ವಿಷ್ಣುವರ್ಧನ್ ಸ್ಮಾರಕ ನೆಲಸಮ ಮಾಡಿರುವುದು ಖಂಡನೀಯ

| Published : Aug 13 2025, 12:30 AM IST

ವಿಷ್ಣುವರ್ಧನ್ ಸ್ಮಾರಕ ನೆಲಸಮ ಮಾಡಿರುವುದು ಖಂಡನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಚಲನಚಿತ್ರ ರಂಗದ ಮೇರು ನಟ ದಿ. ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರುವುದು ತೀವ್ರ ಖಂಡನೀಯ. ಹಿಂದು ಧರ್ಮದ ಪ್ರಕಾರ ಅವರ ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಲ್. ರಾಮಚಂದ್ರ ಒತ್ತಾಯಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಲನಚಿತ್ರ ರಂಗದ ಮೇರು ನಟ ದಿ. ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರುವುದು ತೀವ್ರ ಖಂಡನೀಯ. ಹಿಂದು ಧರ್ಮದ ಪ್ರಕಾರ ಅವರ ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಲ್. ರಾಮಚಂದ್ರ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇರುನಟ ಡಾ. ವಿಷ್ಣುವರ್ಧನ್‌ರವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದರಿಂದ ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳಾದ ನಮಗೆ ತೀವ್ರ ನೋವು ಉಂಟಾಗಿದೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶ ಮಾಡಿ, ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರನ್ನು ನೇಮಕ ಮಾಡಿ, ವಿಷ್ಣು ಅವರ ಸ್ಮಾರಕವಿರುವ ಜಾಗವನ್ನು ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು. ನಟ ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಸರ್ಕಾರ 20 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ, ಅವರ ಕುಟುಂಬದವರು ಈಗಾಗಲೇ 10 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಇನ್ನುಳಿದ 10 ಎಕರೆ ಜಾಗದಲ್ಲಿ ಅವರು ಸ್ಟುಡಿಯೋ ನಿರ್ಮಾಣ ಮಾಡಲು ಸಾಧ್ಯವಾಗದ್ದಿರೆ ಈ ಜಮೀನನ್ನು ವಾಪಸ್ ಪಡೆದುಕೊಳ್ಳಬೇಕು. ಈ ವಿಚಾರ ನ್ಯಾಯಾಲಯದಲ್ಲಿ ತೀರ್ಮಾಣನಾಗಿದ್ದು, ಸರ್ಕಾರ ಕೂಡಲೇ ಕಾರ್ಯಗತ ಮಾಡಬೇಕು ಎಂದು ಒತ್ತಾಯಿಸಿದರು. 10 ಎಕರೆ ಜಮೀನನ್ನು ಮಾರಾಟ ಮಾಡಲು ಕುಟುಂಬದವರಿಗೆ ಯಾರು ಅನುಮತಿ ಕೊಟ್ಟಿದ್ದರು ಎಂಬುದನ್ನು ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳಾದ ನಮಗೆ ತಿಳಿಸಬೇಕು. ಡಾ. ವಿಷ್ಣುವರ್ಧನ್ ರವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವ ಬಗ್ಗೆ ಸರ್ಕಾರ ಮಧ್ಯಸ್ಥಿಕೆವಹಿಸಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿಕೊಡಬೇಕು. ಇಲ್ಲವಾದಲ್ಲಿ ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳ ಡಾ. ವಿಷ್ಣುವರ್ಧನ್ ಅಭಿಮಾನಿಗಳು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಮಚಂದ್ರ ಎಚ್ಚರಿಕೆ ನೀಡಿದರು.

ಮುಂದಿನ ಡಾ. ವಿಷ್ಣುವರ್ಧನ್ ರವರ 75ನೇ ವರ್ಷದ ಅಮೃತ ಮಹೋತ್ಸವ ನಡೆಯುವ ಮೊದಲೇ ಡಾ. ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಬೇಕು ಎಂದು ಒತ್ತಾಯಿಸಿದರು. ಗೊಷ್ಠಿಯಲ್ಲಿ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ರಾದ ಕೊಳ್ಳೇಗಾಲದ ಸಿದ್ದರಾಜನಾಯಕ, ಚಾ.ನಗರ ತಾಲೂಕಿನ ರಾಜೇಂದ್ರ, ಪ್ರಕಾಶ್ ಇತರರು ಇದ್ದರು.