ಕುಂಟುತ್ತಿರುವ ಅಂಗವಿಕಲ ಸಬಲೀಕರಣ ಕಾಯ್ದೆ

| Published : Feb 20 2024, 01:47 AM IST

ಸಾರಾಂಶ

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ರ ಆರನೇ ಅಧ್ಯಾಯದಲ್ಲಿ, ಅಂಗವಿಕಲರ ಹಕ್ಕುಗಳ ಬಗ್ಗೆ ಜಾಗೃತಿ ಶಿಬಿರ ನಡೆಸಬೇಕು ಎಂಬ ಉಲ್ಲೇಖವಿದೆ.

ಕಾರಟಗಿ: ಅಂಗವಿಕಲರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಜಾರಿ ತಂದ ಕಾಯ್ದೆ ಜಾರಿಯಾಗಿ ದಶಕಗಳನ್ನೇ ಪೂರೈಸಿದೆ. ಇಲ್ಲಿವರೆಗೂ ಈ ಕಾಯ್ದೆ ಸಂಪೂರ್ಣ ಜಾರಿಯಾಗದೇ ಕಾಗದದಲ್ಲೇ ಉಳಿದಿದೆ ಎಂದು ಅಂಗವಿಕಲರ ಹಕ್ಕುಗಳ ಕಾಯ್ದೆಯ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಸದಸ್ಯ ಚಂದ್ರಶೇಖರ ಪುಟ್ಟಪ್ಪ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ ೨೦೧೬ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ರ ಆರನೇ ಅಧ್ಯಾಯದಲ್ಲಿ, ಅಂಗವಿಕಲರ ಹಕ್ಕುಗಳ ಬಗ್ಗೆ ಜಾಗೃತಿ ಶಿಬಿರ ನಡೆಸಬೇಕು ಎಂಬ ಉಲ್ಲೇಖವಿದೆ. ಈ ನಿಯಮಗಳ ಬಗ್ಗೆ ಮುಖ್ಯವಾಗಿ ನ್ಯಾಯಾಧೀಶರು, ವಕೀಲರು, ಅನುಷ್ಠಾನಗೊಳಿಸುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜ್ಞಾನವಿರಬೇಕು. ಕೇಂದ್ರ ಸರ್ಕಾರ ೨೦೧೬ರಲ್ಲಿ ಹಾಗೂ ರಾಜ್ಯ ಸರ್ಕಾರ ೨೦೧೯ರಲ್ಲಿ ಈ ಕಾಯ್ದೆ ಅನುಷ್ಠಾನಗೊಳಿಸಿದ್ದರೂ, ವಿಕಲಚೇತನರಿಗೆ ಇರುವ ಹಕ್ಕು, ಸೌಲಭ್ಯ, ಸಮಸ್ಯೆ, ಕಾನೂನಿನಡಿ ವಿಶೇಷ ಸೌಲಭ್ಯ, ಪರಿಹಾರ ಹಾಗೂ ವೈಯುಕ್ತಿಕ ದಕ್ಕೆ ಉಂಟಾದಾಗ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎನ್ನುವ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಂಶಗಳ ಕುರಿತು ನಿರಂತರ ಕಾರ್ಯಕ್ರಮ, ತರಬೇತಿ, ಜಾಗೃತಿ ಆಯೋಜಿಸಿ ವಿಕಲಚೇತನರಿಗೆ ಮಾಹಿತಿ ತಿಳಿಸುವ ಕೆಲಸವನ್ನು ಆಯಾ ರಾಜ್ಯ ಸರ್ಕಾರಗಳು ಜಿಲ್ಲಾಡಳಿತದ ಮೂಲಕ ಮಾಡಬೇಕು. ಆದರೆ ಇಂಥ ಕಾರ್ಯಕ್ರಮಗಳ ಆಯೋಜನೆ ಮಾಡ್ತಾಯಿಲ್ಲ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಕಾಯ್ದೆ ಇಂದಿಗೂ ಕಾಗದದಲ್ಲೇ ಉಳಿದಿದೆ. ವಿಶೇಷವಾಗಿ ಶಿಕ್ಷಣದ ಹಕ್ಕು ಆರ್‌ಟಿಇ, ಆರ್‌ಟಿಐ ಇನ್ನಿತರ ಕಾಯ್ದೆಗಳ ಬಗ್ಗೆ ರಾಜ್ಯದಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳು, ಶಿಬಿರ, ಬೀದಿ ನಾಟಕ, ತರಬೇತಿ, ಕಾರ್ಯಾಗಾರಗಳು ನಡೆಯುತ್ತವೆ. ಆದರೆ, ಕಾಯ್ದೆ ಸಂಪೂರ್ಣ ಅನುಷ್ಠಾನ ನಿಲುಕದ ನಕ್ಷತ್ರವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಯಿದೆಯ ಬಗ್ಗೆ ವ್ಯಾಪಕ ಪ್ರಚಾರ, ಜಾಗೃತಿಗೆ ಮುಂದಾಗಬೇಕು ಎಂದರು.