ಜಿಲ್ಲೆಯು ಮಹಿಳೆಯ, ಮಕ್ಕಳ ಸುರಕ್ಷತಾ ತಾಣವಾಗಬೇಕು: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ

| Published : Mar 09 2025, 01:46 AM IST

ಜಿಲ್ಲೆಯು ಮಹಿಳೆಯ, ಮಕ್ಕಳ ಸುರಕ್ಷತಾ ತಾಣವಾಗಬೇಕು: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಟುಂಬದೊಳಗೆ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂಧಿಸಿದ ಹೆಚ್ಚು ಪರಿಣಾಮಕಾರಿಯಾಗಿ ಸಂರಕ್ಷಣೆ ಒದಗಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ. ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯ ಕುಟುಂಬದ ಸಮಾಲೋಚನೆ ನಡೆಸಿ ಪ್ರಕರಣವನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ವಕೀಲರ ಸಹಯೋಗದೊಂದಿಗೆ ಉಚಿತ ಕಾನೂನು ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯು ಮಹಿಳಾ ಮತ್ತು ಮಕ್ಕಳ ಸುರಕ್ಷತಾ ತಾಣವಾಗಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಪ್ರಗತಿ ಪರಿಶೀಲನಾ ಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತ್ರೈಮಾಸಿಕದ ವಿವಿಧ ಯೋಜನೆಗಳಡಿ ನಡೆಯುವ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ೮೫ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ ೭೨ ವಿವಾಹಗಳನ್ನು ತಡೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಪ್ರತಿಯೊಂದು ಹಳ್ಳಿಯಲ್ಲೂ ಮನೆಗಳಲ್ಲಿರುವ ಪೋಷಕರಿಗೆ ಬಾಲ್ಯ ವಿವಾಹ ಕುರಿತು ಅರಿವು ಮೂಡಿಸಬೇಕು. ಬಾಲ್ಯ ವಿವಾಹ ಮಾಡಿಸುವುದು, ಪಾಲ್ಗೊಳ್ಳುವುದು ನಿಷೇಧ, ಅಂತಹವರ ವಿರುದ್ಧ ದೂರನ್ನು ದಾಖಲಿಸಲಾಗುತ್ತದೆ ಎಂದು ತಿಳಿಸಿದರು.

ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಬಾಲ್ಯ ವಿವಾಹ ತಡೆದು ನಮ್ಮ ಗ್ರಾಪಂ ಬಾಲ್ಯ ವಿವಾಹ ಮುಕ್ತವಾಗಿದೆ ಎಂದು ಘೋಷಣೆ ಮಾಡಿದರೆ ಅಂತಹ ಗ್ರಾಪಂಗಳಿಗೆ ಸರ್ಕಾರದಿಂದ ೨೫ ಸಾವಿರ ರು. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಪೋಕ್ಸೋ, ಬಾಲ್ಯವಿವಾಹ ಅಪರಾಧಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಎಲ್ಲಾ ಶಾಲಾ ಕಾಲೇಜು ಸರ್ಕಾರಿ ಕಚೇರಿಗಳಲ್ಲಿ ಸಹಾಯವಾಣಿ ಸಂಖ್ಯೆ ೧೦೯೮ ನಾಮಫಲಕ ಲಗತ್ತಿಸಬೇಕು, ಸಾರ್ವಜನಿಕರು ತಮಗೆ ತುರ್ತು ಪರಿಸ್ಥಿತಿ ಉಂಟಾದಾಗ ಯಾವುದೇ ಸಮಸ್ಯೆಯಿದ್ದರೂ ೧೧೨ಕ್ಕೆ ಕರೆಮಾಡಿ, ಪೊಲೀಸ್ ಇಲಾಖೆಯು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ:

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಮಂಜೂರಾಗಿರುವ ೨೧೮೦ ಅಂಗನವಾಡಿ ಕೇಂದ್ರಗಳ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಅಂತಕ್ಕೆ ೬ ತಿಂಗಳಿಂದ ೬ ವರ್ಷದ ಒಟ್ಟು ಮಕ್ಕಳು ೮೨,೮೯೨, ಗರ್ಭಿಣಿಯರು ೭,೫೯೩, ಬಾಣಂತಿಯರು ೬,೪೦೨, ಅಂಗನವಾಡಿ ಕಾರ್ಯಕರ್ತೆಯರು ೨,೦೩೩, ಅಂಗನವಾಡಿ ಸಹಾಯಕಿಯರು ೧,೮೩೪, ಪಾಲ್ಗೊಂಡವರ ಒಟ್ಟು ಸಂಖ್ಯೆ ೧೦,೦೦,೭೫೪ ಆಗಿದೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆ:

