ಸಾಹಿತ್ಯಾಸಕ್ತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲ ರೀತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇದೆ. ಹೀಗಾಗಿಯೇ ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿವೆ ಎಂದು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಾಹಿತ್ಯಾಸಕ್ತರಿಗೆ ಕೊಡಗು ಜಿಲ್ಲೆಯಲ್ಲಿ ಎಲ್ಲ ರೀತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇದೆ. ಹೀಗಾಗಿಯೇ ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪ್ರಕಾರಗಳು ಶ್ರೀಮಂತವಾಗಿವೆ ಎಂದು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.ಹುಣಸೂರು ಬಳಿಯಲ್ಲಿ ನೆಲಸಿರುವ ಸುಂಟಿಕೊಪ್ಪ ಮೂಲದ ನಾಡಿನ ಹಿರಿಯ ಸಾಹಿತಿ ಅಬ್ದುಲ್ ರಶೀದ್‌ ಮೇ 29 ಮತ್ತು 30 ರಂದು ಸುಂಟಿಕೊಪ್ಪದಲ್ಲಿ ಜರುಗುವ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು. ಈ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಅವರ ಜೊತೆ ಅವರ ಆದಿವಾಸಿ ಫಾರ್ಮ್ ನಲ್ಲಿ ಸಂವಾದ ನಡೆಯಿತು.ಪತ್ರಕರ್ತರೊಂದಿಗಿನ ಸಂವಾದ ಸಂದರ್ಭ ತನ್ನ ಅಭಿಪ್ರಾಯವ್ಯಕ್ತಪಡಿಸಿದ ಅಬ್ದುಲ್ ರಶೀದ್,, ಸುಂದರ ಕೊಡಗು ವಿಭಿನ್ನ ಧಾರ್ಮಿಕ, ಸಮುದಾಯಗಳ ಸಹಬಾಳ್ವೆಗೆ ಸಾಕ್ಷಿಯಾಗಿ ವಿಶಿಷ್ಟ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಜನರನ್ನು ಹೊಂದಿದೆ. ಕನ್ನಡ, ಕೊಡವ, ಅರೆಭಾಷೆ, ತುಳು, ಮಲಯಾಳ, ಹಿಂದಿ, ತೆಲುಗು, ತಮಿಳು ಹೀಗೆ ವಿವಿಧ ಭಾಷೆಗಳನ್ನು ಕೊಡಗಿನ ಜನತೆ ಬಲ್ಲವರಾಗಿದ್ದರೂ ಬಹುತೇಕ ಕನ್ನಡವೇ ಕೊಡಗಿನ ಜನತೆಯ ಪ್ರೀತಿಯ ಭಾಷೆಯಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಜನರು ಕನ್ನಡವನ್ನು ಹೆಚ್ಚು ಪ್ರೀತಿಸುತ್ತಾರೆ. ಕೊಡಗಿನಲ್ಲಿ ಕಂಡು ಬರುವ ಕನ್ನಡಾಭಿಮಾನ ಬೇರೆಲ್ಲೂ ಕಾಣ ಸಿಗಲಾರದು. ಶ್ರೀಮಂತಿಕೆಯ ಜತೆ ಕಡು ಬಡವರೂ ಕೊಡಗಿನಲ್ಲಿದ್ದಾರೆ. ಹೀಗಿದ್ದರೂ ಎಲ್ಲ ರೀತಿಯ ಜನರ ನಡುವೆ ಸೌಹಾರ್ದತೆ ಇದೆ. ಇದುವೇ ಕೊಡಗಿನ ಹೆಗ್ಗಳಿಕೆ ಎಂದು ನುಡಿದರು.