ಕೊನೆಗೂ ಎಚ್ಚೆತ್ತ ಶಿಕ್ಷಣ ಇಲಾಖೆ, ಕೋಚಿಂಗ್‌ ಕೇಂದ್ರಗಳಿಗೆ ಪಹರೆ !

| Published : Jul 07 2025, 11:48 PM IST

ಕೊನೆಗೂ ಎಚ್ಚೆತ್ತ ಶಿಕ್ಷಣ ಇಲಾಖೆ, ಕೋಚಿಂಗ್‌ ಕೇಂದ್ರಗಳಿಗೆ ಪಹರೆ !
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾವಧಿಯಲ್ಲಿ ವಿದ್ಯಾರ್ಥಿಗಳನ್ನು ಅಕ್ರಮವಾಗಿಟ್ಟುಕೊಂಡು ಪೋಷಕರಿಂದ ವಾರ್ಷಿಕ ಹಣ ಪಡೆದು ಅನಧಿಕೃತವಾಗಿ ದಂಧೆಗಿಳಿದ ಕೋಚಿಂಗ್‌ ಕೇಂದ್ರಗಳ ಮೇಲೆ ಕೊನೆಗೂ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿನ ಪಹರೆ ಇಟ್ಟು ಕ್ರಮಕ್ಕೆ ಮುಂದಾಗಿದೆ.

ಅನೀಲಕುಮಾರ ದೇಶಮುಖ

ಕನ್ನಡಪ್ರಭ ವಾರ್ತೆ ಔರಾದ್‌

ಶಾಲಾವಧಿಯಲ್ಲಿ ವಿದ್ಯಾರ್ಥಿಗಳನ್ನು ಅಕ್ರಮವಾಗಿಟ್ಟುಕೊಂಡು ಪೋಷಕರಿಂದ ವಾರ್ಷಿಕ ಹಣ ಪಡೆದು ಅನಧಿಕೃತವಾಗಿ ದಂಧೆಗಿಳಿದ ಕೋಚಿಂಗ್‌ ಕೇಂದ್ರಗಳ ಮೇಲೆ ಕೊನೆಗೂ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿನ ಪಹರೆ ಇಟ್ಟು ಕ್ರಮಕ್ಕೆ ಮುಂದಾಗಿದೆ.

ಕಳೆದ ಎರಡು ವಾರಗಳಿಂದ ಕೋಚಿಂಗ್‌ ಅಕ್ರಮದ ಕುರಿತು ‘ಕನ್ನಡಪ್ರಭ’ ಸರಣಿ ವರದಿಯಿಂದ ಕೊನೆಗೂ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಕೋಚಿಂಗ್‌ ಕೇಂದ್ರಕ್ಕೆ ಶಾಲಾವಧಿಯಲ್ಲಿ ಒಂದು ದಿನಕ್ಕೆ ಮೂರು ಬಾರಿ ಭೇಟಿ ನೀಡಿ ಅಲ್ಲಿನ ಜಿಪಿಎಸ್‌ ಫೋಟೊಗಳನ್ನು ಪಡೆದು ಕಚೇರಿಗೆ ವರದಿ ಮಾಡುವಂತೆ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

‘ಮಕ್ಕಳಿಗೆ ರಜೆ ನೀಡಿ ಕಾದು ನೋಡ್ತಿರುವ ಕೋಚಿಂಗ್‌ ಕೇಂದ್ರಗಳು’ ಎಂಬ ತಲೆ ಬರಹದಡಿಯಲ್ಲಿ ‘ಕನ್ನಡಪ್ರಭ’ ಸೋಮವಾರ ಪ್ರಕಟಿಸಿದ ವರದಿ ಆಧರಿಸಿ ಪಟ್ಟಣದ ಏಳು ಕೋಚಿಂಗ್‌ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಭಾರಿ ಬಿಇಒ ಪ್ರಕಾಶ ರಾಠೋಡ ಅವರ ತಂಡ ಕೇಂದ್ರಗಳಲ್ಲಿ ಮಕ್ಕಳಿಲ್ಲದಿರುವುದನ್ನು ಖಾತರಿ ಪಡಿಸಿಕೊಂಡರು. ಅಲ್ಲದೆ ಬೆಳಿಗ್ಗೆ ಮಧ್ಯಾಹ್ನ ಹಾಗೂ ಶಾಲೆ ಬಿಡುವ ಹಂತದಲ್ಲಿ ಈ ಕೇಂದ್ರಗಳ ಮೇಲೆ ನಿಗಾ ಇಡಲು ಸಂಬಂಧಿಸಿದ ಸಿಆರ್‌ಸಿಗಳಿಗೆ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ.

ಮೂರು ದಿನದಲ್ಲಿ ಕೋಚಿಂಗ್‌ ಕೇಂದ್ರಗಳು ಮುಚ್ಚಿಸಿ ವರದಿ ನೀಡುವಂತೆ ಎಲ್ಲಾ 10 ಕೋಚಿಂಗ್‌ ಕೇಂದ್ರಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದ್ರೆ ಇದಕ್ಕೆ ಸೊಪ್ಪು ಹಾಕದ ಕೇಂದ್ರಗಳ ಮಾಲೀಕರು ಮಕ್ಕಳಿಗೆ ರಜೆ ಘೋಷಣೆ ಮಾಡಿ ಕಾದು ನೋಡುವ ತಂತ್ರಗಾರಿಕೆಯಲ್ಲಿದ್ದರು ಇದೀಗ ಶಿಕ್ಷಣ ಇಲಾಖೆಯ ಈ ವಿನೂತನ ಕ್ರಮದಿಂದಾಗಿ ಕೋಚಿಂಗ್‌ ಪುನರಾರಂಭಿಸುವ ಪ್ರಯತ್ನಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ.

ಕೋಚಿಂಗ್‌ಗಳ ಮೇಲೆ ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗ್ತಿಲ್ಲ. ಶಾಲಾವಧಿಯಲ್ಲಿ ಮಕ್ಕಳು ಇಟ್ಟಕೊಂಡು ಪಾಠ ಮಾಡಿದ್ರೆ ಸಾಕು ಸಾಕ್ಷಿ ಸಮೇತ ಅವರನ್ನು ಸ್ಥಳದಲ್ಲೇ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತೆ ಅದಕ್ಕಾಗಿ ಈ ಹೊಸ ಜಿಪಿಎಸ್‌ ಫೋಟೋಗ್ರಾಫಿ ತಂತ್ರಗಾರಿಕೆ ಬಳಸಲಾಗಿದೆ ಎಂದು ಪ್ರಭಾರಿ ಬಿಇಒ ಪ್ರಕಾಶ ರಾಠೋಡ ತಿಳಿಸಿದ್ದಾರೆ.