ಅನಾಥವಾಗಿರುವ ತಲಕಾಡು ಶಿಕ್ಷಕರ ವಸತಿ ಗೃಹಗಳು

| Published : Feb 08 2024, 01:34 AM IST

ಸಾರಾಂಶ

ಸರ್ಕಾರದ ಕಾಸು ಇಲ್ಲಿ ಯಾವುದೇ ಪ್ರಯೋಜನಕ್ಕೆ ಬರದೆ ನಿಷ್ಪ್ರ ಯೋಜಕವಾಗಿದೆ. ಹೀಗೆ ಬೇಕಾಬಿಟ್ಟಿ ನಿರ್ಮಿಸಿ ಬಿಟ್ಟಿರುವ ಉದ್ದೇಶ ಕಂಡೂ ಕಾಣದಂತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಕಟ್ಟಡದ ಪರಿಶೀಲನೆ ನಡೆಸಿ ಹೋಗಿದ್ದಾರೆಯೇ ಹೊರತು ಪ್ರಯೋಜನ ಶೂನ್ಯವಾಗಿದೆ.

- ಕಟ್ಟಡದ ಬಾಗಿಲು ಕಿಟಕಿಗಳು ಕಣ್ಮರೆಯಾಗಿದ್ದು, ಅನೈತಿಕ ಚಟುವಟಿಕೆಗಳ ತಾಣಕನ್ನಡಪ್ರಭ ವಾರ್ತೆ ತಲಕಾಡು

ತಲಕಾಡಿನಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಶಿಕ್ಷಕರ ವಸತಿ ಗೃಹಗಳು ಕಳೆದ ಐದಾರು ವರ್ಷಗಳಿದ ಇದ್ದು ಇಲ್ಲದಂತೆ ಅನಾಥವಾಗಿದೆ. ಸರ್ಕಾರ ಇಲ್ಲಿ ನಿರ್ಮಿಸಿದ ಗುರುಭವನದ ಸದುದ್ದೇಶ ಸಾಕಾರಗೊಳ್ಳದೆ ಪಾಳು ಬಿದ್ದು ಸುರಿಯುತ್ತಿದ್ದರು ಸಂಬಂಧಪಟ್ಟವರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ನಿರ್ಲಕ್ಷ್ಯ ವಹಿಸಿದ್ದಾರೆ.

ನೂತನ ಕಟ್ಟಡ ಅನಾಥವಾಗಿದ್ದ ಹಿನ್ನೆಲೆ ಈಗಾಗಲೆ ಕಟ್ಟಡದ ಬಾಗಿಲು ಕಿಟಕಿಗಳು ಕಣ್ಮರೆಯಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ವಿದ್ಯುತ್ ಸಂಪರ್ಕಕ್ಕೆ ಕಟ್ಟಡದಲ್ಲಿ ಅಳವಡಿಸಿದ್ದ ಮೀಟರ್ ಡಬ್ಬಗಳು ಅವಸಾನದ ಅಂಚಿಗೆ ತಲುಪಿದ್ದು ಕಟ್ಟಡದ ದುಸ್ಥಿತಿಯ ಕಥೆ ಹೇಳುತ್ತಿವೆ.

ಯಾವ ಪುರುಷಾರ್ಥ ಸಾಧನೆಗಾಗಿ ಇಲ್ಲಿ ಕಟ್ಟಡ ನಿರ್ಮಿಸಿದರೂ ಎಂಬುದನ್ನು ನಿರ್ಮಿಸಿದ ಅಧಿಕಾರಿಗಳೇ ಈಗ ಹೇಳಬೇಕಿದೆ. ಸರ್ಕಾರದ ಕಾಸು ಇಲ್ಲಿ ಯಾವುದೇ ಪ್ರಯೋಜನಕ್ಕೆ ಬರದೆ ನಿಷ್ಪ್ರ ಯೋಜಕವಾಗಿದೆ. ಹೀಗೆ ಬೇಕಾಬಿಟ್ಟಿ ನಿರ್ಮಿಸಿ ಬಿಟ್ಟಿರುವ ಉದ್ದೇಶ ಕಂಡೂ ಕಾಣದಂತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಕಟ್ಟಡದ ಪರಿಶೀಲನೆ ನಡೆಸಿ ಹೋಗಿದ್ದಾರೆಯೇ ಹೊರತು ಪ್ರಯೋಜನ ಶೂನ್ಯವಾಗಿದೆ.

