The discipline and culture of the Gurukul are a boon for achieving success.

- ಎಚ್.ಪ್ರಸನ್ನಕುಮಾರ್ ಮಾತು । ಜೆಇಇ ಮೇನ್ಸ್, ಅಡ್ವಾನ್ಸ್ ಸಾಧಕ 57 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆಕನ್ನಡಪ್ರಭ ವಾರ್ತೆ ಭಾಲ್ಕಿ

ಕಾಲೇಜಿನ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಅರಮನೆಯಂತಹ ಕಟ್ಟಡಗಳಿಗೆ ಮಾರು ಹೋಗಿ ಪ್ರವೇಶ ಪಡೆಯದೆ, ಉತ್ತಮ ಸಂಸ್ಕಾರ, ಶಿಸ್ತು ಭರಿತ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ಭವಿಷ್ಯ ಉಜ್ಜಲಗೊಳ್ಳುತ್ತದೆ. ಇಂತಹ ಶಿಕ್ಷಣ ನೀಡುತ್ತಿರುವ ಗುರುಕುಲ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸುದೈವಿಗಳು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನಕುಮಾರ್ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಸಾಧನೆಗೈದು ಪ್ರತಿಷ್ಠಿತ ಐಐಟಿ, ಎನ್‌ಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ತಮಗಿಷ್ಟವಾದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯಲು ಸಾಧ್ಯವಿದೆ. ಇಂದು ತಮ್ಮದೇ ಸ್ವಂತ ಕಾಲೇಜು, ಕೈ ತುಂಬಾ ಹಣವಿದ್ದರೂ ಸಹ ವಿದ್ಯಾರ್ಥಿಗಳಿಗೆ ಇಷ್ಟವಾದ ಸೀಟು, ಕಾಲೇಜು ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ರಾಂಕ್, ಅರ್ಹತೆ ಪಡೆದು ಕೌನ್ಸೆಲಿಂಗ್ ಮೂಲಕವೇ ಸೀಟು ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಉತ್ತಮ ಸಾಧನೆಗೈಯಲು ವಿದ್ಯಾರ್ಥಿಗಳು ಯಾವತ್ತೂ ತಮ್ಮ ತಲೆಯಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಬೆಳೆಯಲು ಆಸ್ಪದ ಕೊಡಬಾರದು. ಎರಡು ವರ್ಷದ ತಪಸ್ಸಿನ ಓದು ಸಾಮಾನ್ಯ ವಿದ್ಯಾರ್ಥಿಯನ್ನು ಕೂಡ ಅಸಾಮಾನ್ಯ ಸಾಧಕನನ್ನಾಗಿ ಪರಿವರ್ತಿಸುತ್ತದೆ ಎಂದು ಹೇಳಿದರು.

ಬಸವಲಿಂಗ ಪಟ್ಟದ್ದೇವರು ಮಹಾನ್ ಸಾಧನೆ ಮಾಡಿದ್ದರೂ ಸಹ ತುಂಬಾ ಸರಳ ಜೀವಿಯಾಗಿದ್ದಾರೆ. ಇಂದಿನ ಕಾಲದಲ್ಲಿ ಇಂತಹ ಸ್ವಾಮೀಜಿಗಳು ಸಿಗುವುದು ತುಂಬಾ ವಿರಳ. ಸನ್ಯಾಸಿ ಎಂದರೆ ಬಸವಲಿಂಗ ಪಟ್ಟದ್ದೇವರಂತೆ ಇರಬೇಕು.‌ ಗುರುಕುಲದ ಶಿಸ್ತು, ಸಂಸ್ಕಾರ ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಕೊಂಡೊಯುತ್ತಿದೆ ಎಂದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಹಿಂದುಳಿದ ನಮ್ಮ ಭಾಗವನ್ನು ನನ್ನ ಗುರುಗಳಾದ ಬಸವಲಿಂಗ ಪಟ್ಟದೇವರ ದೂರದೃಷ್ಟಿ, ಸತತ ಪ್ರಯತ್ನದ ಫಲವಾಗಿ ಶೈಕ್ಷಣಿಕವಾಗಿ ಮುಂದುವರೆದಿದೆ. ಪರಮಪೂಜ್ಯರು ಹಿರೇಮಠ ಸಂಸ್ಥಾನಕ್ಕೆ ವಿದ್ಯಾರ್ಥಿಯಾಗಿ ಬಂದಿದ್ದರು. ಅವರಿಗೆ ಜೀವನದಲ್ಲಿ ಶಿಕ್ಷಕರಾಗಬೇಕು ಎಂಬುವ ಆಸೆ ಇತ್ತು. ಲಿಂಗೈಕ್ಯ ಚೆನ್ನಬಸವ ಪಟ್ಟದ್ದೇವರ ಪೂಜ್ಯರಲ್ಲಿನ ಸೇವಾ ಮನೋಭಾವ, ಸದ್ಗುಣಗಳನ್ನು ನೋಡಿ ಹಿರೇಮಠ ಸಂಸ್ಥಾನಕ್ಕೆ ಪೀಠಾಧಿಪತಿಯನ್ನಾಗಿ ಮಾಡಿ ಸಮಾಜಕ್ಕೆ ದಾರಿ ತೋರುವ ಗುರುವನ್ನಾಗಿಸಿದರು ಎಂದು ತಿಳಿಸಿದರು.

ಭಗವಂತ ಕರುಣಿಸಿದ ಬದುಕನ್ನು ಅರ್ಥಪೂರ್ಣವನ್ನಾಗಿಸಲು ವಿದ್ಯಾರ್ಥಿಗಳು ಸದ್ಗುಣ, ಸದ್ವಿಚಾರ, ಮೈಗೂಡಿಸಿಕೊಳ್ಳಬೇಕೆಂದರು. ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಅಮೋಘ ಸಾಧನೆಗೈದ 56 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನಕುಮಾರ ದಂಪತಿಯನ್ನು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಮಹಾಲಿಂಗ ಸ್ವಾಮೀ, ಪ್ರಮುಖರಾದ ಚನ್ನಬಸವಣ್ಣ ಬಳತೆ, ಪ್ರಸನ್ನ ಖಂಡ್ರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಜಯರಾಜ ಖಂಡ್ರೆ, ಸಿದ್ದಯ್ಯ ಕವಡಿಮಠ ಸೇರಿದಂತೆ ಇತರರು ಇದ್ದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಮಧುಕರ ನಿರೂಪಿಸಿದರೆ ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.

--

ಚಿತ್ರ 25ಬಿಡಿಆರ್59:

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಸಾಧನೆಗೈದು ಪ್ರತಿಷ್ಠಿತ ಐಐಟಿ, ಎನ್ ಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.