ಸಾರಾಂಶ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಬಹು ನಿರೀಕ್ಷಿತ ರಾಜ್ಯ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ಜಿಲ್ಲೆಯ ಜನರು ಆಸೆ ಕಣ್ಣಿನಿಂದ ಬಜೆಟ್‌ನತ್ತ ಗಮನ ಹರಿಸಿದ್ದಾರೆ. ಹಿಂದಿನ ಬಜೆಟ್‌ಗಳಲ್ಲಿ ಜಿಲ್ಲೆಯ ಯಾವುದೇ ಪ್ರಮುಖ ಯೋಜನೆಗಳು ಘೋಷಣೆಯಾಗದೇ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಮೇಲೆ ಸಹಜವಾಗಿಯೇ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.
ಮಿನಿ ಪಂಜಾಬ್ ಮಾಡಬಹುದು: ಗದಗ ಜಿಲ್ಲೆಯ ಒಂದು ಗಡಿಯಲ್ಲಿ ಮಲಪ್ರಭೆ, ಇನ್ನೊಂದು ಗಡಿಯಲ್ಲಿ ತುಂಗಭದ್ರೆ ಹರಿಯುತ್ತಿದ್ದು ಇದರ ಮಧ್ಯೆ ಇರುವ 7 ತಾಲೂಕುಗಳ ವ್ಯಾಪ್ತಿಯಲ್ಲಿ 2.65 ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ಜಿಲ್ಲೆಯನ್ನು ಸಮೃದ್ಧವಾಗಿ ರೂಪಿಸುವಲ್ಲಿ ಇದುವರೆಗೂ ಆಳಿರುವ ಎಲ್ಲಾ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಅದರಲ್ಲಿಯೂ ಫಲವತ್ತಾದ ಕಪ್ಪು ಮಣ್ಣಿನ ಭೂಮಿಗೆ ಸಮೃದ್ಧವಾದ ನೀರಾವರಿ ಸೌಲಭ್ಯವನ್ನು ಕಲ್ಪಿಸಿ, ಆಹಾರ ಸಂಸ್ಕರಣಾ ಘಟಕಗಳ ಸರಪಳಿಯನ್ನೇ ಸೃಷ್ಟಿಸಿದಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಜಿಲ್ಲೆಯ ಬೆಳೆಗೆ ಉತ್ತಮ ಬೆಲೆ ಸಿಗಲಿದ್ದು, ಆ ಮೂಲಕ ಗದಗ ಜಿಲ್ಲೆ ಮಿನಿ ಪಂಜಾಬ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂಥ ಪ್ರಯತ್ನ ಈ ಬಾರಿಯ ಬಜೆಟ್‌ನಲ್ಲಿ ನಡೆಯಲಿ ಎನ್ನುವ ನಿರೀಕ್ಷೆ ವ್ಯಾಪಕವಾಗಿದೆ.ಏನಾಯ್ತು 804 ಕೋಟಿ ಪ್ರಸ್ತಾವನೆ: 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಎಚ್.ಕೆ. ಪಾಟೀಲ ಅವರಿಗೆ ಜಿಲ್ಲಾ ಉಸ್ತುವಾರಿ ಜತೆಗೆ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿತ್ತು. ಜಿಲ್ಲೆಯಲ್ಲಿ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಎಚ್ಕೆ ಒಂದು ವಿಶೇಷ ಸಮಿತಿ ರಚನೆ ಮಾಡಿದ್ದರು. ತಿಂಗಳುಗಟ್ಟಲೇ ಆ ಸಮಿತಿ ಜಿಲ್ಲೆಯ ಸಂಪೂರ್ಣ ಅಧ್ಯಯನ ಮಾಡಿತ್ತು. ಜಿಲ್ಲೆಯ ಪ್ರವಾಸೋದ್ಯಮಕ್ಕೆ 804 ಕೋಟಿ ಅವಶ್ಯಕತೆ ಇದೆ ಎಂದು ವರದಿಯನ್ನು ನೀಡಿತ್ತು. ಈ ವರದಿಯನ್ನು ಸಚಿವ ಎಚ್.ಕೆ. ಪಾಟೀಲ ಸರ್ಕಾರಕ್ಕೂ ಸಲ್ಲಿಸಿದ್ದರು. ಆದರೆ ಕಳೆದ ಬಜೆಟ್‌ನಲ್ಲಿ ಸಮಿತಿ ವರದಿಯ ಪ್ರಸ್ತಾಪವೇ ಆಗಲಿಲ್ಲ. ಈ ಬಜೆಟ್ ನಲ್ಲಾದರೂ ಇದಕ್ಕೆ ಹಣ ಸಿಗುತ್ತಾ? ಸಲ್ಲಿಕೆಯಾಗಿರುವ 804 ಕೋಟಿ ಯೋಜನೆ ಏನಾಯ್ತು ಎನ್ನುವ ಪ್ರಶ್ನೆ ಎದುರಾಗಿದೆ.
