ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಕಡ್ಲೆವಾಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಎದುರಾಗಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಕಡ್ಲೆವಾಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಎದುರಾಗಿದೆ.

ಚಾಂದಕವಠೆ ಗ್ರಾಮದ ಸಮೀಪದ ಜಾಕ್‌ವೆಲ್‌ನಿಂದ ನೀರು ಪೂರೈಸುವ ರೈಸಿಂಗ್ ಮೇನ್ ಪೈಪ್‌ಲೈನ್ ಹಾದುಹೋಗುವ ಸ್ಥಳದಲ್ಲಿ ಅಡ್ಡರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪೈಪ್‌ಲೈನ್‌ಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಬರುವಂತ ಬೇಸಿಗೆ ಕಾಲದ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಂಬಂಧಪಟ್ಟವರು ಮನವಿ ಮಾಡಿದ್ದಾರೆ.ಸಾರ್ವಜನಿಕರಲ್ಲಿ ಮನವಿ: ಕಡ್ಲೆವಾಡ ಬಹುಹಳ್ಳಿ ಕುಡಿಯುವ ನೀರಿನ ಪೈಪ್‌ಲೈನ್ ಸ್ಥಳಾಂತರ ಕಾಮಗಾರಿ ಪೂರ್ಣಗೊಳ್ಳುವವರೆಗೆ ನೀರನ್ನು ಮಿತವಾಗಿ ಬಳಸಬೇಕು ಹಾಗೂ ಲಭ್ಯವಿರುವ ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಪಟ್ಟಣದಲ್ಲಿ ಸುಮಾರು 60 ಬೋರವೆಲ್‌ಗಳಲ್ಲಿ 20 ಬೋರವೆಲ್‌ಗಳು ನಿಂತಿದ್ದು, ನೀರಿನ ಸಮಸ್ಯೆ ಇದ್ದಲ್ಲಿ ಈಗಾಗಲೇ 3 ಬೋರವೆಲ್‌ಗಳು ಕೊರಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಮಸ್ಯೆಯಾಗದಿರಲಿ:

ಪಟ್ಟಣದ ಐತಿಹಾಸಿಕ ಶ್ರೀ ಮಲ್ಲಯ್ಯ ರಾವುತರಾಯ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಬರುವಂತ ದಿನಗಳಲ್ಲಿ ಲಕ್ಷಾಂತರ ಭಕ್ತಾದಿಗಳು ಪಟ್ಟಣಕ್ಕೆ ಬರಲಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿಗೆ ಸಮಸ್ಯೆಯಾಗದ ಹಾಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೇ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುಖಂಡರುಗಳಾದ ಕಾಸು ಕೋರಿ, ದಿನೇಶಗೌಡ ಪಾಟೀಲ, ಶಿವರಾಜ ತಳವಾರ, ರಹೀಮಾನ್‌ ಕನಕಲ್, ಸಂಪತ್ ಜಮಾದಾರ, ರಾಘವೇಂದ್ರ ಗುಡಿಮನಿ, ದಯಾನಂದ ರಾಠೋಡ, ಸಿದ್ದನಗೌಡ ಜಲಪೂರ, ಸಂತೋಷ ಕುಲಕರ್ಣಿ, ವಿಜಯಕುಮಾರ ಯಂಬತ್ನಾಳ ಸೇರಿದಂತೆ ಹಲವಾರು ಜನ ಮುಖಂಡರು ಆಗ್ರಹಿಸಿದ್ದಾರೆ.ಪಟ್ಟಣ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಪೈಪ್‌ಲೈನ್ ಕಾಮಗಾರಿಯಿಂದ ನೀರು ಸರಬರಾಜಿಗೆ ವ್ಯತ್ಯಯ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗದಂತೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಕಾರ್ಯನಿರ್ವಹಿಸಬೇಕು.

-ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು ದೇವರಹಿಪ್ಪರಗಿ.ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಚಾಂದಕವಠೆ ಗ್ರಾಮದ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯಿಂದ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಶಿಫ್ಟ್ ಮಾಡಲಾಗಿದೆ. ಕಾಮಗಾರಿಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಸಿಬ್ಬಂದಿ ವರ್ಗ ತಕ್ಷಣವೇ ಗಮನಹರಿಸಿ ಕಾರ್ಯನಿರ್ವಹಿಸಬೇಕು.

-ಅಪ್ರೋಜ್‌ ಅಹ್ಮದ್ ಪಟೇಲ,

ಪ.ಪಂ ಮುಖ್ಯಾಧಿಕಾರಿ.ಕಡ್ಲೆವಾಡ ಬಹುಹಳ್ಳಿ ಕುಡಿಯುವ ನೀರಿನ ಘಟಕದ ಪೈಪ್‌ಲೈನ್ ಶಿಫ್ಟಿಂಗ್ ಕಾಮಗಾರಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂದು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಕೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು.

-ಎಚ್.ಎಂ.ಸಾರವಾಡ,
ಎಇ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಿಂದಗಿ.