ಸಾರಾಂಶ
ಎಸ್.ಉಪೇಂದ್ರ ಸಲಹೆ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಉದ್ಘಾಟನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ, ಕ್ರೀಡಾಕೂಟದ ಜೊತೆಗೆ ಹೊಸದಾಗಿ ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್. ಉಪೇಂದ್ರ ಸಲಹೆ ನೀಡಿದರು.
ಗುರುವಾರ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕದಕುಣಿ ಕ್ಲಸ್ಠರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು. ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಕಥೆ ಹೇಳುವುದು, ಮಕ್ಕಳ ಜ್ಞಾಪಕ ಶಕ್ತಿ ಪರೀಕ್ಷೆ ಮಾಡುವುದು ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಸಿರುವುದು ಸ್ವಾಗತಾರ್ಹ ಎಂದರು.ಮುಖ್ಯ ಅತಿಥಿಯಾಗಿದ್ದ ಸೀತೂರು ಮಂಡಲ ಮಾಜಿ ಪ್ರಧಾನ ಎಸ್.ಡಿ.ವಿ.ಗೋಪಾಲರಾವ್ ಮಾತನಾಡಿ, ಕಲಿಕಾ ಹಬ್ಬದಲ್ಲಿ 11 ಶಾಲೆಗಳ ಮಕ್ಕಳು ಭಾಗವಹಿಸುವುದರಿಂದ ಮಕ್ಕಳಲ್ಲಿ ಪರಸ್ಪರ ಬಾಂಧವ್ಯ ಉಂಟಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸೀತೂರು ಗ್ರಾಪಂ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸೀತೂರು ಗ್ರಾಪಂ ಸದಸ್ಯ ಎಚ್.ಇ. ದಿವಾಕರ ಮಾತನಾಡಿ, ವಾಜಪೇಯಿ ಪ್ರಧಾನಿಯಾಗಿದ್ದಾಗ ಸರ್ವ ಶಿಕ್ಷಣ ಅಭಿಯಾನ ಪ್ರಾರಂಭವಾಗಿತ್ತು. ಆಗ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಹಣ ಬಿಡುಗಡೆಯಾಗುತ್ತಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸೈಕಲ್ ಸಹ ನೀಡಲಾಗುತ್ತಿತ್ತು. ಈಗ ಶಾಲೆಗಳಿಗೆ ಸೌಲಭ್ಯ ಕಡಿಮೆಯಾಗುತ್ತಿದೆ. ಸೀತೂರು ಗ್ರಾಪಂ ವ್ಯಾಪ್ತಿಯ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.ಅತಿಥಿಯಾಗಿದ್ದ ಯಕ್ಷಗಾನ ಕಲಾವಿ ಅನಂತಪದ್ಮನಾಭ ಮಾತನಾಡಿ, ಹಿಂದೆ ಕುಟುಂಭಗಳಲ್ಲಿ ಮಕ್ಕಳ ಬುದ್ದಿವಂತಿಗೆಗಾಗಿ ಅಜ್ಜ, ಅಜ್ಜಿಯರು ಕಥೆ ಹೇಳುತ್ತಿದ್ದರು. ಇದನ್ನೇ ಸ್ಪೂರ್ತಿಯಾಗಿ ಇಟ್ಟುಕೊಂಡು ಸರ್ಕಾರ ಕಲಿಕಾ ಹಬ್ಬ ಏರ್ಪಡಿಸಿರಬಹುದು. ಪೋಷಕರು ಸರ್ಕಾರಿ ಶಾಲೆ ಬಿಟ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಇದನ್ನು ತಡೆಯಲು ಪ್ರತಿ ಗ್ರಾಮಗಳಲ್ಲಿ ಹಳೇ ವಿದ್ಯಾರ್ಥಿಗಳು, ದಾನಿಗಳು, ಗ್ರಾಮಸ್ಥರು ಒಟ್ಟಾಗಿ ಸರ್ಕಾರಿ ಶಾಲೆಗಳಿಗೆ ಎಲ್ಲಾ ಸೌಲಭ್ಯ ನೀಡಿ ಹೈಟೆಕ್ ಶಾಲೆ ಮಾಡಿ ದರೆ ಮಕ್ಕಳ ಸಂಖ್ಯೆ ಜಾಸ್ತಿಯಾಗಬಹುದು ಎಂದು ಸಲಹೆ ನೀಡಿದರು.
ಸಭೆ ಅಧ್ಯಕ್ಷತೆಯನ್ನು ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರಭಾಕರ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಅತಿಥಿಗಳಾಗಿ ಕಾನೂರು ಗ್ರಾಪಂ ಉಪಾಧ್ಯಕ್ಷೆ ಮೋಹಿನಿ, ಹಂತುವಾನಿ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್, ಶಿಕ್ಷಣ ಇಲಾಖೆ ಇಸಿಒ ಗಳಾದ ರಂಗಪ್ಪ, ಸಂಗೀತ, ಸಿ.ಆರ್.ಪಿ. ಓಂಕಾರಪ್ಪ, ಬಿಐಇಆರ್ ಟಿ ತಿಮ್ಮೇಶಪ್ಪ, ಸರ್ಕಾರಿ ನೌಕರರ ಸಂಘದ ಸುಭಾಶ್ ರಾವ್, ರಾಜನಾಯಕ್, ಪ್ರಾಥಮಿಕ ಶಾ.ಶಿಕ್ಷಕರ ಸಂಘದ ಆರ್.ನಾಗರಾಜ್ ಇದ್ದರು.ಸೀತೂರು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಬಸಪ್ಪ ಸ್ವಾಗತಿಸಿದರು.ಸಹ ಶಿಕ್ಷಕ ಗವಿ ರಂಗಪ್ಪ ಕಾರ್ಯಕ್ರಮ ನಿರೂಪಿಸಿದರು.ನಂತರ 11 ಶಾಲೆಯ ಮಕ್ಕಳಿಗಾಗಿ 7 ವಿವಿಧ ಸ್ಪರ್ಧೆಗಳು ನಡೆಯಿತು.