ತಾನು ಹುಟ್ಟಿ ಬೆಳೆದ ಸುಂಟಿಕೊಪ್ಪದಲ್ಲಿ ಆಯೋಜಿಸಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನ್ನ ತಂದೆ ಇಸ್ಮಾಯಿಲ್ ಸ್ಥಳೀಯ ಸ್ಯಾಂಡಲ್ ವುಡ್ ಕಾಫೀ ತೋಟದಲ್ಲಿ ಮೂರು ದಶಕಗಳ ಕಾಲ ರೈಟರ್ ಆಗಿ ಕಾರ್ಯನಿರ್ವಹಿಸಿದ್ದರು. ಆ ತೋಟದ ಮಾಲೀಕರಾಗಿದ್ದ ಎಸ್.ಎಂ. ಸಯ್ಯದ್ ತನ್ನನ್ನು ಓದಲು ಪ್ರೇರೇಪಿಸಿ ಆರ್ಥಿಕ ನೆರವು ಕೂಡ ನೀಡಿದ್ದರು. ಅಂತೆಯೇ ಸುಂಟಿಕೊಪ್ಪದಲ್ಲೇ ತನ್ನ ತಾಯಿ ಫಾತಿಮ ಇಂದಿಗೂ ವಾಸವಾಗಿದ್ದಾರೆ. ಕೊಡಗಿನ ಅನೇಕ ಪ್ರದೇಶಗಳಂತೆ ತಾನು ಆಡಿ ಬೆಳೆದ ಸುಂಟಿಕೊಪ್ಪದ ಬಗ್ಗೆ ಹಲವು ಸುಮಧುರ ನೆನಪುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಬಾಲ್ಯ ಕಳೆದ ತೋಟ ಹಾಗೂ ತಂದೆಯವರ ಮೈದಾನಿ (ಅಂತ್ಯಕ್ರಿಯೆ ಮಾಡಿದ ಸ್ಥಳ) ಇರುವ ಗದ್ದೆಹಳ್ಳದ ಬಳಿಯ ಸಭಾಂಗಣದಲ್ಲೇ ಆಯೋಜಿತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದು ಹೆಚ್ಚು ಸಂತೋಷ ತಂದಿದೆ ಎಂದರು.

ಕುವೆಂಪು, ದೇವನೂರ ಮಹದೇವ, ತೇಜಸ್ವಿ, ಅನಂತಮೂರ್ತಿ, ಪಿ. ಲಂಕೇಶ್, ಎಂ.ಕೆ. ಇಂದಿರಾ, ಎಂ. ವ್ಯಾಸ, ಕೆ.ಟಿ. ಗಟ್ಟಿ, ಯಶವಂತ ಚೆತ್ತಾಲ, ಮಲಯಾಳದ ಖ್ಯಾತ ಲೇಖಕ ವೈಕಂ ಮಹಮ್ಮದ್ ಬಶೀರ್ ತನ್ನ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ಲೇಖಕರಾಗಿದ್ದಾರೆ ಎಂದು ಹೇಳಿದರು.

ಯುವ ಪೀಳಿಗೆ ನವ ಮಾಧ್ಯಮಕ್ಕೆ ಮಾರು:

ಯುವ ಪೀಳಿಗೆ ಸಾಹಿತ್ಯ ಪ್ರಕಾರಗಳನ್ನು ಓದುತ್ತಿಲ್ಲ ಎಂಬ ವಾದವನ್ನು ಅಲ್ಲಗೆಳೆದ ಅವರು, ಆಧುನೀಕತೆಯ ನಾಗಾಲೋಟದಲ್ಲಿ ಸಾಹಿತ್ಯ ಓದಲು ನಾನಾ ಮಾಧ್ಯಮಗಳಿವೆ. ಇದನ್ನು ಬಳಸಿಕೊಂಡವರು ಸಾಹಿತ್ಯವನ್ನು ತಮಗೆ ನಿಲುಕುವ ನವ ಮಾಧ್ಯಮಗಳ ಮೂಲಕ ಓದುತ್ತಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾಲ ಹಾಳಾಗಿದೆ ಎಂದು ಖಂಡಿತಾ ಹೇಳಲಾಗದು. ಜನರು ಓದುವ ಮಾಧ್ಯಮ ಬದಲಾಗಿದೆ ಎಂಬುದು ವಾಸ್ತವ. ಪುಸ್ತಕದ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲ ವಿಚಾರಗಳನ್ನೂ ಸಾಹಿತ್ಯ ಸೇರಿಕೊಂಡಂತೆ ಓದುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು. ಲೇಖಕರಿಗೆ ಹೊಸ ವಿಚಾರಗಳು ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಲಭ್ಯವಿದೆ. ಆದರೆ ಮತ್ತೊಬ್ಬ ಲೇಖಕನ ಶೈಲಿಯನ್ನು ಅನುಕರಿಸಲು ಹೋಗದೆ ತನ್ನದೇ ಶೈಲಿಯಲ್ಲಿ ಬರೆಯುವ ಹವ್ಯಾಸವನ್ನು ಪ್ರತಿ ಹೊಸ ಲೇಖಕನೂ ರೂಢಿಸಿಕೊಂಡಾಗ ಆತನ ಸಾಹಿತ್ಯ ಶೈಲಿ ಬಹು ಕಾಲ ಬಾಳಿಕೆಯಲ್ಲಿರುತ್ತದೆ ಎಂದು ಸಲಹೆ ನೀಡಿದರು.