ಶತಮಾನಗಳಲ್ಲಿ ಸಾಹಿತ್ಯದ ಆಯಾಮ ಬದಲು

| Published : Mar 14 2025, 01:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಂಬಾ ಕನ್ನಡ ಸಾಹಿತ್ಯ ಬೇರೆ ಬೇರೆ ಶತಮಾನಗಳಲ್ಲಿ ತನ್ನ ಆಯಾಮಗಳನ್ನು ಬದಲಿಸುತ್ತ ಬಂದಿದೆ. ಇದರಲ್ಲಿ ಪ್ರವಾಸ ಸಾಹಿತ್ಯವೂ ಒಂದಾಗಿದ್ದು, ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ಪ್ರದೇಶದ ವಸ್ತುನಿಷ್ಠ ಜ್ಞಾನ ನೀಡುವದರ ಜೊತೆಗೆ ಅಲ್ಲಿಯ ಕಲೆ, ಸಾಹಿತ್ಯ, ಸಂಸ್ಕೃತಿ ಸಂಪ್ರದಾಯದ ಆಚರಣೆಗಳ ಕುರಿತು ಅಪಾರ ಜ್ಞಾನ ನೀಡುತ್ತದೆ ಎಂದು ಸಾಹಿತಿ ಡಾ.ಸಿದ್ದಣ್ಣಾ ಉತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ತಾಂಬಾ

ಕನ್ನಡ ಸಾಹಿತ್ಯ ಬೇರೆ ಬೇರೆ ಶತಮಾನಗಳಲ್ಲಿ ತನ್ನ ಆಯಾಮಗಳನ್ನು ಬದಲಿಸುತ್ತ ಬಂದಿದೆ. ಇದರಲ್ಲಿ ಪ್ರವಾಸ ಸಾಹಿತ್ಯವೂ ಒಂದಾಗಿದ್ದು, ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ಪ್ರದೇಶದ ವಸ್ತುನಿಷ್ಠ ಜ್ಞಾನ ನೀಡುವದರ ಜೊತೆಗೆ ಅಲ್ಲಿಯ ಕಲೆ, ಸಾಹಿತ್ಯ, ಸಂಸ್ಕೃತಿ ಸಂಪ್ರದಾಯದ ಆಚರಣೆಗಳ ಕುರಿತು ಅಪಾರ ಜ್ಞಾನ ನೀಡುತ್ತದೆ ಎಂದು ಸಾಹಿತಿ ಡಾ.ಸಿದ್ದಣ್ಣಾ ಉತ್ನಾಳ ಹೇಳಿದರು.