ಸಂಪನ್ಮೂಲ ವ್ಯೆಕ್ತಿ ಎಚ್.ಎನ್. ಬಸಪ್ಪ ಮತ್ತು ಮಹಿಬೂಬ್‌ಸಾಬ್ ಮಾತನಾಡಿ, ಅಂಗವಿಕಲರ ಹಕ್ಕುಗಳ ಕಾಯ್ದೆ ೨೦೧೬ರ ಕುರಿತು ತಜ್ಞರು ಮಾಹಿತಿ ನೀಡಿದರು.ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಇದೆ. ಆದರೆ, ಇನ್ನುಳಿದ ಇಲಾಖೆಗಳಲ್ಲಿಯೂ ತಮಗಾಗಿ ಶೇ.೫ ಅನುದಾನವಿದೆ ಎಂಬುದು ಬಹಳಷ್ಟು ಅಂಗವಿಕಲರಿಗೆ ಗೊತ್ತಿಲ್ಲ ಎಂದು ಚಂದ್ರಶೇಖರ ಪುಟ್ಟಪ್ಪ ಬಹಿರಂಗಪಡಿಸಿದರು.ಕೆಲ ಅಧಿಕಾರಿಗಳಿಗೂ ಇದರ ಬಗ್ಗೆ ಮಾಹಿತಿ ಇಲ್ಲ. ೨೦೧೧ರ ಜನಗಣತಿ ಪ್ರಕಾರ, ರಾಜ್ಯದಲ್ಲಿ ೧೩ಲಕ್ಷ ಅಂಗವಿಕಲರಿದ್ದಾರೆ. ಆದರೆ, ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿ ಎಂದು ಎಲ್ಲ ಇಲಾಖೆಗಳ ಅನುದಾನದಲ್ಲಿ ಶೇ.೫ರಷ್ಟನ್ನು ಅಂಗವಿಕಲರ ಕಲ್ಯಾಣ ನಿಧಿಯಾಗಿ ಬಳಸಬೇಕು ಎಂದಿದೆ. ಆದರೆ, ಬಹುತೇಕ ಇಲಾಖೆಗಳು ಪಾಲಿಸದೇ ಇರುವುದರಿಂದ ಸೌಲಭ್ಯಕ್ಕಾಗಿ ಅಲೆದಾಡುವುದು ನಿಂತಿಲ್ಲ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಬಿಡುಗಡೆಯಾದ ಅನುದಾನ, ಖರ್ಚಿನ ವಿವರ ಸಿಗುತ್ತದೆ. ಅರ್ಜಿ ಹಾಕಿದ ಅಂಗವಿಕಲರಿಗೂ ಸೌಲಭ್ಯ ಒದಗಿಸಲಾಗುತ್ತದೆ. ಅಂಗವಿಕಲರ ನಿಧಿಯನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ದೂರಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶೇಷಚೇತನರ ಸಂಘ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಬ್ಲಾಕ್‌ಬರ್ಡ್ ವಹಿಸಿದ್ದರು. ಪುರಸಭ ವ್ಯವಸ್ಥಾಪಕ ಎಚ್.ಪರಮೇಶ್ವರಪ್ಪ, ಮಂಜುಳಾ ಎಂಆರ್‌ಡಬ್ಲ್ಯೂ ಇದ್ದರು. ಕಾರ್ಯಾಗಾರದಲ್ಲಿ ತಾಲೂಕಿನ ನೂರಾರು ವಿಕಲಾಂಗಚೇತನರು ಭಾಗವಹಿಸಿದ್ದರು.ವಿಶೇಷಚೇತನರ ಸಂಘ ಶರಣಪ್ಪ ಜುಟ್ಲದ್, ಬಸವರಾಜ್ ಸಜ್ಜನ್, ಪ್ರಹ್ಲಾದ್ ಜೋಷಿ, ಸೋಮಶೇಖರಗೌಡ ಯರಡೋಣಾ, ಗೌರಮ್ಮ ಎಚ್. ಯರಡೋಣಾ, ರುದ್ರೇಶ್ ಮಂಗಳೂರು, ಶರಣಪ್ಪ ಮೇಟಿ ಸಿದ್ದಾಪುರ, ಬಸವರಾಜ ಚಳ್ಳೂರು ಬೂದಗುಂಪಾ, ಶರಣಪ್ಪ ಕುರುಬರು ಬೂದಗುಂಪಾ, ಈಶಮ್ಮ ಹಣವಾಳ ಇದ್ದರು.