ನದಿ ಜೋಡಣೆ ಯೋಜನೆಯ ಡಿಪಿಆರ್ ನಡೆಸಲು ಸೂಚನೆ ನೀಡಿರುವ ಆದೇಶ ಜಿಲ್ಲಾಡಳಿತದ ಬಳಿಯಿಲ್ಲ. ಯಾವ ಹಂತದಲ್ಲಿದೆ ಎಂಬ ಮಾಹಿತಿ ಪಡೆಯಲು ಕೆಲವರು ಮನವಿ ಮಾಡಿದ್ದಾರೆ. ಇದರ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ನದಿ ಜೋಡಣೆ ಯೋಜನೆಯ ಡಿಪಿಆರ್ ನಡೆಸಲು ಸೂಚನೆ ನೀಡಿರುವ ಆದೇಶ ಜಿಲ್ಲಾಡಳಿತದ ಬಳಿಯಿಲ್ಲ. ಯಾವ ಹಂತದಲ್ಲಿದೆ ಎಂಬ ಮಾಹಿತಿ ಪಡೆಯಲು ಕೆಲವರು ಮನವಿ ಮಾಡಿದ್ದಾರೆ. ಇದರ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೃಹತ್ ಯೋಜನೆಗಳು ಆ ಇಲಾಖೆ ಮೂಲಕ ನಡೆಯುತ್ತದೆ. ಸರ್ಕಾರದ ಬಳಿಯಲ್ಲಿರುವ ಅಧಿಕೃತ ಮಾಹಿತಿ ತರಿಸಿಕೊಂಡು ಜನರಿಗೆ ತಿಳಿಸುತ್ತೇವೆ.

ಬನವಾಸಿ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ಮಾಡುವಂತೆ ಕಳೆದ ಬಾರಿ ತಿಳಿಸಿದ್ದರು. ಕಂದಾಯ ಸಚಿವ ಕೃಷ್ಣಬೈರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಬನವಾಸಿ ಭಾಗದ ಅಭಿವೃದ್ಧಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಹಿಂದೆ ಸಹಾಯಕ ಆಯುಕ್ತರ ವತಿಯಿಂದ 22 ಕೋಟಿ ಮಾಸ್ಟರ್‌ ಪ್ಲ್ಯಾನ್‌ ಸಲ್ಲಿಕೆಯಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಅನುದಾನ ಘೋಷಣೆ ಬಗ್ಗೆ ತೀರ್ಮಾನಿಸಲಾಗಿದೆ. ₹20 ಲಕ್ಷ ಕೆಲಸ ಅಂತಿಮಗೊಳಿಸಲಾಗಿದ್ದು, ಸಭೆಯಲ್ಲಿ ಕೆಲಸ ಅಂತಿಮಗೊಳಿಸಲಾಗಿದೆ ಎಂದರು.

ಕದಂಬೋತ್ಸವ ಆಚರಣೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜಿಲ್ಲಾಡಳಿತದಿಂದ ಪತ್ರ ಬರೆಯಲಾಗಿದೆ. ಸದ್ಯದಲ್ಲಿಯೇ ದಿನಾಂಕ ಘೋಷಣೆಯಾಗಲಿದೆ. ಕಳೆದ ಬಾರಿ ಕದಂಬೋತ್ಸವ ಆಚರಣೆಗೆ ಸರ್ಕಾರದ ₹2 ಕೋಟಿ ಅನುದಾನದಲ್ಲಿ ₹1.90 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಇನ್ನೂ ₹10 ಲಕ್ಷ ಮಾತ್ರ ಬಾಕಿ ಉಳಿದಿದೆ. ಅದು ಬಿಡುಗಡೆಗೊಳ್ಳಲಿದೆ. ಜಿಲ್ಲೆಯಲ್ಲಿ ಅಡಕೆ ಕೊಳೆ ಮತ್ತು ಎಲೆಚುಕ್ಕಿ ರೋಗದಿಂದ ಹಾನಿಯಾದ ಕುರಿತು ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯಿಂದ ವಿಳಂಬವಾಗಿತ್ತು. ಹೆದ್ದಾರಿ ನಿರ್ಮಾಣಕ್ಕೆ ಸಾರ್ವಜನಿಕರು ಸ್ವಪ್ರೇರಣೆಯಿಂದ ಜಾಗ ಬಿಟ್ಟುಕೊಡುತ್ತಿದ್ದಾರೆ. ಕಳೆದ 3 ತಿಂಗಳ ಹಿಂದೆ ಜಂಟಿ ಸರ್ವೆ ನಡೆಸಿ, ಭೂಸ್ವಧೀನ ಪ್ರಕ್ರಿಯೆ ಮುಕ್ತಾಯಗೊಳಿಸಲಾಗಿದೆ. ಕಾಮಗಾರಿಗೆ ವೇಗ ಮತ್ತು ಧೂಳು ನಿಯಂತ್ರಣಕ್ಕೆ ನೀರು ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗುತ್ತದೆ ಎಂದರು.

ತಹಸೀಲ್ದಾರ ಪಟ್ಟರಾಜ ಗೌಡ ಇದ್ದರು.