ಬೆನಕನಹಳ್ಳಿ, ಹರಳ್ಯನಹಟ್ಟಿ ಗ್ರಾಮದಲ್ಲಿ ದಿ.ಚಂದ್ರಾಮ ಹೊನಕಟ್ಟಿ ಅವರ ೨೩ನೇ ಪುಣ್ಯ ಸ್ಮರಣೆ ನಿಮಿತ್ತ ಅಪ್ಪ-ಅವ್ವ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ನೀಡುವ ಮಾಸ್ತರ ಪ್ರಶಸ್ತಿ, ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕ ಜ್ಯೋತಿರ್ಲಿಂಗ ಹೊನಕಟ್ಟಿ ಬರೆದ ಬೆನಕನಹಳ್ಳಿ ಯಿಂದ ಮಸ್ಕತ್ ವರೆಗೆ ಪ್ರವಾಸ ಕಥನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಕಥನ ಓದುತ್ತಿರುವಾಗ ನಾವು ಮಸ್ಕತ್‌ನಲ್ಲಿ ಸುತ್ತಾಡುತ್ತಿದ್ದೇವೆಯೋ ಎನ್ನುವ ಅನುಭವವಾಗುತ್ತದೆ. ಅಲ್ಲಿಯ ಕಲೆ ಸಾಹಿತ್ಯ, ಇತಿಹಾಸ, ಪ್ರೇಕ್ಷಣೀಯ ಸ್ಥಳಗಳು ಅದ್ಭುತ ಅನುಭವ ನೀಡುತ್ತವೆ. ಪ್ರವಾಸ ಮಾಡದೇ ಇರುವವರಿಗೆ ಜ್ಞಾನದ ಬಾಗಿಲು ತೆರೆದಂತಾಗುತ್ತದೆ, ಪ್ರವಾಸ ಕಥನ ಜ್ಞಾನದ ಭಂಡಾರವಾಗಿದೆ ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಪೊಲೀಸ್‌ ವೃತ್ತ ನಿರೀಕ್ಷಕ ಜ್ಯೋತಿರ್ಲಿಂಗ ಹೊನಕಟ್ಟಿ, ಸಣ್ಣ ಹಳ್ಳಿಯಿಂದ ಮಸ್ಕತ್ ವರೆಗೆ ಹೋಗಿ ಅಲ್ಲಿ ನಮ್ಮೂರಿನ ಜನಪದ ಹಾಡುಗಳನ್ನು ಹಾಡಿದ ತೃಪ್ತಿ ನನಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಇಂಡಿ ಮಾತನಾಡಿ, ಬೆನಕನಹಳ್ಳಿ ಒಂದು ಸಣ್ಣ ಗ್ರಾಮ, ಸೌಲಭ್ಯಗಳು ಇಲ್ಲದಿರುವ ಗ್ರಾಮದಿಂದ ಜ್ಯೋತಿರ್ಲಿಂಗ ತಮ್ಮ ಸತತ ಪ್ರಯತ್ನದಿಂದ ಮಸ್ಕತ್ ವರೆಗೆ ಹೋಗಿ ಇಲ್ಲಿಯ ಜನಪದ ಸಾಹಿತ್ಯ ಹರಡಿದ್ದು ಬೆನಕನಹಳ್ಳಿಯ ಗೌರವ ಹೆಚ್ಚಿಸಿದ್ದಾರೆ ಎಂದು ಬಣ್ಣಿಸಿದರು.

ಶ್ರೀಬಸವಲಿಂಗ ಸ್ವಾಮಿಗಳು ಮಾತನಾಡಿ, ಜ್ಯೋತಿರ್ಲಿಂಗ ತಂದೆಯ ಸಂಸ್ಕಾರದಿಂದ ಸಾಧನೆ ಮಾಡಿದವರನ್ನು ಕರೆಯಿಸಿ ಗೌರವಿಸಿದ್ದು ಸಂತೋಷ ತಂದಿದೆ. ದಕ್ಷ ಪೊಲೀಸ್‌ ಅಧಿಕಾರಿ ಜ್ಯೋತಿರ್ಲಿಂಗ ಹೊನಕಟ್ಟಿ ಜಿಲ್ಲೆಯ ಹೆಸರು ತರುವ ಮಗನಾಗಲಿ ಎಂದು ಹಾರೈಸಿದರು.

ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಆರ್ಶೀವಚನ ನೀಡಿದರು. ಮಾಸ್ತರ ಪ್ರಶಸ್ತಿ ಪುರಸ್ಕೃತ ಡಾ.ವಿ.ಡಿ.ಐಹೊಳ್ಳಿ, ಎಂ.ಎಂ.ಅಂಗಡಿ, ಇಂಡಿ ಉಪವಿಭಾಗಾದ ಮಲುಗೌಡ ಝರೆ, ಡಾ.ಸಂಗಮೇಶ ಮೇತ್ರಿ ಇತರರು ಮಾತನಾಡಿದರು.

ಚೌಡಪ್ಪ ಮೇತ್ರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಾಜಶೇಖರ ನಿಂಬರಗಿ, ಮಲ್ಲಿಕಾರ್ಜುನ ಮಠ, ಪಿಎಸ್ ಐ ಕಿರಣ ಕುಮಾರ, ವಿಠ್ಠಲ ಹೊನಕಟ್ಟಿ, ವಿಶ್ವನಾಥ ಹೊನಕಟ್ಟಿ, ಅಪ್ಪು ಇಂಡಿ ಮುಂತಾದವರು ಇದ್ದರು.