ಹೋಬಳಿಯ ಸರ್ಕಾರಿ ಶಾಲೆಗಳಲ್ಲಿ ಬೇರೆ ಜಿಲ್ಲೆಗಳಿಂದ ವರ್ಗಾವಣೆಗೊಂಡು ಇಲ್ಲಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಸರ್ಕಾರಿ ವಸತಿ ಸೌಕರ್ಯ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಇಲ್ಲವೆ ಜಿಲ್ಲೆ ತಾಲೂಕಿನಿಂದ ನಿತ್ಯ ಬಂದು ಹೋಗುವ ತಾಪತ್ರಯ ಎದುರಿಸುತ್ತಿದ್ದಾರೆ. ಕಟ್ಟಡ ಬಳಕೆಗೆ ಬಂದರೆ ಇಂಥವರಿಗೆ ಪ್ರಯೋಜನವಾಗುತ್ತದೆ.

ಶಿಕ್ಷಕರ ವಾಸಕ್ಕೆ ಅನುಕೂಲವಾಗಲಿ ಎಂಬ ಸದುದ್ದೇಶದೊಂದಿಗೆ ಇಲ್ಲಿ ರಾಜೀವಗಾಂಧಿ ವಸತಿ ನಿಗಮದವರು ನಿರ್ಮಿಸಿದ ನೂತನ ಕಟ್ಟಡ ಶಿಕ್ಷಣ ಇಲಾಖೆಯವರಿಗಾಗಲಿ ಅಥವಾ ಸ್ವಂತ ಕಟ್ಟಡ ಸೌಕರ್ಯವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಇಲಾಖೆ ಯವರಿಗಾಗಲಿ ಪ್ರಯೋಜನಕ್ಕೆ ಬರದೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದೆ.

ಕಟ್ಟಡ ಅಪೂರ್ಣವಾಗಿದ್ದ ಹಿನ್ನೆಲೆ ಹಸ್ತಾಂತರ ಮಾಡಿಕೊಂಡಿಲ್ಲ ಎಂಬ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸ್ಪಷ್ಟಪಡಿಸಿದರು. ಮುಂದಿನ ಬೆಳವಣಿಗೆ ಕುರಿತು ಇವರಲ್ಲಿ ಕೂಡ ಮಾಹಿತಿ ಲಭ್ಯವಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಕಟ್ಟಡ ಮರು ಬಳಕೆಗೆ ಸಿದ್ದಪಡಿಸಲು ಮತ್ತೆ ಲಕ್ಷಾಂತರ ರು. ವೆಚ್ಚಮಾಡಬೇಕಿದೆ. ಪಾಳು ಬಿದ್ದಿದ್ದ ಇಲ್ಲಿನ ಕಟ್ಟಡದಲ್ಲಿ ಜೆಜೆಎಂ ಅವರು ಸಿಮೆಂಟ್ ಸ್ಟಾಕ್ ಇಟ್ಟುಕೊಳ್ಳುವ ಗೋದಾಮಾಗಿ ಬಳಸುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ‌, ಅನಾಥವಾಗಿ ಪಾಳು ಸುರಿಯುತ್ತಿರುವ ಇಲ್ಲಿನ ಗುರುಭವನಕ್ಕೆ ಮುಕ್ತಿ ನೀಡುವರೆ ಎಂದು ಸ್ಥಳೀಯರು ಕಾಯುತ್ತಿದ್ದಾರೆ.

----------

ತಲಕಾಡಿನಲ್ಲಿ ನಿರ್ಮಾಣಗೊಂಡಿರುವ ನೂತನ ಶಿಕ್ಷಕರ ವಸತಿ ಗೃಹಗಳು ಬಳಕೆಗೆ ಬರುವಂತೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಪರಿಶೀಲನೆ ಪ್ರಗತಿಯಲ್ಲಿ ಸಾಗಿದೆ.

- ಎಚ್.ಕೆ. ಪಾಂಡು, ಡಿಡಿಪಿಐ, ಮೈಸೂರು.