ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಹೊರ ವಲಯದ ಭೂತನಾಳ ಕೆರೆ ಬಳಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ತ್ರಿ-ಸ್ಟಾರ್ ಹೋಟೆಲ್ ಕಟ್ಟಡಕ್ಕೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.2019ನೇ ಸಾಲಿನಲ್ಲಿ ರಾಜ್ಯಾದಂತ 04 ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ತ್ರೀ-ಸ್ಟಾರ್ ಹೋಟೆಲ್ ಮಂಜೂರಾಗಿವೆ. ಈ ಪೈಕಿ ನಗರದ ಹೊರವಲಯದ ಬೂತನಾಳ ಕೆರೆ ಪಕ್ಕದಲ್ಲಿ 5 ಎಕರೆ ಜಮೀನಿನಲ್ಲಿ ತ್ರೀ-ಸ್ಟಾರ್ ಹೋಟೆಲ್ ಕಟ್ಟಡವನ್ನು ಮೆ.ರೈಟ್ಸ್ ಸಂಸ್ಥೆಯ ಮೂಲಕ ಅಂದಾಜು ಮೊತ್ತ ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರಸ್ತುತ ಅಂತಿಮ ಹಂತದಲ್ಲಿರುವ ಕಾಮಗಾರಿಯ ಕಾಂಪೌಂಡ ವಾಲ್ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲು ಸಂಬಂಧಪಟ್ಟ ಅನುಷ್ಠಾನ ಸಂಸ್ಥೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚಿಸಿದರು.
ಈ ಹೋಟೆಲ್ ಯೋಜನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ, ಲಿಫ್ಟ್ ವ್ಯವಸ್ಥೆ ಕಾರ್ಯಾಚರಣೆ ಮತ್ತು ನೀರಿನ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರಗೆ ಸೂಚಿಸಿದರು. ಅಲ್ಲದೇ ಬಾಕಿ ಇರುವ ಫರ್ನಿಚರ್ ವ್ಯವಸ್ಥೆ, ಸ್ಟೀಮಿಂಗ್ ಫೂಲ್ ನಿರ್ಮಾಣ, ಗಾರ್ಡನಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತವಾದ ಪ್ರಸ್ತಾವನೆ ತಯಾರಿಸಿ ಆಯುಕ್ತರು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲು ಸೂಚಿಸಿದರು.ವಿಜಯಪುರ ತಹಸೀಲ್ದಾರ ಪ್ರಶಾಂತ ಚನ್ನಗೊಂಡ, ಕಂದಾಯ ನಿರೀಕ್ಷಕ ಸಂತೋಷ ಪಾಟಕ, ಕಂದಾಯ ನಿರೀಕ್ಷಕರು, ಮಹಾಲ್ ಬಾಗಾಯತ್ ಗ್ರಾಮ ಆಡಳಿತಾಧಿಕಾರಿಗಳು, ಅಧಿಕಾರಿ ಬಿ.ಎಚ್.ಕುಡಪಲಿ, ರೈಟ್ಸ್ ಸಂಸ್ಥೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.