ಸಾರಾಂಶ
ನಗರದ ಎಪಿಎಂಸಿ ಆವರಣದಲ್ಲಿ ರೈತರಿಗಾಗಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರು ತಮ್ಮಲ್ಲಿರುವ ರಾಗಿ ಮಾರಾಟ ಮಾಡಲು ಟೋಕನ್‌ಗಾಗಿ ಬೆಳಗಿನ ಜಾವದಿಂದ ಸಂಜೆಯವರೆವಿಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನೂ ಕೆಲ ರೈತರು ಚಳಿಯನ್ನು ಲೆಕ್ಕಿಸದೆ ರಾತ್ರಿ ಅಲ್ಲಿಯೇ ಬೀಡು ಬಿಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಎಪಿಎಂಸಿ ಆವರಣದಲ್ಲಿ ರೈತರಿಗಾಗಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರು ತಮ್ಮಲ್ಲಿರುವ ರಾಗಿ ಮಾರಾಟ ಮಾಡಲು ಟೋಕನ್‌ಗಾಗಿ ಬೆಳಗಿನ ಜಾವದಿಂದ ಸಂಜೆಯವರೆವಿಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನೂ ಕೆಲ ರೈತರು ಚಳಿಯನ್ನು ಲೆಕ್ಕಿಸದೆ ರಾತ್ರಿ ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದಿರುವುದು ಬಿಟ್ಟರೆ ಇಲ್ಲಿ ರೈತರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಬೆಳಗ್ಗೆಯಿಂದ ತಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಟೋಕನ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಖರೀದಿ ಕೇಂದ್ರಕ್ಕೆ ಬಂದಿರುವ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲ. ಊಟ ತಿಂಡಿ ಬಿಟ್ಟು ಅನ್ನದಾತ ಮಧ್ಯಾಹ್ನದ ಬಿಸಿಲಿನಲ್ಲಿ ಕಾಯುವ ಸ್ಥಿತಿ ಉಂಟಾಗಿದೆ. ರೈತರು ಕಷ್ಟಪಟ್ಟು ಬೆಳೆದ ರಾಗಿಯನ್ನು ತಮ್ಮ ದೈನಂದಿನ ಕಷ್ಟಗಳನ್ನು ತೀರಿಸಿಕೊಳ್ಳುವ ಸಲುವಾಗಿ ಹಗಲು-ರಾತ್ರಿ ಎನ್ನದೆ ಖರೀದಿ ಕೇಂದ್ರದ ಮುಂದೆ ಟೋಕನ್‌ಗಾಗಿ ನಿಲ್ಲುವಂತಾಗಿದೆ. ಖರೀದಿ ಕೌಂಟರ್‌ಗಳನ್ನು ಹೆಚ್ಚು ಮಾಡಿದ್ದರೆ ರೈತರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಅಧಿಕಾರಿಗಳಿಗೆ ಕನಿಷ್ಠ ಮಾನವೀಯತೆ ಇಲ್ಲದಂತಾಗಿದೆ. ರೈತರನ್ನು ಪ್ರತಿ ಬಾರಿಯೂ ಇಂತಹ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಕೌಂಟರ್ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟೋಕನ್ ವ್ಯವಸ್ಥೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಕೋಟ್ 1 :ಕಷ್ಟಪಟ್ಟು ಬೆಳೆದಿರುವ ರಾಗಿಯನ್ನು ಮಾರಲು ಬಂದರೆ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ನಿಖರ ಮಾಹಿತಿ ನೀಡುತ್ತಿಲ್ಲ. ಟೋಕನ್‌ಗಾಗಿ ಬೆಳಗಿನ ಜಾವಕ್ಕೆ ಚಳಿಯನ್ನು ಲೆಕ್ಕಿಸದೆ ಬಂದು ಕಾಯುತ್ತಿದ್ದೇವೆ. ಬಂದಿರುವ ರೈತರಿಗೆ ಕೂರಲು, ನಿಲ್ಲಲು ಜಾಗವಿಲ್ಲ. ಬೆಳಗ್ಗೆಯಿಂದ ನಿಂತು ನಿಂತು ಸಾಕಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರೈತರನ್ನು ಕಡೆಗಣಿಸಲಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕಿದೆ. - ಜಗದೀಶ್, ರೈತ, ಜೆ. ಮಲ್ಲೇನಹಳ್ಳಿ. ಕೋಟ್ 2 :
ಡಿಸೆಂಬರ್ 9ರಿಂದ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು, ಸರ್ಕಾರ ಕ್ವಿಂಟಾಲ್ ರಾಗಿಗೆ 4290ರೂಗಳಂತೆ ಬೆಂಬಲ ಬೆಲೆ ಯೋಜನೆಯಡಿ ಕೊಂಡುಕೊಳ್ಳುತ್ತಿದೆ. ಬೆಳಗ್ಗೆ 8ರಿಂದ ಸಂಜೆ 6ಗಂಟೆಯವರೆಗೆ ನೊಂದಣಿ ಪ್ರಕ್ರಿಯೆ ನಡೆಯಲಿದ್ದು, ಇಲ್ಲಿಯವರೆಗೆ 3,147 ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈಗಾಗಲೆ 50ಸಾವಿರ ಕ್ವಿಂಟಾಲ್ ರಾಗಿ ರಿಜಿಸ್ಟರ್ ಆಗಿರುತ್ತದೆ. ಸರ್ವರ್ ಬ್ಯೂಸಿಯಾದ ಕಾರಣ ನೊಂದಣಿ ಪ್ರಕ್ರಿಯೆ ತಡವಾಗುತ್ತಿದೆ. - ಲೋಕೇಶ್, ರಾಗಿ ಖರೀದಿ ಕೇಂದ್ರದ ಅಧಿಕಾರಿ, ತಿಪಟೂರು.