ಬರ ನೀಗಲು ಆಗಬೇಕಿದೆ ಬೇಡ್ತಿ ವರದಾ ಜೋಡಣೆ

| Published : Sep 05 2025, 01:00 AM IST

ಸಾರಾಂಶ

1995ರಲ್ಲೇ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಪ್ರಸ್ತಾಪಗೊಂಡು, 2017ರಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿಯಾಗಿ, 2022ರಲ್ಲಿ ಡಿಪಿಆರ್‌ ಕೂಡ ಸಿದ್ಧವಾಗಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನದಿ ಜೋಡಣೆ ಯೋಜನೆಯಿದು.

ನಾರಾಯಣ ಹೆಗಡೆ

ಹಾವೇರಿ: ಬರೋಬ್ಬರಿ 30 ವರ್ಷಗಳ ಹಳೆಯ ಬೇಡ್ತಿ- ವರದಾ ನದಿ ಜೋಡಣೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅನುಷ್ಠಾನಗೊಳಿಸುವ ಕುರಿತು ಪ್ರಸ್ತಾವನೆ ಸಿದ್ಧವಾಗುತ್ತಿದೆ. ಜಿಲ್ಲೆಯ ನೀರಿನ ಬವಣೆ ನೀಗಿಸಲು ಈ ಯೋಜನೆ ಆಗಲೇಬೇಕು ಎಂಬ ಒತ್ತಾಯದ ಧ್ವನಿ ಹೆಚ್ಚುತ್ತಿದೆ.

1995ರಲ್ಲೇ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಪ್ರಸ್ತಾಪಗೊಂಡು, 2017ರಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿಯಾಗಿ, 2022ರಲ್ಲಿ ಡಿಪಿಆರ್‌ ಕೂಡ ಸಿದ್ಧವಾಗಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನದಿ ಜೋಡಣೆ ಯೋಜನೆಯಿದು. ಆದರೆ, ಪರಿಸರ ನಾಶ, ಜೀವವೈವಿಧ್ಯಕ್ಕೆ ಧಕ್ಕೆ ಇತ್ಯಾದಿ ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗಲೇ ಯೋಜನೆಯ ಡಿಪಿಆರ್‌ ಸಿದ್ಧಪಡಿಸಲು ವಿಶೇಷ ಮುತುವರ್ಜಿ ವಹಿಸಿದ್ದರು.

ಈಗ ಸಂಸದರಾದ ಬಳಿಕ ಮತ್ತೆ ಯೋಜನೆ ಅನುಷ್ಠಾನಕ್ಕೆ ಅವರು ವಿಶೇಷ ಆಸಕ್ತಿ ವಹಿಸಿರುವುದರಿಂದ ಜಿಲ್ಲೆಯ ರೈತರ ಬಹುವರ್ಷಗಳ ಬೇಡಿಕೆ ಈಡೇರುವ ನಿರೀಕ್ಷೆ ಹುಟ್ಟುಹಾಕಿದೆ. ಯೋಜನೆಯನ್ನು ಬೇಡ್ತಿ- ವರದಾ ಮತ್ತು ಬೇಡ್ತಿ- ಧರ್ಮಾ-ವರದಾ ಹೀಗೆ ಎರಡು ಲಿಂಕೇಜ್‌ಗಳ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಎನ್‌ಡಬ್ಲ್ಯುಡಿಎ ಬೆಂಗಳೂರು ಕಚೇರಿಯಿಂದ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ಮೂಲಗಳ ಪ್ರಕಾರ ಪಿಎಫ್‌ಆರ್‌(ಪೂರ್ವ ಕಾರ್ಯಸಾಧ್ಯತಾ ವರದಿ) ಕೂಡ ಸಿದ್ಧಗೊಂಡಿದೆ. ಹಿಂದಿನ ಡಿಪಿಆರ್‌ನಲ್ಲಿನ ಅಂಶಗಳಲ್ಲಿ ಕೆಲ ಮಾರ್ಪಾಟು ಮಾಡಿ ಹೊಸ ಡಿಪಿಆರ್‌ ಸಿದ್ಧಗೊಳ್ಳಬೇಕಿದೆ.

ಅದಾದ ಬಳಿಕ ಅರಣ್ಯ, ಪರಿಸರ, ಜೀವವೈವಿಧ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಒಪ್ಪಿಗೆ ಸಿಕ್ಕಿ ಕೇಂದ್ರ ಜಲಶಕ್ತಿ ಸಚಿವಾಲಯ ಯೋಜನೆಗೆ ಹಸಿರುನಿಶಾನೆ ತೋರಿಸಬೇಕಿದೆ. ಯೋಜನೆ ಅನುಷ್ಠಾನಕ್ಕೆ ಇನ್ನೂ ದಾರಿ ದೂರವಿದ್ದರೂ ಹೆಜ್ಜೆ ಹಾಕಲು ಆರಂಭಿಸಿರುವುದು ಜಿಲ್ಲೆಯ ಪಾಲಿಗೆ ಆಶಾದಾಯಕ ಬೆಳವಣಿಗೆ ಎನಿಸಿದೆ.

1.49 ಲಕ್ಷ ಹೆಕ್ಟೇರ್‌ಗೆ ಸಿಗಲಿದೆ ನೀರು: ಬೇಡ್ತಿ- ವರದಾ ನದಿ ಜೋಡಣೆಯಿಂದ ಬರುವ ನೀರು ಹಾವೇರಿ ಜಿಲ್ಲೆಯ ಹಾನಗಲ್ಲ, ಹಾವೇರಿ, ಸವಣೂರು ತಾಲೂಕಿನಲ್ಲಿ ಹರಿದಿರುವ ವರದಾ ನದಿ ಮೂಲಕ ತುಂಗಭದ್ರಾಕ್ಕೆ ಸೇರಿ ಮುಂದೆ ಗದಗ, ರಾಯಚೂರು ಜಿಲ್ಲೆ ಸಿಂಧನೂರುವರೆಗೂ ಸುಮಾರು 1.49 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ.

ಅದರಲ್ಲೂ ಹಾವೇರಿ ಜಿಲ್ಲೆಯ ಕೃಷಿ ಮತ್ತು ಕುಡಿಯುವ ನೀರಿನ ಯೋಜನೆಗೆ ಇದರಿಂದ ಅನುಕೂಲವಾಗಲಿದೆ. ಇಲ್ಲಿಯ ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ ಯೋಜನೆಗೆ ವರದಾ ನದಿ ನೀರು ಲಭ್ಯವಾಗಲಿದೆ. ಜತೆಗೆ, ಅಂತರ್ಜಲ ಮಟ್ಟ ಏರಿಕೆಯಾಗಲಿದೆ. ಜಿಲ್ಲೆಯ ವರದಾ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೂ ಅನುಕೂಲವಾಗಲಿದೆ. ಸಿಗಲಿದೆ 18.54 ಟಿಎಂಸಿ ನೀರು

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಅಲ್ಲಿಂದ ಪಶ್ಚಿಮಕ್ಕೆ ಹರಿಯುವ ನದಿಗಳು ಮಳೆಗಾಲದ ತಿಂಗಳುಗಳಲ್ಲಿ ತುಂಬಿ ಹರಿಯುತ್ತವೆ. ಆದರೆ, ಅವು ಸಮುದ್ರ ಸೇರುತ್ತಿರುವುದರಿಂದ ಮಳೆಗಾಲದಲ್ಲಿ ಹೆಚ್ಚುವರಿಯಾಗುವ ನೀರಿನ ಬಳಕೆ ಅಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೀರ್ಘಕಾಲದ ಬರಗಾಲದಿಂದ ಬಳಲುವ ಉತ್ತರ ಕರ್ನಾಟಕಕ್ಕೆ ಬೇಡ್ತಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಮಾನ್ಸೂನ್ ಹೆಚ್ಚುವರಿ ನೀರನ್ನು ಶಿರಸಿ ತಾಲೂಕಿನ ಪಟ್ಟಣದ ಹಳ್ಳ, ಶಾಲ್ಮಲಾ ಹಳ್ಳ ಮತ್ತು ಯಲ್ಲಾಪುರ ತಾಲೂಕಿನ ಸುರೇಮನೆ ಬಳಿ ಅಣೆಕಟ್ಟೆ ಅಥವಾ ಬ್ಯಾರೇಜ್‌ ನಿರ್ಮಿಸಿ ಅಲ್ಲಿಂದ ಕಾಲುವೆ, ಸುರಂಗ, ಪೈಪ್‌ಲೈನ್‌ ಮೂಲಕ ಹೀಗೆ ಮೂರು ವಿಧಾನದ ಮೂಲಕ 18.54 ಟಿಎಂಸಿ(524 ಎಂಸಿಎಂ) ನೀರನ್ನು ಲಿಫ್ಟ್‌ ಮಾಡಿ ವರದಾ ನದಿಗೆ ಸೇರಿಸುವ ಯೋಜನೆ ಇದಾಗಿದೆ.