ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ:ಜಿಲ್ಲೆಗೆ ಹೊಸ ಸಂಸದರು ಯಾರಾಗುತ್ತಾರೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ನೂತನ ಲೋಕಸಭಾ ಸದಸ್ಯರ ಘೋಷಣೆಗೆ ಜಿಲ್ಲಾಡಳಿತ ಕೂಡ ಸಿದ್ಧತೆಯನ್ನು ಮಾಡಿಕೊಂಡಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆಯು ಜೂ.4 ರಂದು ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದರು.ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಬೆಳಗಾವಿ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮತ ಎಣಿಕೆ ಆರಂಭಕ್ಕೆ ಮುನ್ನ ಮತಯಂತ್ರಳನ್ನು ಇರಿಸಿದ ಸ್ಟ್ರಾಂಗ್ ರೂಮ್‌ಗಳನ್ನು ಚುನಾವಣಾ ವೀಕ್ಷಕರು, ಉಮೇದುವಾರರು ಹಾಗೂ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುವುದು.
ಬೆಳಿಗ್ಗೆ 8 ಗಂಟೆಯಿಂದ ಇವಿಎಂ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತಗಳ ಎಣಿಕೆಗೆ ಎರಡು ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತಾಂತ್ರಿಕ ತೊಂದರೆ ನಿರ್ವಹಣೆಗೆ ಭಾರತ ಚುನಾವಣಾ ಆಯೋಗವು ಎಂಟು ಜನ ತಂತ್ರಜ್ಞರನ್ನು ನಿಯೋಜಿಸಿದೆ. ಇದುವರೆಗೆ ಪೋಸ್ಟಲ್ ಬ್ಯಾಲೆಟ್ -11,148 ಮತಗಳು ಬಂದಿವೆ. ಮತ ಎಣಿಕೆಯ ದಿನ ಬೆಳಿಗ್ಗೆ 8 ಗಂಟೆಯವರೆಗೂ ಪೋಸ್ಟಲ್ ಬ್ಯಾಲೆಟ್ ಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.ಮತ ಎಣಿಕೆಗಾಗಿ ಒಟ್ಟಾರೆ 552 ಜನ ಮೇಲ್ವಿಚಾರಕು/ಮೈಕ್ರೋ ಅಬ್ಸರ್ವರ್ ಹಾಗೂ ಮತ ಎಣಿಕೆ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಜನರು ಹಾಗೂ ಮೂವರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತ ಎಣಿಕಾ ಕೇಂದ್ರದಲ್ಲಿ ಉಪಸ್ಥಿತರಿರುವ ಏಜೆಂಟ್‌ರಿಗೆ ನಮೂನೆ 7 ರಲ್ಲಿನ ಆದ್ಯತೆಯಂತೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.ಮೊಬೈಲ್, ಬೀಡಿ, ಸಿಗರೇಟ್ ನಿಷೇಧ:
ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಬಳಕೆಯನ್ನು ನಿರ್ಬಂಧಿಸಲಾಗಿದೆ. ಇದಲ್ಲದೇ ತಂಬಾಕು, ಬೀಡಿ, ಸಿಗರೇಟ್, ಪಾನ್ ವಗೈರೆ ತರಲು ಅವಕಾಶವಿಲ್ಲ. ಮತ ಎಣಿಕೆ ಸಿಬ್ಬಂದಿಗೆ ಅಲ್ಪೋಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳು ಮತ್ತು ಏಜೆಂಟರುಗಳ ಅನುಕೂಲಕ್ಕಾಗಿ ಪೇಡ್ ಕ್ಯಾಂಟೀನ್ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ:ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಇದಲ್ಲದೇ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸಿಆರ್‌ಪಿಸಿ ಕಲಂ 144 ರ ಅನ್ವಯ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದ್ದು, ಈ ವ್ಯಾಪ್ತಿಯಲ್ಲಿ ಮೆರವಣಿಗೆ ಅಥವಾ ವಿಜಯೋತ್ಸವಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂದು ಹೇಳಿದರು.ಇದಾದ ಬಳಿಕ ಮತ ಎಣಿಕೆ ಕೊಠಡಿ, ಪಾರ್ಕಿಂಗ್, ಭದ್ರತಾ ಸಿಬ್ಬಂದಿ ನಿಯೋಜನೆ, ಊಟೋಪಹಾರ ವ್ಯವಸ್ಥೆ, ಮಾಧ್ಯಮ ಕೇಂದ್ರ ಮತ್ತಿತರ ಸೌಕರ್ಯಗಳ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತ್ತು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮತ್ತಿತರ ಅಧಿಕಾರಿಗಳು ಪರಿಶೀಲಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್.ಪಿ.ಎನ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ತಹಸೀಲ್ದಾರ್ ಸಿದ್ದರಾಯ ಭೋಸಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.2ಬಿಇಎಲ್2--------------
ಬಾಕ್ಸ್ಹಲವೆಡೆ ಪೊಲೀಸ್ ಬಿಗಿ ಭದ್ರತೆಇದೇ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು, ಒಟ್ಟು ಐದು ಕೆಎಸ್ಆರ್ ಪಿ ತುಕಡಿಗಳು ಒಳಗೊಂಡಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ ಎಂದು ಹೇಳಿದರು.ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ನಗರದ 300 ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗುತ್ತದೆ. ಮತ ಎಣಿಕೆ ಕೇಂದ್ರದಲ್ಲಿ ಇಬ್ಬರು ಡಿಸಿಪಿ ನೇತೃತ್ವದಲ್ಲಿ 13 ಇನ್ಸಪೆಕ್ಟರ್ ಗಳು ಕಾರ್ಯನಿರ್ವಹಿಸಲಿದ್ದಾರೆ. ಸುಗಮ ಸಂಚಾರ, ಪಾರ್ಕಿಂಗ್ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಾಕ್ಸ್ಶೇ.71.49 ರಷ್ಟು ಮತದಾನಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ಒಟ್ಟಾರೆ ಶೇ.71.49 ರಷ್ಟು ಮತದಾನವಾಗಿದೆ. ಒಟ್ಟು 19,23,788 ಮತದಾರರ ಪೈಕಿ 13,75,383 ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸುಗಮ ಹಾಗೂ ಪಾರದರ್ಶಕ ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.