ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಜಾವಗಲ್ ಹೋಬಳಿಯು ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದರೂ ಆಡಳಿತಾತ್ಮಕವಾಗಿ ಅರಸೀಕೆರೆ ತಾಲೂಕಿನ ವ್ಯಾಪ್ತಿಯಲ್ಲಿದೆ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಜಾವಗಲ್ ಹೋಬಳಿಯ ಪ್ರಗತಿ ಬಗ್ಗೆ ಏನೇ ಇದ್ದರೂ ನನ್ನ ಗಮನಕ್ಕೆ ತರುವುದರ ಜತೆಗೆ ನನ್ನೊಂದಿಗೆ ಚರ್ಚಿಸಬೇಕು, ಇಲ್ಲದಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಕೆ. ಸುರೇಶ್ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಾವಗಲ್ ಹೋಬಳಿಯ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಾವಗಲ್ ಹೋಬಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಅನುದಾನ ಮತ್ತು ಸೌಲಭ್ಯಗಳು ಮಂಜೂರಾದರೂ ಹಾಗೂ ಕಾಮಗಾರಿಗಳ ಪ್ರಗತಿ ಹಾಗೂ ಆಗುಹೋಗುಗಳು, ಸಾರ್ವಜನಿಕರ ಸಮಸ್ಯೆಗಳು ಮತ್ತು ಪರಿಹಾರ, ಕಟ್ಟಡಗಳ ಕಾಮಗಾರಿ, ಡಾ. ಬಿ. ಆರ್. ಅಂಬೇಡ್ಕರ್ ಭವನ, ಬಾಬು ಜಗಜೀವನ ರಾಮ್ ಭವನ, ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾರ್ಯ ಸೇರಿದಂತೆ ಒಟ್ಟಾರೆ ಜಾವಗಲ್ ಹೋಬಳಿಯ ಅಭಿವೃದ್ಧಿ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸದಾ ನನಗೆ ಮಾಹಿತಿ ಸಲ್ಲಿಸುವುದರ ಜತೆಗೆ ನನ್ನೊಂದಿಗೆ ಚರ್ಚಿಸಿ ಮುಂದುವರಿಯಬೇಕು, ಯಾವುದೇ ಕಾರಣಕ್ಕೂ ಜಾವಗಲ್ ಹೋಬಳಿಯನ್ನು ಕಡೆಗಣಿಸುವಂತಿಲ್ಲ, ಆ ನಿರ್ಲಕ್ಷ್ಯ ಧೋರಣೆ ಅನುಸರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು .ಕ್ರಿಯಾ ಯೋಜನೆ ಸಿದ್ಧಪಡಿಸಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಉಮೇಶ್ ಅವರು ಜಾವಗಲ್ ಹೋಬಳಿಯ ಕುಡಿಯುವ ನೀರು ಮತ್ತು ಟ್ಯಾಂಕುಗಳ ನಿರ್ಮಾಣ ಹಾಗೂ ಜಲಜೀವನ್ ಮಿಷನ್ ಅಡಿಯ ಮನೆ ಮನೆಗೆ ಗಂಗೆ ಕಾಮಗಾರಿಯ ಮಾಹಿತಿ ನೀಡಿದರು, ಇದಕ್ಕೆ ಗರಂ ಆದ ಶಾಸಕ ಎಚ್. ಕೆ. ಸುರೇಶ್ ಅವರು, ಜಾವಗಲ್ ಹೋಬಳಿಯಲ್ಲಿ 9 ಗ್ರಾಮ ಪಂಚಾಯಿತಿ ಕಚೇರಿಗಳಿವೆ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು ತಾನೇ?, ಇಲ್ಲಿಯವರೆಗೆ ಯಾವುದೇ ಕ್ರಿಯಾಯೋಜನೆ ತಯಾರಿಸದೇ ಟ್ಯಾಂಕ್ ಗಳ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ, ಅಷ್ಟೇ ಅಲ್ಲದೆ ಕಾಮಗಾರಿಗೆ ಸಂಬಂಧಿಸಿದ 17 ಲಕ್ಷ ರುಪಾಯಿ ಅನುದಾನ ಇನ್ನೂ ಏಕೆ ಅನುಷ್ಠಾನಗೊಂಡಿಲ್ಲ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಟ್ಟಿಲ್ಲ, ಹೀಗಾದರೆ ಜಾವಗಲ್ ಹೋಬಳಿಯ ಜನರ ಪರಿಸ್ಥಿತಿ ಏನಾಗಬೇಕು, ಇನ್ನು ಮುಂದೆ ಜಾವಗಲ್ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣವೇ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತರಬೇಕು. ಇಡೀ ಹಾಸನ ಜಿಲ್ಲೆ ಹಾಗೂ ಅರಸೀಕೆರೆ ತಾಲೂಕಿನಲ್ಲಿ ಇಲ್ಲಿಯವರೆಗೆ ಆಗಿರುವ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ. ಈ ನಿಟ್ಟಿನಲ್ಲಿ ಜೆಜೆಎಂ ಹಣ ಮಂಜೂರಾತಿಯನ್ನು ತಡೆಹಿಡಿಯಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆ ನಡೆಸದಿದ್ದರೆ ನಾನು ಕೇಂದ್ರ ಸರ್ಕಾರದಿಂದ ತನಿಖೆ ಮಾಡಿಸುತ್ತೇನೆ, ದೇಶದ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಬೇಕು ಎಂಬುದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ ಎಂದರು. ಎತ್ತಿನಹೊಳೆ ಯೋಜನಾ ಇಲಾಖೆಯ ಅಧಿಕಾರಿಯಿಂದ ಜಾವಗಲ್ ಹೋಬಳಿಯ ಲಕ್ಷ್ಮೀಪುರ ಮತ್ತು ದೊಡ್ಡಘಟ್ಟ ಗ್ರಾಮಗಳ ಭಾಗದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಬಾಕಿ ಇದೆ, ಶೀಘ್ರ ಬಗೆಹರಿಸಬೇಕು, ಎತ್ತಿನಹೊಳೆ ಎಂಜಿನಿಯರ್‌ಗಳಿಗೆ ಹೋಲಿಸಿದರೆ ಗ್ರಾಮ ಪಂಚಾಯಿತಿ ಪಿಡಿಒ ಗಳೇ ಪರವಾಗಿಲ್ಲ ಎಂದು ಕೋಪ ಹೊರ ಹಾಕಿದರು, ಇದಕ್ಕೆ ಪ್ರತಿಕ್ರಿಯಿಸಿದ ಎತ್ತಿನಹೊಳೆ ಅಧಿಕಾರಿ ಬರುವ ಫೆಬ್ರವರಿ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಒಪ್ಪಿಕೊಂಡರು. ವಿದ್ಯುತ್ ಪೂರೈಕೆ ಮಾಡಿ: ಸೆಸ್ಕ್ ಇಲಾಖೆಯ ಎ.ಇ.ಇ ಮಂಜುನಾಥ್ ಮಾತನಾಡಿ, 2024 - 25ನೇ ಸಾಲಿನಲ್ಲಿ ಒಟ್ಟು 125 ಅರ್ಜಿಗಳು ಬಂದಿವೆ, ಇವುಗಳಲ್ಲಿ 101 ಅರ್ಜಿಗಳ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ಉಳಿದ 24 ಅರ್ಜಿಗಳ ಕಾಮಗಾರಿ ಪ್ರಗತಿಯಲ್ಲಿದೆ, ಇದೇ ಸಾಲಿಗೆ ಸಂಬಂಧಿಸಿದಂತೆ ವಿಫಲಗೊಂಡಿದ್ದ 213 ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಲಾಗಿದೆ, ವಿವಿಧ ಕಾಮಗಾರಿಗಳಡಿಯಲ್ಲಿ ಒಟ್ಟು 68 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ, ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿದೆ, ನೀರಾವರಿ ಪಂಪ್‌ಸೆಟ್ ಗಳಿಗೆ ದಿನದ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಜಾವಗಲ್ ಹೋಬಳಿಯ ನೇರ್ಲಿಗೆ ಗ್ರಾಮದ ಭಾಗದಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ವಿಫಲವಾಗಿದೆ, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು, ಕೋಳಗುಂದ ಗ್ರಾಮದ ಬಳಿ ವಿದ್ಯುತ್ ಪವರ್ ಗ್ರಿಡ್ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಿದರೆ ಜಾವಗಲ್ ಹೋಬಳಿಯ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದರು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕಾಂತ್ ಬೂದಿಹಾಳ್ ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿದ ಶಾಸಕರು, ಸರ್ಕಾರದ ಸವಲತ್ತುಗಳನ್ನು ರೈತ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು, ನಿಮ್ಮ ಇಲಾಖೆ ಈ ನಿಟ್ಟಿನಲ್ಲಿ ವಿಫಲವಾಗಿದೆ, ಪಶು ಆಸ್ಪತ್ರೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು,, ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಸೂಚಿಸಿದರು. ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಕರಮೂರ್ತಿ ಮಾತನಾಡಿ, ಜಾವಗಲ್ ಹೋಬಳಿಯಲ್ಲಿ 86 ಅಂಗನವಾಡಿ ಕೇಂದ್ರಗಳಿವೆ, 2 ರಿಂದ 6 ವರ್ಷ ವಯಸ್ಸಿನ 755 ಮಕ್ಕಳು ಇದ್ದಾರೆ, 253 ಗರ್ಭಿಣಿಯರು, 252 ಬಾಣಂತಿಯರು, 167 ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ, ಭಾಗ್ಯಲಕ್ಷ್ಮಿ ಯೋಜನೆಯಡಿ 96 ಹಾಗೂ ಗೃಹಲಕ್ಷ್ಮಿ ಯೋಜನೆಯಡಿ 16519 ಫಲಾನುಭವಿಗಳಿದ್ದಾರೆ ಎಂಬ ಮಾಹಿತಿ ಒದಗಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಸಾರ್ವಜನಿಕರನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಬೇಕು, ಸರ್ಕಾರದ ಸವಲತ್ತುಗಳು ಫಲಾನುಭವಿಗಳಿಗೆ ತಲುಪುತ್ತಿದೆಯೋ ಇಲ್ಲವೋ ಎಂಬ ಮಾಹಿತಿ ಸಂಗ್ರಹಿಸಿ, ಎಷ್ಟು ಅಂಗನವಾಡಿ ಕಟ್ಟಡಗಳು ದುರಸ್ತಿ ಆಗಬೇಕು, ಎಂಬ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಬೇಕು, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಜತೆ ಸೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯು ಅಂಗನವಾಡಿ ಕಟ್ಟಡಗಳ ಸರ್ವೆ ಮಾಡಬೇಕು ಎಂದರು. ಕಾರ್ಮಿಕ ಇಲಾಖೆಯಡಿ ಜಾವಗಲ್ ಹೋಬಳಿಯ ಕಾರ್ಮಿಕರ ಕಿಟ್ ವಿತರಣೆ ಕುರಿತು ನನ್ನ ಗಮನಕ್ಕೆ ತರಬೇಕು, ನಿಜವಾದ ಫಲಾನುಭವಿಗಳ ಪಟ್ಟಿ ಮಾಡಿ, ಸರ್ಕಾರಿ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ವಿಫಲರಾಗಿದ್ದೀರಾ, ಸವಲತ್ತುಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಉತ್ತಮ ಸೇವೆ ಒದಗಿಸಿ: ಜಾವಗಲ್ ಗ್ರಾಮದ ಮಾರುಕಟ್ಟೆ ಆವರಣದಲ್ಲಿ ರಾತ್ರಿ ವೇಳೆ ಹೆಣ್ಣು ಮಕ್ಕಳ ಓಡಾಡಲು ತೊಂದರೆಯಾಗಿದೆ, ಜಂಗಲ್ ನಿರ್ಮಿಸಬೇಕು, ಕೃಷಿ ಉತ್ಪನ್ನಗಳ ಸಮರ್ಪಕ ಖರೀದಿ ಆಗಬೇಕು, ಮಾರುಕಟ್ಟೆ ಪ್ರಾಂಗಣ ಹಾಗೂ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು, ಸಾರಿಗೆ ಇಲಾಖೆಯವರು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪ್ರಮಾಣಿಕರ ಸುಗಮ ಸಂಚಾರಕ್ಕೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು, ಜಾವಗಲ್ ಬಸ್ ನಿಲ್ದಾಣದ ಸುತ್ತಮುತ್ತ ವಸತಿ ಪ್ರದೇಶ ಹಾಗೂ ಅಂಗಡ ಮುಂಗಟ್ಟುಗಳು ಇಇರುವುದರಿಂದ ಯುಜಿಡಿ ಸಮಸ್ಯೆ ತಲೆದೋರಿದೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಭ್ರಷ್ಟಾಚಾರ ನಿಲ್ಲಲಿ: ಸಾಮಾಜಿಕ ಅರಣ್ಯ ಇಲಾಖೆ ಹೆಚ್ಚು ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬಂದಿವೆ, ಇದನ್ನು ತಡೆಯಲು ಪ್ರಯತ್ನಿಸಬೇಕು ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೆ. ಆರ್. ಡಿ. ಎಲ್. ಇಲಾಖೆಯಡಿಯಲ್ಲಿ ಜಾವಗಲ್ ಹೋಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ 7 ಭವನಗಳ ಉದ್ಘಾಟನೆ ಯಾವಾಗ?, ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಾಕೀತು ಮಾಡಿದ್ದಲ್ಲದೆ, ತಾಲೂಕಿನ ಸರ್ಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಜಾವಗಲ್ ಹೋಬಳಿಯ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ತಹಸೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಸರ್ಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.