ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆಯ ನಂತರ ಪಕ್ಷಾತೀತ, ಜಾತ್ಯತೀತವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಚಿಂತಿಸಬೇಕು. ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು.ಇಲ್ಲಿಗೆ ಸಮೀಪದ ಜಿ. ನಾಗಲಾಪುರ ಗ್ರಾಮದಲ್ಲಿ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿಯಲ್ಲಿ ಸುಮಾರು ₹7 ಕೋಟಿ ವೆಚ್ಚದ 3.615 ಕಿಮೀ ಗುಂಡಾ ಗ್ರಾಮದಿಂದ ಜಿ.ನಾಗಲಾಪುರ ಗ್ರಾಮದವರೆಗೆ ಸಿಸಿ ರಸ್ತೆ ಮತ್ತು ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಾಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.
ಜಿ. ನಾಗಲಾಪುರಂದಿಂದ ಗುಂಡಾ ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಬೇಕು ಎಂದು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡ ಹಿನ್ನೆಲೆ ಮತ್ತು ಜಿ. ನಾಗಲಾಪುರ ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅದು ಮಳೆಗಾಲದಲ್ಲಿ ನೀರಿನಲ್ಲೆ ಶವ ಸಂಸ್ಕಾರ ಮಾಡಲು ತೆರಳಬೇಕಿತ್ತು. ಇದು ಸುಮಾರು ವರ್ಷಗಳಿಂದ ಈ ಗ್ರಾಮದ ಜನರು ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನು ಅರ್ಥಮಾಡಿಕೊಂಡು ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಿಸಿ ರಸ್ತೆ ಮತ್ತು ಹಳ್ಳಕ್ಕೆ ಸೇತುವೆ ನಿರ್ಮಾಣ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೂ ₹50 ಲಕ್ಷ ಸಿಸಿ ರಸ್ತೆ ನಿರ್ಮಾಣ ಕೈಗೊಳ್ಳಲಾಗಿದೆ. ಪ್ರತಿಯೊಂದು ಗ್ರಾಮಕ್ಕೂ ₹50 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಕ್ಷೇತ್ರದ ಜನರ ಸಹಕಾರದಿಂದ ಅತೀ ಬೇಗನೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಡಣಾಯಕನಕೆರೆ ಗ್ರಾಮದಲ್ಲಿ 2023-24 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ₹65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರದ ಉಪಕೇಂದ್ರದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿದರು.ಜಿ. ನಾಗಲಾಪುರ ಗುರು ಒಪ್ಪತ್ತೇಶ್ವರ ಮಠದ ನಿರಂಜನಪ್ರಭು ಮಹಸ್ವಾಮಿಗಳು, ತಾಲೂಕು ವೈದ್ಯಾಧಿಕಾರಿ ಬಸವರಾಜ್, ಪಿಡಿಒ ಎಂ. ಜಿಲಾನ್ ಸಾಹೇಬ್, ಜಿ. ನಾಗಲಾಪುರ ಗ್ರಾಪಂ ಅಧ್ಯಕ್ಷೆ ದೀಪ್ಲಿಬಾಯಿ ನಾರಾಯಣ ನಾಯ್ಕ್, ಉಪಾಧ್ಯಕ್ಷೆ ಕೆ.ಎಂ. ಪರಿಮಳ ಅನಂತಸ್ವಾಮಿ, ಸ್ಥಳೀಯ ಮುಖಂಡರಾದ ಗುಂಡಾಸ್ವಾಮಿ, ಪಿ. ಓಬಪ್ಪ, ಬಿ.ಎಸ್. ರಾಜಪ್ಪ, ಜಾತಪ್ಪ, ಬಾದಾಮಿ ಮೃತ್ಯಂಜಯ, ವದ್ದಟ್ಟಿ ಪ್ರಕಾಶ್, ಶಂಕರ್, ನಾರಾಯಣ, ಜಗದೀಶ್, ನಂದಿಬಂಡೆ ಕೃಷ್ಣ, ಕೊಮಾರಪ್ಪ, ಯರಿಸ್ವಾಮಿ, ಚಿನ್ನಾಪುರಿ, ಶಿವಶಂಕರ್, ಜಿ. ಸೋಮಣ್ಣ, ರಮೇಶ್, ಪಕ್ಕೀರಪ್ಪ ಸೇರಿದಂತೆ ಇತರರಿದ್ದರು.