ನಗರದ ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸಬಲೀಕರಣ ಮತ್ತು ಮೂಲಸೌಕರ್ಯಗಳ ವೃದ್ಧಿಗಾಗಿ ಅಮೃತ ನಗರೋತ್ಥಾನ 4ನೇ ಹಂತ ಯೋಜನೆಯಡಿ ಎಲೆಕ್ಟ್ರಿಕ್ ಆಟೋ, ತ್ರಿಚಕ್ರ ವಾಹನ ಹಾಗೂ ಸಿಂಟೆಕ್ಸಗಳಂತಹ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರಸಭೆ ಅಮೃತ ನಗರೋತ್ಥಾನ ಹಂತ-4 ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ, ಎಲೆಕ್ಟ್ರಿಕ್ ಆಟೋ, ತ್ರಿಚಕ್ರ ವಾಹನ ಹಾಗೂ ಸಿಂಟೆಕ್ಸ್ ವಿತರಣೆ

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸಬಲೀಕರಣ ಮತ್ತು ಮೂಲಸೌಕರ್ಯಗಳ ವೃದ್ಧಿಗಾಗಿ ಅಮೃತ ನಗರೋತ್ಥಾನ 4ನೇ ಹಂತ ಯೋಜನೆಯಡಿ ಎಲೆಕ್ಟ್ರಿಕ್ ಆಟೋ, ತ್ರಿಚಕ್ರ ವಾಹನ ಹಾಗೂ ಸಿಂಟೆಕ್ಸಗಳಂತಹ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವಾಹನಗಳ ವಿತರಣೆಯಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೆ, ಸಂಪೂರ್ಣ ಪಾರದರ್ಶಕವಾಗಿರಲಿ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.

ಸೋಮವಾರ ನಗರಸಭೆ ಆವರಣದಲ್ಲಿ ನಗರಸಭೆ ಅಮೃತ ನಗರೋತ್ಥಾನ ಹಂತ-4 ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ, ಎಲೆಕ್ಟ್ರಿಕ್ ಆಟೋ, ತ್ರಿಚಕ್ರ ವಾಹನ ಹಾಗೂ ಸಿಂಟೆಕ್ಸ್ ವಿತರಿಸಿ ಮಾತನಾಡಿದರು.

ಅಮೃತ ನಗರೋತ್ಥಾನದ 4ನೇ ಹಂತದ ಯೋಜನೆಯಡಿ ಬಡ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ₹5.40 ಲಕ್ಷದ 11 ಎಲೆಕ್ಟ್ರಿಕ್ ಆಟೋ ಒಟ್ಟು ₹64 ಲಕ್ಷ, ₹24 ಲಕ್ಷದ 14 ತ್ರಿಚಕ್ರ ವಾಹನ, 965 ಸಿಂಟೆಕ್ಸ್ ಸೇರಿದಂತೆ ಒಟ್ಟು ₹1.90 ಕೋಟಿ ವೆಚ್ಚವಾಗಿದ್ದು, ಈ ಹಿಂದೆ ಯಾರಾದರೂ ಆಟೋ ಅಥವಾ ಇಂತಹುದೇ ಸೌಲಭ್ಯಗಳನ್ನು ಪಡೆದುಕೊಂಡಿದ್ದಲ್ಲಿ, ಅಂತಹವರ ಮಾಹಿತಿಯನ್ನು ಆರ್‌ಟಿಒ ಅವರಿಂದ ದೃಢೀಕರಣ ಪಡೆದು ತಕ್ಷಣವೇ ಪೌರಾಯುಕ್ತರ ಅವರ ಗಮನಕ್ಕೆ ತರಬೇಕು. ನಿಜವಾದ ಅರ್ಹರು ಮತ್ತು ತೀರಾ ಅಗತ್ಯವಿರುವವರಿಗೆ ಮೊದಲ ಆದ್ಯತೆಯ ಮೇರೆಗೆ ಈ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲಾಗುವುದು. ಒಂದು ವೇಳೆ ಮೊದಲು ಪಡೆದಿರುವ ಬಗ್ಗೆ ಮಾಹಿತಿ ತಿಳಿದಬಂದಲ್ಲಿ ವಾಹನ ಹಿಂಪಡೆಯಲಾಗುತ್ತದೆ ಎಂದರು.

ಈ ವೇಳೆ ನಗರಸಭೆ ಪೌರಾಯುಕ್ತ ಜಗದೀಶ ಹುಲಗಜ್ಜಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸದಾನಂದ ಸಾಲೇಹಿತ್ತಲ್, ನಾರಾಯಣ ನಾಯಕ ಮತ್ತಿತರರು ಇದ್ದರು.