ಕುಟುಂಬದೊಳಗೆ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂಧಿಸಿದ ಹೆಚ್ಚು ಪರಿಣಾಮಕಾರಿಯಾಗಿ ಸಂರಕ್ಷಣೆ ಒದಗಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ. ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯ ಕುಟುಂಬದ ಸಮಾಲೋಚನೆ ನಡೆಸಿ ಪ್ರಕರಣವನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ವಕೀಲರ ಸಹಯೋಗದೊಂದಿಗೆ ಉಚಿತ ಕಾನೂನು ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಮಿಷನ್ ಶಕ್ತಿ:

ಮಿಷನ್ ಶಕ್ತಿ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ೧೫ನೇ ಹಣಕಾಸು ಆಯೋಗದ ಮೂಲಕ ಮಹಿಳೆಯರ ರಕ್ಷಣೆ, ಭದ್ರತೆ ಮತ್ತು ಸಬಲೀಕರಣ ಉದ್ದೇಶವನ್ನು ಒಳಗೊಂಡು ೨೦೨೩- ೨೪ ನೇ ಸಾಲಿನಲ್ಲಿ ಅನುಷ್ಠಾನಗೊಂಡಿರುತ್ತದೆ .ಮಿಷನ್ ಶಕ್ತಿ ಯೋಜನೆಯಲ್ಲಿ ರಕ್ಷಣೆ ಮತ್ತು ಭದ್ರತೆ ಕುರಿತಾದ ಕಾರ್ಯಕ್ರಮಗಳು ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ, ಬೇಟಿ ಬಚಾವೋ ಬೇಟಿ ಪಡಾವೋ, ನಾರಿ ಅದಾಲತ್, ಸಾಮರ್ಥ್ಯ(ಸಬಲೀಕರಣ) ಕುರಿತಾದ ಕಾರ್ಯಕ್ರಮಗಳು ಉಜ್ವಲ, ಸ್ವಾದರ ಗೃಹ, ಮಹಿಳಾ ವಸತಿ ನಿಲಯ, ರಾಷ್ಟ್ರೀಯ ಶಿಶು ಪಾಲನಾ ಕೇಂದ್ರ, ಪ್ರಧಾನಮಂತ್ರಿ ಮಾತೃವಂದನ ಯೋಜನೆ ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಾಲಸೇವಾ ಯೋಜನೆ:

ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಮಾಸಿಕ ೩೫೦೦ ರು.ಗಳ ಆರ್ಥಿಕ ಸಹಾಯವನ್ನು ಅರ್ ಟಿ ಜಿ ಎಸ್ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯನ್ನು ಮಾಡಲಾಗುತ್ತಿದೆ.

ಪಿಎಂ. ಕೇರ್ ಫರ್ ಚಿಲ್ಡ್ರನ್:

ಕೋವಿಡ್ ನಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರ್ಕಾರದ ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಯೋಜನೆಯಡಿ ೮ ಮಕ್ಕಳ ಮಾಹಿತಿಯನ್ನು ಪಿಎಂ ಕೇರ್ಸ್ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ.

ಉಪಕಾರ ಯೋಜನೆ: ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಮಕ್ಕಳು ೧೮ ವರ್ಷ ತುಂಬಿದ ಕಾರಣ ಬಿಡುಗಡೆಗೊಳ್ಳುತ್ತಿದ್ದು ,ಅಂತಹ ಮಕ್ಕಳ ವಿದ್ಯಾಭ್ಯಾಸ ಪೂರ್ಣವಾಗದಿದ್ದಲ್ಲಿ , ವಿದ್ಯಾಭ್ಯಾಸ ಮುಂದುವರಿಸಲು, ಯಾವುದೇ ವೃತ್ತಿಪರ ಕೌಶಲ್ಯ ತರಬೇತಿ ಹೊಂದಲು, ಸ್ವಂತ ಉದ್ಯೋಗ ಪ್ರಾರಂಭಿಸಲು ಮತ್ತು ಸಮಾಜದ ಮುಖ್ಯ ವಾಹಿನಿಗೆ ಬರಲು ೩ ವರ್ಷದವರೆಗೆ ಪ್ರತಿ ತಿಂಗಳು ೫೦೦೦ ರು. ಗಳ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಉಪಕಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ೯ ಮಕ್ಕಳು ಅರ್ಹರಾಗಿದ್ದು ಏಪ್ರಿಲ್ ನಿಂದ ಮಾರ್ಚ್ ವರೆಗೆ ತಿಂಗಳಿಗೆ ೫ ಸಾವಿರ ರು.ಗಳಂತೆ ಅನುದಾನ ಡಿಬಿಟಿ ಮುಖಾಂತರ ಮಾಡಲಾಗಿರುತ್ತದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ, ಜಿಪಂ ಸಿಇಒ ಡಾ.ಪ್ರವೀಣ್ ಪಿ. ಬಾಗೇವಾಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ಸಿಡಿಪಿಒ ನಾಗರತ್ನ, ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ಇದ್ದರು.