ತುಂಬಿ ತುಳುಕುತ್ತಿವೆ ಚರಂಡಿಗಳು

| Published : May 30 2024, 12:57 AM IST

ಸಾರಾಂಶ

ಚರಂಡಿಯಲ್ಲಿ ಕಸ, ಕಡ್ಡಿ ತುಂಬಿದ್ದು ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಚರಂಡಿಗಳು ತುಂಬಿ ಸಾರ್ವಜನಿಕರ ಮನೆಗಳಿಗೆ ನುಗ್ಗುತ್ತಿದೆ

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ಪಟ್ಟಣದಲ್ಲಿ ಪುರಸಭೆಯವರ ನಿರ್ಲಕ್ಷ್ಯದಿಂದಾಗಿ ಚರಂಡಿಗಳು ತುಂಬಿ ತುಳುಕುತ್ತಿದ್ದು, ಚರಂಡಿ ತುಂಬಿದ ಮೇಲೆ ನೀರು ಮುಖ್ಯ ರಸ್ತೆಗಳ ಮೇಲೆ, ಬಡಾವಣೆ ನಿವಾಸಿಗಳ ಮನೆಗಳಿಗೆ ನುಗ್ಗುತ್ತಿವೆ. ಹೀಗೆ ರಸ್ತೆ ಮೇಲೆ ಹರಿಯುವ ಚರಂಡಿ ನೀರಿನ ದುರ್ನಾತ ತಾಳದೆ ಪಟ್ಟಣದ ಜನ ಬೇಸತ್ತು ಹೋಗುವಂತಾಗಿದೆ.

ಪಟ್ಟಣದ ವಾರ್ಡ ನಂ 21ರಲ್ಲಿ ಕಳೆದ ಅನೇಕ ದಿನಗಳಿಂದ ಚರಂಡಗಳು ತುಂಬಿ ದುರ್ನಾತ ಬೀರುತ್ತಿವೆ. ಚರಂಡಿಯಲ್ಲಿ ಕಸ, ಕಡ್ಡಿ ತುಂಬಿದ್ದು ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಚರಂಡಿಗಳು ತುಂಬಿ ಸಾರ್ವಜನಿಕರ ಮನೆಗಳಿಗೆ ನುಗ್ಗುತ್ತಿದೆ. ಮುಖ್ಯ ರಸ್ತೆಯ ಮೇಲೆ ಚರಂಡಿ ನೀರು ಹರಿದು ದುರ್ನಾತ ಇಡೀ ಬಡಾವಣೆಗೆ ಹಬ್ಬಿದ್ದು ಜನ ಬೇಸತ್ತು ಪುರಸಭೆಯವರ ಮೇಲೆ ಹಿಡಿ ಶಾಪ ಹಾಕುವಂತಾಗಿದೆ.

ಘಟನೆ ಕುರಿತು ವಾರ್ಡ ಸದಸ್ಯ ಶಿವಾನಂದ ಸಲಗರ ‘ಕನ್ನಡಪ್ರಭ’ಕ್ಕೆ ಮಾತನಾಡಿ, ಪಟ್ಟಣದಲ್ಲಿ ನೈರ್ಮಲ್ಯ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಒಂದು ವರ್ಷದಿಂದ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಎಲ್ಲವು ಅಧಿಕಾರಿಗಳ ಕೈಯಲ್ಲಿ ಮತ್ತು ಸಿಬ್ಬಂದಿಗಳ ಕೈಯಲ್ಲಿದೆ. ಪಟ್ಟಣದ ಸ್ವಚ್ಚತೆ ಮಾಡಬೇಕಿದ್ದವರು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಚರಂಡಿಗಳನ್ನು ಸ್ವಚ್ಚಗೊಳಿಸುತ್ತಿಲ್ಲ, ಬ್ಲಿಚಿಂಗ್ ಪೌಡರ ಸಿಂಪಡಿಸುತ್ತಿಲ್ಲ, ಮಳೆಗಾಲ ಹತ್ತಿರವಾಗಿದ್ದು ಚರಂಡಿಗಳು ಮತ್ತು ನಿಂತ ನೀರಲ್ಲಿ ಲಾರ್ವಾ ಹುಟ್ಟಿಕೊಂಡು ಸೊಳ್ಳೆಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಭೀತಿ ಇದೆ. ಹೀಗಾಗಿ ಫಾಗಿಂಗ್ ಮಾಡಿಸಬೇಕು ಅದು ಕೂಡ ಮಾಡಿಸುತ್ತಿಲ್ಲ. ಇದರಿಂದ ಜನ ನಮಗೂ ಕೂಡ ದಿನಾಲು ಪ್ರಶ್ನಾವಳಿಗಳನ್ನು ಮಾಡುತ್ತಿದ್ದಾರೆ.