ರಾಜ್ಯದಲ್ಲಿಯೇ ಅತೀ ಹೆಚ್ಚು ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿ ಹಾಗೂ ಹೆಸರುಕಾಳು ಬೆಳೆಯುವ ಜಿಲ್ಲೆ ಎನ್ನುವ ಹಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಕೃಷಿ, ನೀರಾವರಿ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಒಂದು ಗೂಡಿಸಿ ರೈತ ಸ್ನೇಹಿ, ಪರಿಸರ ಸ್ನೇಹಿ ಉದ್ಯಮ ಸ್ಥಾಪಿಸಬೇಕು, ಮಾಗಡಿ ಪಕ್ಷಿಧಾಮ, ಕಪ್ಪತ್ತಗುಡ್ಡವನ್ನು ಪ್ರವಾಸೋದ್ಯಮ ತಾಣವಾಗಿ ಸಮಗ್ರ ಅಭಿವೃದ್ಧಿ ಮಾಡುವುದು, ಗದಗ ಬೆಟಗೇರಿ ಅವಳಿ ನಗರದ ಜನರು ಹಲವಾರು ದಶಕಗಳಿಂದ ಎದುರಿಸುತ್ತಿರುವ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಹೊಸ ಯೋಜನೆಗಳು ಈ ಬಜೆಟ್‌ನಲ್ಲಿ ಘೋಷಣೆಯಾಗಬೇಕಿದೆ.2024ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇನು?: ಗದಗ ಎಪಿಎಂಸಿ ಶೀತಲಗೃಹ ನಿರ್ಮಾಣ, ಜಾಲವಾಡಗಿ ಕೆರೆ ತುಂಬಿಸುವ ಯೋಜನೆ, ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ, ಶಿರಹಟ್ಟಿ ತಾಲೂಕಿನಲ್ಲಿ 100 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ, ಗದಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 450 ಆಸ್ಪತ್ರೆಗಳ ನೂತನ ಆಸ್ಪತ್ರೆಯ ನಿರ್ಮಾಣ, 10 ಕೋಟಿ ವೆಚ್ಚದಲ್ಲಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸ್ಥಾಪನೆ. ರೋಣ ಪಟ್ಟಣದಲ್ಲಿ ನಬಾರ್ಡ್ ಸಹಯೋಗದಲ್ಲಿ ಜಿಸಿಟಿಸಿ ಕೇಂದ್ರ ಸ್ಥಾಪನೆ ಘೋಷಣೆ ಮಾಡಲಾಗಿತ್ತು.
ಆಗಿದ್ದೇನು: 2024ರಲ್ಲಿ ಘೋಷಣೆ ಮಾಡಿದ್ದ 9 ಯೋಜನೆಗಳಲ್ಲಿ ಗದಗ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಸ್ಥಾಪನೆ, ರೋಣದಲ್ಲಿ ಜಿಸಿಟಿಸಿ ಕೇಂದ್ರ ಸ್ಥಾಪನೆ ಕಾರ್ಯ ಮಾತ್ರ ಪೂರ್ಣಗೊಂಡಿದ್ದು, 450 ಆಸ್ಪತ್ರೆಗಳ ನಿರ್ಮಾಣ ಕಾಮಗಾರಿ ಅಂತಿಮ ಅಂತದಲ್ಲಿದೆ. ಇನ್ನುಳಿದ 6 ಯೋಜನೆಗಳು ಕಳೆದ ಬಾರಿ ಘೋಷಣೆ ಮಾಡಿದ್ದ ಯೋಜನೆಗಳೇ ಇನ್ನು ಪ್ರಾರಂಭವಾಗಿಲ್ಲ. ಈ ಬಾರಿ ಹಳೆಯ ಯೋಜನೆಗೆ ವಿಶೇಷ ಅನುದಾನದೊಂದಿಗೆ ಹೊಸ ಯೋಜನೆಗಳು ಘೋಷಣೆಯಾಗಲಿ ಎನ್ನುವ ಒತ್ತಾಸೆ ಜಿಲ್ಲೆಯ ಜನರದ್ದಾಗಿದೆ.ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೇಕಾರಿಕೆಯಲ್ಲಿ ವಿಶೇಷ ನೈಪುಣ್ಯತೆಯನ್ನು ಹೊಂದಿರುವ ಮಾನವ ಸಂಪನ್ಮೂಲವಿದೆ. ಅದರ ಸದ್ಬಳಕೆಯಾಗಬೇಕು. ಇದರೊಟ್ಟಿಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಕಂಪನಿಗಳು ಮುಂದೆ ಬರುವಂತೆ ವಿಶೇಷ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ತಾತನಗೌಡ ಪಾಟೀಲ ಹೇಳಿದರು.