಬಳ ನೀಡುವಲ್ಲಿ ವಿಳಂಬವಾಗುತ್ತಿದೆ. ಕಾರ್ಯಕರ್ತೆಯರನ್ನು ಶಾಲಾ ಮಕ್ಕಳಿಗೆ ಹಾಲು ನೀಡುವುದು ಹಾಗೂ ಮೊಟ್ಟೆ ಬೇಯಿಸಿ ಸುಲಿದು ಕೊಡಲು ಸರ್ಕಾರ ಹಣ ನಿಗದಿ ಮಾಡಿದ್ದರೂ ಸಹ ಹಲವಾರು ಶಾಲೆಗಳಲ್ಲಿ ಈ ಹಣ ನೀಡುತ್ತಿಲ್ಲ. ಮೊಟ್ಟೆ ಸುಲಿದ ಹಣವನ್ನು ವರ್ಷಕ್ಕೊಮ್ಮೆ ನೀಡುವುದಾಗಿ ಹೇಳಿ ಪ್ರತಿ ತಿಂಗಳು ಹಣ ನೀಡದೆ ವಂಚಿಸುತ್ತಿದ್ದು ಕೆಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರು ಹಣ ಲಪಟಾಯಿಸಲು ಮಕ್ಕಳಿಗೆ ಚಿಕ್ಕಿ ತಿನಿಸನ್ನು ನೀಡಿ ಮೊಟ್ಟೆ ಸುಲಿಯುವ ಹಣವನ್ನು ಕಾರ್ಯಕರ್ತೆಯರಿಗೆ ನೀಡುತ್ತಿಲ್ಲ.ಅಪಘಾತದಲ್ಲಿ ಮೃತಪಟ್ಟರೆ ಒಂದು ಲಕ್ಷ ರು. ಹಾಗೂ ಗಾಯಗೊಂಡವರಿಗೆ ₹30 ಸಾವಿರ ವೈದ್ಯಕೀಯ ವೆಚ್ಚ ನೀಡಲು ಘೋಷಿಸಿದ್ದರೂ ಸ್ಥಳೀಯ ಅಧಿಕಾರಿಗಳು ವೆಚ್ಚ ನೀಡುವಲ್ಲಿ ವಿಫಲರಾಗಿದ್ದಾರೆ. ಸುಮಾರು 15ಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡಿ ನಿವೃತ್ತಿ ಹೊಂದುವವರಿಗೆ ₹40 ಸಾವಿರ, 5 ರಿಂದ 10 ವರ್ಷ ಕೆಲಸ ಮಾಡಿ ನಿವೃತ್ತಿ ಹೊಂದಿದವರಿಗೆ ₹30 ಸಾವಿರ ನೀಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಈ ಹಿಂದೆ ಕೆಲಸ ಮಾಡಿ ನಿವೃತ್ತಿಗೊಂಡವರಿಗೆ ಮತ್ತು ಮಕ್ಕಳ ಸಂಖ್ಯೆ ಕಡಿತಗೊಂಡು ಘೋಷಿತ ಅವಧಿ ಕೆಲಸ ಮಾಡಿ ಬಿಡುಗಡೆಯಾದವರಿಗೆ ಈ ಉಪದಾನ ಲಭ್ಯತೆ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿ ದಿನ ಬೆಳಗ್ಗೆ 9ರಿಂದ ಸಂಜೆ 4ರವರಿಗೆ ನಿರಂತರವಾಗಿ ಅಡುಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ತಿಂಗಳಿಗೆ ₹15 ಸಾವಿರ ವೇತನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಷನ್‌ನ ಜಿಲ್ಲಾಧ್ಯಕ್ಷ ಜಿ.ರಘು, ಪ್ರಧಾನ ಕಾರ್ಯದರ್ಶಿ ಎಸ್. ವಿಜಯಕುಮಾರ್, ಉಪಾಧ್ಯಕ್ಷ ಕಳಸಪ್ಪ, ತಾಲೂಕು ಅಧ್ಯಕ್ಷೆ ಇಂದುಮತಿ, ಕಡೂರು ತಾಲೂಕು ಅಧ್ಯಕ್ಷೆ ಲಕ್ಷ್ಮೀ, ಗೌರವಾಧ್ಯಕ್ಷೆ ಪುಷ್ಪಾವತಿ, ಉಪಾಧ್ಯಕ್ಷೆ ನಾಗಮಣಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.