ಆದರೆ ಅಧಿಕಾರ ಮತ್ತು ಅನುದಾನ ಬಳಕೆ ಮಾಡುವುದು ಅಧಿಕಾರಿಗಳ ಕೈಯಲ್ಲಿದ್ದು ನಾವು ನಾಮಕೇವಾಸ್ತೆ ಜನಪ್ರತಿನಿಧಿಗಳಂತಾಗಿದ್ದೇವೆ. ಹೀಗಾಗಿ ಬಡಾವಣೆ ನಿವಾಸಿಗಳಿಗೆ ಉತ್ತರಿಸಲಾಗದಂತಾಗಿದೆ. ಕೂಡಲೇ ಪುರಸಭೆ ಮುಖ್ಯಾಧಿಕಾರಿಗಳು ದಿಟ್ಟ ಕ್ರಮ ಕೈಗೊಂಡು ಪಟ್ಟಣದ ಎಲ್ಲಾ ಬಡಾವಣೆಗಳ ಚರಂಡಿಗಳನ್ನು ಸ್ವಚ್ಚಗೊಳಿಸುವ ಕೆಲಸ ಮಾಡಲಿ ಎನ್ನುತ್ತಾರೆ.

ಯುವ ಉದ್ಯಮಿ ರಾಜು ಚವ್ಹಾಣ ಮಾತನಾಡಿ ಪುರಸಭೆ ಕೇವಲ ಹೆಸರಿಗೆ ಇದೆ. ಅದರ ಕಾರ್ಯವ್ಯಾಪ್ತಿ ಏನೆಂಬುದನ್ನೇ ಅವರು ಮರೆತಿದ್ದಾರೆ. ಪಟ್ಟಣದ 23 ವಾರ್ಡಗಳ ಹೆಸರಲ್ಲಿ ಬರುವ ಕೋಟಿ ಕೋಟಿ ಅನುದಾನ ಖರ್ಚಾಗುತ್ತಿದ್ದರೂ ತೀರಾ ಸಾಮಾನ್ಯ ಸಮಸ್ಯೆಗಳಿಗೂ ಪರಿಹಾರ ಸಿಗದಂತಾಗಿದೆ. ಈಗ ನಾವು ಯಾರನ್ನೂ ದೂರಬೇಕು ತಿಳಿಯದಂತಾಗಿದೆ. ಜನಪ್ರತಿನಿಧಿಗಳಿಗೆ ಕೇಳೋಣವೆಂದರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ ಎನ್ನುತ್ತಾರೆ, ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಇಬ್ಬರ ನಡುವೆ ಕೂಸು ಬಡವಾಯಿತೆನ್ನುವ ಹಾಗೆ ನಮ್ಮ ಪರಿಸ್ಥಿತಿಯಾಗಿದೆ. ನಿತ್ಯ ದುರ್ನಾತ ಬೀರುವ ಚರಂಡಿಗಳ ವಾಸನೆ ಕುಡಿದು ಸಾಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.