ಅಭಿವೃದ್ಧಿ ಪಟ್ಟಿ ಈಗಾಗಲೇ ಸಿದ್ಧ, ಸೇವೆಗೆ ಅಧಿಕಾರ ನೀಡಿ

| Published : Apr 01 2024, 12:50 AM IST

ಅಭಿವೃದ್ಧಿ ಪಟ್ಟಿ ಈಗಾಗಲೇ ಸಿದ್ಧ, ಸೇವೆಗೆ ಅಧಿಕಾರ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕುಗಳ ಸಮಸ್ಯೆಗಳು, ಆಗಬೇಕಾದ ಅಭಿವೃದ್ಧಿ ಕೆಲಸಗಳ ಸ್ಪಷ್ಟ ಮಾಹಿತಿ ತಮ್ಮ ಬಳಿ ಸಿದ್ಧವಿದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಜೂನ್ 4ರ ಫಲಿತಾಂಶ ಬಂದು ಜಯಶಾಲಿಯಾದರೆ ನನ್ನ ಬಳಿ ಸಿದ್ಧವಿರುವ ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕುಗಳ ಸಮಸ್ಯೆಗಳು, ಆಗಬೇಕಾದ ಅಭಿವೃದ್ಧಿ ಕೆಲಸಗಳ ಸ್ಪಷ್ಟ ಮಾಹಿತಿ ತಮ್ಮ ಬಳಿ ಸಿದ್ಧವಿದೆ. ಕ್ಷೇತ್ರದ ಜನರ ಆಶೀರ್ವಾದದಿಂದ ಜೂನ್ 4ರ ಫಲಿತಾಂಶ ಬಂದು ಜಯಶಾಲಿಯಾದರೆ ನನ್ನ ಬಳಿ ಸಿದ್ಧವಿರುವ ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಭಾನುವಾರ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರ ಮತಯಾಚನೆ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆ ಜನರು ನಿರೀಕ್ಷಿಸಿರುವ ವಿಮಾನ ನಿಲ್ದಾಣ, ಮಹಿಳೆಯರಿಗಾಗಿ ಸಣ್ಣ ಕೈಗಾರಿಗೆಳು, ಚೀಲೂರು -ಬಾಗೇವಾಡಿ ಸೇತುವೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ತುಂಗಭದ್ರಾ ನದಿಗೆ ಅಡ್ಡಗೋಡೆ ನಿರ್ಮಾಣ, ಎಲ್ಲ ಪಿ.ಎಚ್.ಸಿ. ಕೇಂದ್ರಗಳಿಗೂ ಆಂಬ್ಯುಲೇನ್ಸ್‌ ಸೌಲಭ್ಯಗಳು ಸೇರಿದಂತೆ ಅನೇಕ ಜನಪರ ಬೇಡಿಕೆಗಳನ್ನು ಈಡೇರಿಸಲು ಸ್ಪಷ್ಟ ಕಾರ್ಯಯೋಜನೆ ಹೊಂದಿದ್ದೇನೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಸುಧಾರಣೆಗಳು 5 ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ತನಗೆ ಮತ ನೀಡಿ, ಚುನಾಯಿಸುವಂತೆ ಮನವಿ ಮಾಡಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮತದಾನ ಮುಗಿಯುವವರೆಗೂ ಕಾರ್ಯಕರ್ತರು ಪ್ರತಿ ಮತದಾರರ ಮನೆಗಳಿಗೆ ತಲುಪಿ, ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಬೇಕು. ಮತದಾನದ ದಿನ ತಮ್ಮ ಬೂತ್‍ಗಳಲ್ಲಿ ಪ್ರತಿಯೊಬ್ಬರಿಂದಲೂ ಮತದಾನ ಮಾಡಿಸಿದರೆ ನಾವು ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿಕ್ಕೆ ಸಾಧ್ಯ, ಆ ನಿಟ್ಟಿನಲ್ಲಿ ನನ್ನನ್ನು ಸೇರಿದಂತೆ ಎಲ್ಲರೂ ಒಗ್ಗಟಿನಿಂದ ಚುನಾವಾಣೆ ಕೆಲಸ ಮಾಡೋಣ ಎಂದರು. ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ದೇಶದ ಯಾವುದೇ ರಾಜ್ಯದಲ್ಲಿ ಬರಗಾಲ, ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನದ ಬದಲಾಗಿ 150 ದಿನ ಕೆಲಸ ಕೊಡಿ ಎಂದು ನಮ್ಮ ಸರ್ಕಾರ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ರಾಜ್ಯಕ್ಕೆ ಅಕ್ಕಿ ನೀಡದೇ ಹೊರ ದೇಶಗಳಿಗೆ ಅಕ್ಕಿ ನೀಡಿದರು. ಚುನಾವಣೆ ಘೋಷಣೆಯಾಗಿದ್ದು, ಈಗ ಭಾರತ್ ಹೆಸರಿನಲ್ಲಿ ₹29ಕ್ಕೆ ಅಕ್ಕಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಭರವಸೆಗಳನ್ನು ನಂಬಿ ನನ್ನನ್ನು 17 ಸಾವಿರ ಮತಗಳಿಂದ ಗೆಲ್ಲಿಸಿದ್ದಿರಿ. ಈಗ ಆ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನಮ್ಮ ತಾಲೂಕಿನಿಂದ 25 ಸಾವಿರ ಮತಗಳ ಲೀಡ್ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, 10 ವರ್ಷಳಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿ, ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್, ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ, ಜನಸಾಮಾನ್ಯರಿಗೆ ಬರೆ ಎಳೆದರು ಎಂದು ದೂರಿದರು.

ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಸುರೇಂದ್ರಗೌಡ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ವಾಜಿದ್, ಕುಳಗಟ್ಟೆ ಚಂದ್ರಶೇಖರಪ್ಪ ಹಾಗೂ ಸಣ್ಣಕ್ಕಿ ಬಸವನಗೌಡ, ಆರ್.ನಾಗಪ್ಪ ಮಾತನಾಡಿದರು.

ಮುಖಂಡರಾದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ರವೀಶ್, ಆಶಾ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜಿ, ಮನುವಾಲಜ್ಜಿ, ಎಚ್.ಎ.ಗದ್ದಿಗೇಶ್, ಜಿ.ಪಂ. ಮಾಜಿ ಅದ್ಯಕ್ಷೆ ಶೀಲಾ ಗದ್ದಿಗೇಶ್, ವರದರಾಜಪ್ಪ, ಹನುಮನಹಳ್ಳಿ ಬಸವರಾಜಪ್ಪ ಸೇರಿದಂತೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಸಾವಿರಾರು ಜನ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

- - - -31ಎಚ್.ಎಲ್.ಐ1: ಹೊನ್ನಾಳಿ ಟಿಎಪಿಸಿಎಂಎಸ್ ಸೊಸೈಟಿ ಆವರಣದಲ್ಲಿ ಮತಯಾಚನೆ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ,ಸೇರಿದಂತೆ ಪಕ್ಷದ ಹಲವಾರು ಜನ ಮುಖಂಡರು ಇದ್ದರು. -31ಎಚ್ಎಲ್ಐ1ಎ.: ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಸಮಾವೇಶದಲ್ಲಿ ಮಾತನಾಡಿದರು.