ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದ ವೃದ್ಧನ ಕಾಪಾಡಿದ ವೈದ್ಯ!

| Published : Dec 05 2024, 12:32 AM IST / Updated: Dec 05 2024, 01:03 PM IST

ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದ ವೃದ್ಧನ ಕಾಪಾಡಿದ ವೈದ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯೋ ನಾರಾಯಣ ಹರಿ ಎನ್ನುವಂತೆ, ಅದೃಷ್ಟವಿದ್ದರೆ ಸಾವು ಕೂಡ ಆ ಕ್ಷಣಕ್ಕೆ ದೂರವಾಗುತ್ತದೆ ಎನ್ನುವುದಕ್ಕೆ ಸರ್ಕಾರಿ ಬಸ್ಸಿನ ಪ್ರಯಾಣದಲ್ಲಿ ಆಶ್ಚರ್ಯಕರ ಘಟನೆಯೊಂದು ಮಂಗಳವಾರ ನಡೆದಿದೆ. 

 ಗುಳೇದಗುಡ್ಡ : ವೈದ್ಯೋ ನಾರಾಯಣ ಹರಿ ಎನ್ನುವಂತೆ, ಅದೃಷ್ಟವಿದ್ದರೆ ಸಾವು ಕೂಡ ಆ ಕ್ಷಣಕ್ಕೆ ದೂರವಾಗುತ್ತದೆ ಎನ್ನುವುದಕ್ಕೆ ಸರ್ಕಾರಿ ಬಸ್ಸಿನ ಪ್ರಯಾಣದಲ್ಲಿ ಆಶ್ಚರ್ಯಕರ ಘಟನೆಯೊಂದು ಮಂಗಳವಾರ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದ ವೃದ್ಧನನ್ನು ಸಕಾಲಕ್ಕೆ ನೆರವಾದ ವೈದ್ಯರು ಆತನ ಪ್ರಾಣವನ್ನೇ ಕಾಪಾಡಿದ ಪ್ರಸಂಗ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿಯ ವೈದ್ಯ ಡಾ.ಪರಶುರಾಮ ದಾನಿ ಎಂಬುವವರು ಗುಳೇದಗುಡ್ಡಕ್ಕೆ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮಂಗಳವಾರ ಇಳಕಲ್ಲ-ಬಾದಾಮಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಪಕ್ಕದಲ್ಲಿ 70 ವರ್ಷದ ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ವೃದ್ಧ ಕುಳಿತಿದ್ದ. ಹುನಗುಂದ- ಅಮೀನಗಡ ಮಾರ್ಗ ಮಧ್ಯದಲ್ಲಿ ಕಿಟಕಿ ಬಳಿ ಆಸನದಲ್ಲಿ ಕುಳಿತಿದ್ದ ವೃದ್ಧ ವಾಂತಿ ಮಾಡಲು ಕಿಟಕಿ ತೆರೆಯುವಂತೆ ಪಕ್ಕದ ವೈದ್ಯರಿಗೆ ಕೇಳುತ್ತಾನೆ. ಆಗ ವೈದ್ಯರು ಸಹಾಯ ಮಾಡುತ್ತಾರೆ. 

ವಾಂತಿ ಮಾಡುತ್ತಿದ್ದ ವೃದ್ಧ, ವೈದ್ಯರ ಭುಜದ ಮೇಲೆ ತಲೆ ಒರಗಿಸಿ ಕಣ್ಣು ಮುಚ್ಚುತ್ತಾನೆ. ಇದನ್ನು ಗಮನಿಸಿದ ವೈದ್ಯರು ವೃದ್ಧ ಬೆವರುತ್ತಿದ್ದ ಸ್ಥಿತಿ ಕಂಡು ನಾಡಿ ಮಿಡಿತ ಪರೀಕ್ಷಿಸಿದಾಗ, ನಾಡಿಮಿಡಿತವೇ ಇರಲಿಲ್ಲ. ಹೃದಯಾಘಾತದ ಸೂಚನೆ ಗೊತ್ತಾಗಿ ತಕ್ಷಣ ವೈದ್ಯರು ವೃದ್ಧನ ಎದೆಯನ್ನು ಒತ್ತುವ ಮೂಲಕ ಸಿಪಿಆರ್ (ಕಾರ್ವಿಯಾಕ್ ಪಲ್ಮನರಿ ರೆಸಸಿಟೇಷನ್) ಮಾಡುತ್ತಾರೆ. ಸುಮಾರು 90 ಸೆಕೆಂಡು ಮಾಡಿದಾಗಲೂ ವ್ಯಕ್ತಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ.ವೃದ್ಧ ಉಸಿರಾಡುತ್ತಿಲ್ಲ ಎಂದು ವೈದ್ಯರು ಖಾತರಿಮಾಡಿಕೊಂಡರು. 

ಆದರೂ ಪುನಃ ಪ್ರಯತ್ನ ಮಾಡಿದರಾಯಿತೆಂದು ಮತ್ತೇ ಜೋರಾಗಿ ಎದೆಯನ್ನು ಒತ್ತಲು ಆರಂಭಿಸಿದರು.10-15 ಸೆಕೆಂಡುಗಳ ಬಳಿಕ ದೇವರ ದಯದಿಂದ ವೃದ್ಧ ಸಾವಕಾಶವಾಗಿ ಉಸಿರಾಡಲು ಆರಂಭಿಸಿ ಮುಚ್ಚಿದ ಕಣ್ಣು ತೆರೆದ. ಸಮಯಕ್ಕೆ ಸರಿಯಾಗಿ ಪಕ್ಕದಲ್ಲಿದ್ದ ನಾನು ನನ್ನ ಜಾಣ್ಮೆಯಿಂದ ವೃದ್ದನನ್ನು ಸಾವಿನಿಂದ ಪಾರು ಮಾಡಿದೆ. ದೇವರ ದಯೆ. ವೃದ್ಧ ಶೇಖರಪ್ಪ ಮರುಜೀವ ಪಡೆದುಕೊಂಡ ಎಂದು ವೈದ್ಯ ಡಾ.ಪರಶುರಾಮ ದಾನಿ ಹೇಳುತ್ತಾರೆ.

ಬಸ್ಸಿನಲ್ಲಿ ಪ್ರಯಾಣಿಸುವಾಗ ವೈದ್ಯರು ನಮ್ಮ ತಂದೆಯವರಿಗೆ ಸಹಾಯ ಮಾಡದೇ ಹೋಗಿದ್ದರೆ ನಮ್ಮ ತಂದೆ ನಮ್ಮನ್ನು ಕೈ ಬಿಡುತ್ತಿದ್ದರು. ನಮ್ಮ ಪಾಲಿಗೆ ವೈದ್ಯರೇ ದೇವರು. ಅವರ ಸಹಾಯ ನಮ್ಮ ಕುಟುಂಬ ಎಂದೂ ಮರೆಯಲ್ಲ.

- ಅಶೋಕ ಶೇಖರಪ್ಪ ಕಲಾಗತಿ, ವೃದ್ಧನ ಮಗ ಹಂಸನೂರ.