ಗ್ರಾಮೀಣಾಭಿವೃದ್ಧಿಯಿಂದಲೇ ದೇಶದ ಬೆಳವಣಿಗೆ: ಡಾ. ಚಂದ್ರು ಲಮಾಣಿ

| Published : Jan 21 2025, 12:30 AM IST

ಸಾರಾಂಶ

ಕೇಂದ್ರ ರಸ್ತೆ ನಿಧಿ ಯೋಜನೆ ಅಡಿಯಲ್ಲಿ (ಸಿಆರ್‌ಐಎಫ್) ಶಿರಹಟ್ಟಿ ತಾಲೂಕು ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಕಾಮಗಾರಿಗೆ ಶಾಸಕ ಡಾ. ಚಂದ್ರು ಕೆ. ಲಮಾಣಿ ಭೂಮಿಪೂಜೆ ನೆರವೇರಿಸಿದರು.

ಶಿರಹಟ್ಟಿ: ದೇಶದ ಅಭಿವೃದ್ಧಿ ಎಂದರೆ ನಗರಗಳ ಬೆಳವಣಿಗೆ ಮಾತ್ರವಲ್ಲ, ಬದಲಾಗಿ ಗ್ರಾಮೀಣಾಭಿವೃದ್ಧಿಯಾಗಬೇಕು. ಗ್ರಾಮಾಭಿವೃದ್ಧಿಗೆ ರಸ್ತೆಗಳ ಅಭಿವೃದ್ಧಿ ಮತ್ತು ಸುಧಾರಣೆ ಮಾಡಲು ಬದ್ಧನಾಗಿರುವೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಕೇಂದ್ರ ರಸ್ತೆ ನಿಧಿ ಯೋಜನೆ ಅಡಿಯಲ್ಲಿ (ಸಿಆರ್‌ಐಎಫ್) ಶಿರಹಟ್ಟಿ ತಾಲೂಕು ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿವೆ. ಜನಸಾಮಾನ್ಯರು ರಸ್ತೆ, ಕುಡಿಯುವ ನೀರು, ಶೌಚಾಲಯ ಮತ್ತು ಮೂಲಸೌಕರ್ಯಗಳನ್ನು ಕೇಳುತ್ತಾರೆ. ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ರೈತ ಸಂಪರ್ಕ ರಸ್ತೆ, ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿ ರಸ್ತೆಗಳ ಸಮಗ್ರ ಅಭಿವೃದ್ಧಿ ನನ್ನ ಆದ್ಯತೆಯಾಗಿದ್ದು, ಮುಖ್ಯವಾಗಿ ಇಟಗಿ ಸಾಸಲವಾಡ ಏತ ನೀರಾವರಿ ಯೋಜನೆ ಹಾಗೂ ತುಂಗಾ ತೀರದ ರೈತ ಸಮುದಾಯದ ಹೊಲಗಳಿಗೆ ನೀರುಣಿಸುವ ಕೆಲಸಕ್ಕೆ ಪ್ರಾಧಾನ್ಯ ನೀಡುವುದಾಗಿ ಹೇಳಿದರು.

೧೦೦ ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಈಗಾಗಲೇ ಟೆಂಡರ್ ಕರೆಯಲು ಅನುಮೋದನೆ ಸಿಕ್ಕಿದೆ. ನೂರಾರು ಕೋಟಿ ರು. ರಸ್ತೆ ಕಾಮಗಾರಿ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಫಕ್ಕೀರಪ್ಪ ಗಂಗಪ್ಪ ನರಸಮ್ಮನವರ, ಚನ್ನವೀರಗೌಡ, ತೆಗ್ಗಿನಮನಿ, ಶಿವನಗೌಡ ಕಂಠಿಗೌಡ್ರ, ಮಹೇಶ ತೆಗ್ಗಿನಮನಿ, ಪ್ರವೀಣಗೌಡ ಕಂಠಿಗೌಡ್ರ, ಗ್ರಾಪಂ ಸದಸ್ಯರಾದ ಹೇಮಕ್ಕ ಹಿರೇಮಠ, ನಿಂಗಪ್ಪ ನಾಯಕ, ವೀರೇಶ ತಂಗೋಡ, ವಿಶ್ವನಾಥ ಪಾಟೀಲ, ಸಂತೋಷ ಹಿರೇಮಠ, ಪ್ರಶಾಂತ ಹೊಸಮನಿ, ಸಿ.ಜಿ. ಬಿರಾದಾರ ಇದ್ದರು.