ಮದ್ಯವ್ಯಸನದಿಂದ ಜೀವನ ನಾಶ ಆತಂಕಕಾರಿ: ವಿ.ಪಿ.ಶಶಿಧರ್‌

| Published : Jul 21 2025, 12:00 AM IST

ಸಾರಾಂಶ

ಯುವ ಜನಾಂಗ ಮದ್ಯದ ದಾಸರಾಗಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಯುವ ಜನಾಂಗ ಮದ್ಯದ ದಾಸರಾಗಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಹೇಳಿದ್ದಾರೆ.ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರ ಕೊಡವ ಸಮಾಜ ಆವರಣದಲ್ಲಿ ನಡೆಯುತ್ತಿರುವ 1954ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕುಟುಂಬದ ಯಜಮಾನ ಮದ್ಯ ವ್ಯಸನಿಯಾದ ಬೆನ್ನಲ್ಲೇ ಇಡೀ ಕುಟುಂಬ ಸಮಸ್ಯೆಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ನಡುವೆ ಕೆಲವೆಡೆ ಮಹಿಳೆಯರು ಕೂಡ ಮದ್ಯ ವ್ಯಸನಿಗಳಾಗುವ ಮೂಲಕ ಕುಟುಂಬದ ಶಾಂತಿ ನೆಮ್ಮದಿ ಕದಡುವ ಮೂಲಕ ಸಮಾಜದಲ್ಲಿ ಅಶಾಂತಿ ಕೂಡ ಸೃಷ್ಟಿಯಾಗುವ ಸಾಧ್ಯತೆ ಅಧಿಕವಾಗಿದೆ ಎಂದರು. ಇಂತಹ ಸಾಮಾಜಿಕ ಪಿಡುಗನ್ನು ತಪ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಮೆಚ್ಚುಗೆಯ ವಿಷಯ ಎಂದರು. ವ್ಯಸನದ ಪಿಡುಗಿನಿಂದ ಹೊರಬಂದು ನೆಮ್ಮದಿಯ ಬದುಕು ಸಾಗಿಸುವತ್ತ ಪ್ರತಿಯೊಬ್ಬರು ಚಿಂತನೆ ಹರಿಸಬೇಕಾಗಿದೆ ಎಂದರು.ಶಿಬಿರದ ನಿರ್ವಹಣಾ ಅಧಿಕಾರಿ ಪಿ ಪಿ ನಂದಕುಮಾರ್ ಸ್ತಾವಿಕವಾಗಿ ಮಾತನಾಡಿ, ಶಿಬಿರದ ರೂಪುರೇಷೆಗಳನ್ನು ತಿಳಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಇದುವರೆಗೆ ನಾಡಿನಾದ್ಯಂತ ನಡೆದಿರುವ ಮದ್ಯವರ್ಜನ ಶಿಬಿರಗಳ ಪ್ರಯೋಜನವನ್ನು ಸುಮಾರು 1.30 ಲಕ್ಷ ಫಲಾನುಭವಿಗಳು ಪಡೆದುಕೊಂಡಿದ್ದಾರೆ.ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆದು ಅಂಕಿ ಅಂಶಗಳ ಪ್ರಕಾರ ರಾಜ್ಯ ವ್ಯಾಪಿ ಸುಮಾರು 12 ಸಾವಿರಕ್ಕೂ ಹೆಚ್ಚಿನ ಮದ್ಯದ ಅಂಗಡಿಗಳು ವ್ಯಾಪಾರ ವಹಿವಾಟು ಮಾಡುವ ಮೂಲಕ ಬಹುತೇಕ ಜನರನ್ನು ಮದ್ಯ ವ್ಯಸನಕ್ಕೆ ಬಲಿ ಆಗುವಂತೆ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಕುಶಾಲನಗರದಲ್ಲಿ ಎಂಟು ದಿನಗಳ ಕಾಲ ಹಮ್ಮಿಕೊಂಡಿರುವ ಶಿಬಿರ 1954ನೇ ಶಿಬಿರವಾಗಿದ್ದು ಯೋಜನೆಯ ಆಶ್ರಯದಲ್ಲಿ ಕುಶಾಲನಗರದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮೂಲಕ ರಾಜ್ಯದಲ್ಲಿ ಹಲವು ಸಾಮಾಜಿಕ ಜನ ಮೆಚ್ಚುಗೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು ಮಹಿಳೆಯರು ಬಡ ವರ್ಗದ ಅಭಿವೃದ್ಧಿ ಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಎ ಟಿ ರಂಗಸ್ವಾಮಿ, ಪುರಸಭೆ ಅಧ್ಯಕ್ಷ ಜಯಲಕ್ಷ್ಮಿ ಚಂದ್ರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ನಾಯರ್, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ನಾರಾಯಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಪಾಲ್ಗೊಂಡರು.1954ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ವಿ ಡಿ ಪುಂಡರಿಕಾಕ್ಷ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಂಚೀರ ಮನು ನಂಜುಂಡ, ಉಪಾಧ್ಯಕ್ಷರಾದ ರಾಮದಾಸ್, ನವ್ಯ, ನಿರ್ಮಲ, ಗೌರವ ಸಲಹೆಗಾರ ಎಂ ಎನ್ ಚಂದ್ರಮೋಹನ್, ಎಸ್ ಕೆ ಸತೀಶ್, ಜಿ ಎಲ್ ನಾಗರಾಜ್, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಕುಶಾಲನಗರ ವಲಯ ಮೇಲ್ವಿಚಾರಕ ಜೆ ಪಿ ನಾಗರಾಜ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.