ಸಾರಾಂಶ
ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ । ಶಾಸಕನ ವಿರುದ್ಧ ಆಕ್ರೋಶ
ಕನ್ನಡಪ್ರಭವಾರ್ತೆ ಚನ್ನಪಟ್ಟಣಒಬ್ಬ ಜನಪ್ರತಿನಿಧಿಯಾಗಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕುವ ಜತೆಗೆ ಜಾತಿನಿಂಧನೆ ಮಾಡಿರುವ ಬೆಂಗಳೂರಿನ ಆರ್.ಆರ್. ನಗರದ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ನಗರದ ಗಾಂಧಿಭವನದ ಮುಂದೆ ಜಮಾಯಿಸಿದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೆಂ-ಮೈ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಶಾಸಕ ಮುನಿರತ್ನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಮುನಿರತ್ನ ಗುತ್ತಿಗೆದಾರನ ಜತೆ ಮೊಬೈಲ್‌ನಲ್ಲಿ ಮಾತನಾಡುವ ವೇಳೆ ಲಂಚಕ್ಕಾಗಿ ಬೇಡಿಕೆ ಇಡುವ ಜತೆಗೆ ಒಕ್ಕಲಿಗ ಜನಾಂಗ ಮತ್ತು ದಲಿತ ಜನಾಂಗದ ಬಗ್ಗೆ ಜಾತಿ ನಿಂದನೆ ಮಾಡಿದ್ದಾರೆ. ಇದರ ಜತೆಗೆ ಮಹಿಳೆಯರ ಬಗ್ಗೆ ಅವಾಚ್ಯ ಪದ ಪ್ರಯೋಗ ಮಾಡಿರುವುದು ಖಂಡನೀಯ, ಇಂತಹ ಮನಸ್ಥಿತಿಯುಳ್ಳ ವ್ಯಕ್ತಿ ಶಾಸಕನಾಗಿರಲು ಆನರ್ಹನಾಗಿದ್ದು ಕೊಡಲೇ ಅವರನ್ನು ರಾಜ್ಯಪಾಲರು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ದಲಿತ ಮುಖಂಡ ಅಕ್ಕೂರು ಶೇಖರ್ ಮಾತನಾಡಿ, ಶಾಸಕನಾಗಿ ಆಯ್ಕೆಯಾಗುವ ಸಮಯದಲ್ಲಿ ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಪ್ರತಿಜ್ಞೆ ಸ್ವೀಕರಿಸಿರುವ ಮುನಿರತ್ನ ತಾನು ಯಾವ ಸ್ಥಾನದಲ್ಲಿದ್ದೇನೆ ಎಂಬುದನ್ನು ಅರಿಯದೆ ಇಂತಹ ಪದ ಬಳಕೆ ಮಾಡಿರುವುದು ಖಂಡನೀಯ. ಸಮಾಜದಲ್ಲಿ ಪ್ರತಿಯೊಂದು ಜಾತಿಗೂ ತನ್ನದೆ ಆದ ಘನತೆ ಇದೆ. ಅದನ್ನು ಅರಿಯದೆ ಈ ರೀತಿ ಮಾತನಾಡಿರುವ ಮುನಿರತ್ನರನ್ನು ಕೇವಲ ಬಂಧಿಸಿದರೆ ಮಾತ್ರ ಸಾಲದು ಆತನನ್ನು ಶಾಸಕ ಸ್ಥಾನದಿಂದ ಕಿತ್ತು ಹಾಕುವಂತೆ ರಾಜ್ಯಪಾಲರನ್ನು ಒತ್ತಾಯಿಸುವುದಾಗಿ ತಿಳಿಸಿದರು.ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ನಿಷೇದಾಜ್ಞೆ ಏರುತ್ತದೆ. ಆದರೆ ಒಬ್ಬ ಶಾಸಕ ತನ್ನ ಹಿತಿಮಿತಿಯನ್ನು ಮರೆತು ಬಾಯಿಗೆ ಬಂದಂತೆ ಮಾತನಾಡಿದರೂ ಕೇವಲ ಬಂಧನವೆಂಬ ನಾಟಕವಾಡುತ್ತದೆ. ಇದೆಲ್ಲವನ್ನು ನೋಡಿದಾಗ ದೇಶ ಮತ್ತು ರಾಜ್ಯ ಯಾವ ಕಡೆ ಸಾಗುತ್ತದೆ, ನಮ್ಮನ್ನು ಆಳುವವರ ಮನಸ್ಥಿತಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಅರಿಯಬಹುದಾಗಿದೆ. ಇಂತಹ ಘಟನೆಗಳು ಮರುಕಳಿಸದಿರಲು ನಾವು ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಬಂದಿದೆ ಎಂದರು.
ಪ್ರತಿಭಟನಾನಿರತರು ರಸ್ತೆಯಲ್ಲಿ ವಾಹನ ತಡೆಗೂ ಮುನ್ನ ಅಂಬೇಡ್ಕರ್ ಪತ್ರಿಮೆಗೆ ಮಾಲಾರ್ಪಣೆ ಮಾಡಿದರು. ಉಪ ತಹಸೀಲ್ದಾರ್ ಲಕ್ಷ್ಮಿದೇವಮ್ಮ ಸ್ಥಳಕ್ಕೆ ಆಗಮಿಸಿ ಪತ್ರಿಭಟನಾನಿರತರ ಮನವಿ ಸ್ವೀಕರಿಸಿದರು.ಕರ್ನಾಟಕ ರಾಜ್ಯ ಶೋಷಿತ ಸಮುದಾಯ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ (ಶೇಟು), ಬಿವಿಎಸ್ ಕುಮಾರ್, ಲಾಯರ್ ಕುಮಾರ್, ಸಿದ್ದರಾಮಯ್ಯ, ಕೋಟೆ ಸಿದ್ದರಾಮು, ಅಪ್ಪಗೆರೆ ಶ್ರೀನಿವಾಸ ಮೂರ್ತಿ, ಗಡ್ಡ ಚಂದ್ರು, ಚಿಕ್ಕೇನಹಳ್ಳಿ ಶಿವರಾಂ, ಪಾಪಣ್ಣ, ನಾರಾಯಣಮೂರ್ತಿ, ಕೇಶವಮೂರ್ತಿ, ಚಕ್ಕೆರೆ ಲೋಕೇಶ್, ಬಸವರಾಜು ಹಾಜರಿದ್ದರು.