ಹುಣಸೂರು ಬಳಿಯ ಬನ್ನಿಕುಪ್ಪೆಯಲ್ಲಿ 4 ಎಕರೆ ಜಾಗದಲ್ಲಿ ಮಾವು, ಬಾಳೆ, ತೆಂಗಿನ ಕೃಷಿ ಸೇರಿದಂತೆ ವಿವಿಧ ಕೖಷಿ ಮೂಲಕ ಕೖಷಿಕನ ಜೀವನ ಕಂಡುಕೊಂಡಿರುವ ತಾನು ಈ ಹೊಸ ವೖತ್ತಿಯಲ್ಲಿಯೇ ಸಂಭ್ರಮ್ರ ಕಂಡುಕೊಂಡಿರುವುದಾಗಿ ನುಡಿದರು.ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಸುದೀರ್ಘ 36 ವರ್ಷ ಕಾರ್ಯ ನಿರ್ವಹಿಸಿರುವ ಅಬ್ದುಲ್ ರಶೀದ್ ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ 6 ವರ್ಷಗಳಲ್ಲಿ ಕಾವೇರಿ ಎಕ್ಸ್ ಪ್ರೆಸ್, ಹಳ್ಳಿ ರೆಡಿಯೋ, ಗಿರಿಜನ ಸಂಗೀತ ಸಭಾ, ಕಾಡಿನ ಮಕ್ಕಳ ರೆಡಿಯೋ ಹಬ್ಬ ಸೇರಿದಂತೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಖಜಾಂಜಿ ಕೆ.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷ ನವೀನ್ ಚಿಣ್ಣಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಎನ್., ರವಿ ಕುಮಾರ್ ಸಂವಾದದಲ್ಲಿ ಹಾಜರಿದ್ದರು.

....ಬಾಕ್ಸ್...ಅಬ್ದುಲ್ ರಶೀದ್ ಹುಟ್ಟಿದ್ದು ಕೊಡಗಿನ ಸುಂಟಿಕೊಪ್ಪ ಸ್ಯಾಂಡಲ್ ವುಡ್ ಕಾಫೀ ತೋಟದಲ್ಲಿ. ತಂದೆ ಎಚ್.ಎಂ. ಇಸ್ಮಾಯಿಲ್, ತಾಯಿ ಫಾತಿಮಾ. ಓದಿದ್ದು ಸುಂಟಿಕೊಪ್ಪ ಸಂಪಾಜೆ ಮಾದಾಪುರ ಮತ್ತು ಮೈಸೂರು. 2 ಕಾದಂಬರಿಗಳನ್ನು, 6 ಕಥಾ ಸಂಕಲನಗಳನ್ನು, 3 ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. 5 ಪತ್ರಿಕೆಗಳಲ್ಲಿ ವಾರದ ಅಂಕಣಗಳನ್ನು ಬರೆದಿದ್ದು, ಅದೆಲ್ಲವೂ ಅಪಾರ ಜನಪ್ರಿಯತೆ ಪಡೆದಿವೆ. ಇವರ ಕಥೆ, ಕವನಗಳು ಹಾಗೂ ಕಾದಂಬರಿಯ ಭಾಗಗಳು ಇಂಗ್ಲಿಷ್, ಸ್ವೀಡಿಷ್, ಜರ್ಮನ್, ಹಿಂದಿ ಹಾಗೂ ಇತರ ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಬಾನುಲಿ ಕ್ಷೇತ್ರದ ಪ್ರಸಾರಕರಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಆಕಾಶವಾಣಿ ವತಿಯಿಂದ ಐರ್ಲೆಂಡ್‌ ರೇಡಿಯೋ ನಿರ್ಮಾಪಕರಾಗಿ ಆಯ್ಕೆ. 19 ವರ್ಷಗಳಿಂದ ಕನ್ನಡದ ಜನಪ್ರಿಯ ಅಂತರ್ಜಾಲ ಸಾಹಿತ್ಯ ಪತ್ರಿಕೆ ‘ಕೆಂಡ ಸಂಪಿಗೆ’ಯ ಸಂಪಾದಕರಾಗಿದ್ದಾರೆ. ಮೈಸೂರು ಪೋಸ್ಟ್ ಇವರ ವೈಯುಕ್ತಿಕ ಬರಹಗಳ ಬ್ಲಾಗ್.