ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಇತಿಹಾಸದಲ್ಲೇ ಮೊದಲು: ಸಚಿವ ಶಿವರಾಜ ತಂಗಡಗಿ

| Published : May 16 2025, 01:48 AM IST

ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಇತಿಹಾಸದಲ್ಲೇ ಮೊದಲು: ಸಚಿವ ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರವು ಕಂದಾಯ ಗ್ರಾಮಗಳನ್ನು ಘೋಷಿಸಿದ್ದು ಬಿಟ್ಟರೆ ಏನೂ ಮಾಡಲಿಲ್ಲ.

ಸಾಧನಾ ಸಮಾವೇಶದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಹಿಂದಿನ ಬಿಜೆಪಿ ಸರ್ಕಾರವು ಕಂದಾಯ ಗ್ರಾಮಗಳನ್ನು ಘೋಷಿಸಿದ್ದು ಬಿಟ್ಟರೆ ಏನೂ ಮಾಡಲಿಲ್ಲ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿರುವ ಹಟ್ಟಿ, ಹಾಡಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಮಾಡಿರುವುದು ಇತಿಹಾಸದಲ್ಲೇ ಮೊದಲು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೇ ೨೦ರಂದು ಹೊಸಪೇಟೆಯಲ್ಲಿ ನಡೆಯುವ ರಾಜ್ಯ ಸರ್ಕಾರದ ೨ ವರ್ಷಗಳ ಸಾಧನಾ ಸಮಾವೇಶದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವುದರಿಂದ ಅಧಿಕಾರಿಗಳು ಅವರನ್ನು ಸುರಕ್ಷಿತವಾಗಿ ಕರೆತಂದು, ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದರು.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಪ್ರಣಾಳಿಕೆಯಂತೆ ಅಧಿಕಾರಿ ವಹಿಸಿಕೊಂಡ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹಣ ಹಾಕುವಂಥ ರಾಜ್ಯವೆಂಬ ಹೆಗ್ಗಳಿಕೆಯು ನಮ್ಮ ಸರ್ಕಾರದ್ದು ಎಂದು ತಿಳಿಸಿದರು.

ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಗ್ಯಾರಂಟಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದರಿಂದ ರಾಜ್ಯದ ಬಡಕುಟುಂಬಗಳಿಗೆ ಆಸರೆಯಾಗಿದೆ. ಅಲ್ಲದೆ, ಕಂದಾಯ ಗ್ರಾಮಗಳನ್ನು ಜಾರಿಗೆ ತಂದ ಕಾರಣದಿಂದ ತಾಲೂಕಿನಲ್ಲಿ ೧೦೪ ಕಂದಾಯ ಗ್ರಾಮಗಳಿದ್ದು, ೩ ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲು ನೋಂದಣಿ ಮಾಡಲಾಗಿದೆ ಎಂದರು.

ತಹಸೀಲ್ದಾರ್ ವಿ.ಕೆ. ನೇತ್ರಾವತಿ ಮಾತನಾಡಿ, ೧೦೪ ಕಂದಾಯ ಗ್ರಾಮ, ೩ ಸಾವಿರ ಫಲಾನುಭವಿಗಳು

ಕೂಡ್ಲಿಗಿ ತಾಲೂಕಿನಲ್ಲಿ ೧೦೪ ಕಂದಾಯ ಗ್ರಾಮಗಳಿದ್ದು, ಈಗಾಗಲೇ ೩ ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ನೋಂದಣಿ ಮಾಡಿಸಲಾಗಿದೆ. ಪೋಡಿಮುಕ್ತ ೭ ಸಾವಿರ, ಪೌತಿಮುಕ್ತ ೧೦೦ ಹಾಗೂ ಧರಖಾಸ್ತು ಪೋಡಿ ೫೦ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು. ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತರಲು ಕಂದಾಯ ಗ್ರಾಮಕ್ಕೆ ತಲಾ ಒಂದು ಬಸ್ ವ್ಯವಸ್ಥೆ ಹಾಗೂ ಅದರ ಉಸ್ತುವಾರಿಗೆ ಸ್ಥಳೀಯ ಅಧಿಕಾರಿಗಳು, ಗ್ರಾಪಂವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ತಾಪಂ ಇಒ ನರಸಪ್ಪ ಮಾತನಾಡಿದರು. ಈ ಸಂದರ್ಭ ಕೊಟ್ಟೂರು ತಹಸೀಲ್ದಾರ್ ಜಿ.ಕೆ.ಅಮರೇಶ್, ತಾಪಂ ಇಒ ಆನಂದ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಇದ್ದರು.