ಎಸ್‌ಎಸ್‌ಎಲ್‌ಸಿ ಫಲಿತಾಂಶ 100ಕ್ಕೆ 100ರಷ್ಟು ಆಗುವಂತೆ ಬೋಧಿಸಬೇಕು. ಉತ್ತಮ ಆಹಾರ ಮತ್ತು ಉತ್ತಮ ಶಿಕ್ಷಣ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟನೆ ಯೋಜನೆಯ ಜಂಟಿ ನಿರ್ದೇಶಕಿ ಹಾಗೂ ಜಿಲ್ಲೆಯ ನೋಡಲ್ ಅಧಿಕಾರಿ ಮಾಯಾದೇವಿ ಗಲಗಲಿ ಹೇಳಿದರು.
ನವಲಗುಂದ:
ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟನೆ ಯೋಜನೆಯ ಜಂಟಿ ನಿರ್ದೇಶಕಿ ಹಾಗೂ ಜಿಲ್ಲೆಯ ನೋಡಲ್ ಅಧಿಕಾರಿ ಮಾಯಾದೇವಿ ಗಲಗಲಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಶಾಲೆಯ ಕೊಠಡಿ, ಭೋಜನಾಲಯ, ವಿದ್ಯಾರ್ಥಿಗಳ ವಸತಿ ನಿಲಯ, ಶೌಚಾಲಯ, ಶಿಕ್ಷಕರ ವಸತಿ ಗೃಹ, ಗ್ರಂಥಾಲಯ, ಗಣಕಯಂತ್ರ ಕೊಠಡಿ, ಪ್ರಯೋಗಾಲಯ ವೀಕ್ಷಿಸಿ ಅಡುಗೆ ಕೋಣೆ ಹಾಗೂ ಶುದ್ಧ ಕುಡಿಯುವ ನೀರಿನ್ನು ಸ್ವಚ್ಛವಾಗಿಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶ 100ಕ್ಕೆ 100ರಷ್ಟು ಆಗುವಂತೆ ಬೋಧಿಸಬೇಕು. ಉತ್ತಮ ಆಹಾರ ಮತ್ತು ಉತ್ತಮ ಶಿಕ್ಷಣ ನೀಡಬೇಕೆಂದು ತಿಳಿಸಿದರು.
ನಂತರ ವಿದ್ಯಾರ್ಥಿಗಳಿದ್ದ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ವಸತಿ ನಿಲಯದ ಸೌಲಭ್ಯ ಹಾಗೂ ಶಿಕ್ಷಣ ಕುರಿತು ವಿಚಾರಿಸಿದರು. ತಮಗೆ ಇಲ್ಲಿ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಹೇಳಿದರು. ಇದೇ ವೇಳೆ ಯೋಗಾಸನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ರೋಹಿತಗೌಡ ಭರಮಗೌಡ್ರ ಹಾಗೂ ಸಂತೋಷ ಮಳಲಿ ಅವರನ್ನು ಸನ್ಮಾನಿಸಲಾಯಿತು.ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪಿ. ಶುಭ, ಜಿಲ್ಲಾ ಸಮನ್ವಯಾಧಿಕಾರಿ ಮಹಾದೇವ ಹುಲಗೆಜ್ಜಿ, ಹಿರಿಯ ಪ್ರಾಂಶುಪಾಲ ಆನಂದ ಹಿರೇಲಿಂಗಪ್ಪನವರ, ಜ್ಯೋತಿ ಬದಾಮಿ, ಶಿವಲಿಂಗಸ್ವಾಮಿ ಹೆಬ್ಬಳ್ಳಿಮಠ, ಪ್ರಾಂಶುಪಾಲ ರಮೇಶ ಕಬ್ಬೆರಳ್ಳಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಅಣ್ಣಿಗೇರಿ, ನಾಗರಾಜ ಗಂಗಾವತಿ, ಜಂಬೂನಾಥ ಬೆಂತೂರ ಸೇರಿದಂತೆ ವಸತಿ ಶಾಲಾ ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು.