ಗ್ರಾಮೀಣ ಮಕ್ಕಳ ಶೈಕ್ಷಣಿಕ ಶಕ್ತಿ ದೊಡ್ಡದು

| Published : Aug 19 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಶಕ್ತಿ ದೊಡ್ಡದು. ಅದನ್ನು ಸರಿಯಾದ ದೆಸೆಯಲ್ಲಿ ಶಿಕ್ಷಕರು ಬೆಳೆಸುವಂತಾಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಪಡೆದ ಮಕ್ಕಳ ಬೌದ್ಧಿಕಮಟ್ಟ ಉತ್ತಮವಾಗಿರುತ್ತದೆ. ಅವರಿಗೆ ಪರಿಣಾಮಕಾರಿ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಮತ್ತಷ್ಟು ಬೆಳೆಯುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಶಕ್ತಿ ದೊಡ್ಡದು. ಅದನ್ನು ಸರಿಯಾದ ದೆಸೆಯಲ್ಲಿ ಶಿಕ್ಷಕರು ಬೆಳೆಸುವಂತಾಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಪಡೆದ ಮಕ್ಕಳ ಬೌದ್ಧಿಕಮಟ್ಟ ಉತ್ತಮವಾಗಿರುತ್ತದೆ. ಅವರಿಗೆ ಪರಿಣಾಮಕಾರಿ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಮತ್ತಷ್ಟು ಬೆಳೆಯುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಜೆಎನ್‌ಎಂಸಿ ಕೆಎಲ್‌ಇ ಕನ್ವೇಷನ್ ಸೆಂಟರ್‌ನ ಡಾ.ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಜರುಗಿದ ಕೆಎಲ್‌ಇ ವಿವಿಧ ಕನ್ನಡ ಆಂಗ್ಲ ಮಾಧ್ಯಮ ಶಾಲೆಗಳು ಡಾ.ಪ್ರಭಾಕರ ಕೋರೆಯವರು ಕಾರ್ಯಾಧ್ಯಕ್ಷರಾಗಿ 40 ವರ್ಷಗಳ ಅನುಪಮ ಸೇವೆಯ ಗೌರವಾರ್ಥ ರುಬಿ ಜ್ಯುಬಿಲಿ ಸಮಾರಂಭ ಆಯೋಜಿಸಿದ್ದವು. ಸತ್ಕಾರ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ನನ್ನ ಬಾಲ್ಯದಲ್ಲಿ ಅತ್ಯುತ್ತಮ ಶಿಕ್ಷಕರನ್ನು ನೋಡಿದ್ದೇನೆ. ನನ್ನ ವಿಕಾಸಕ್ಕೆ ಅವರ ಕೊಡುಗೆ ಅನನ್ಯವಾಗಿತ್ತು. ನಿವೃತ್ತಿಯ ನಂತರವೂ ಅವರು ಇಂದಿಗೂ ಕ್ರಿಯಾಶೀಲವಾಗಿ ಚಟುವಟಿಕೆಯಿಂದ ಇರುವುದನ್ನು ಕಂಡಿದ್ದೇನೆ. ಅಂತಹ ಕ್ರಿಯಾಶೀಲತೆ ಇಂದಿನ ಶಿಕ್ಷಕರಲ್ಲಿಯೂ ಬರಬೇಕು ಎಂದು ಹೇಳಿದರು.ಡಾ.ಕೋರೆಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಬಾಲ್ಯದಲ್ಲಿ ನಾವು ನೆಲೆದ ಮೇಲೆ ಕುಳಿತು ಶಿಕ್ಷಣವನ್ನು ಪಡೆದಿದ್ದೇವೆ. ಅಂದಿನ ಶಿಕ್ಷಣವು ಬಲವಾಗಿದ್ದು, ಗುಣಾತ್ಮಕವಾಗಿತ್ತು. ನಮ್ಮನ್ನು ಅಕ್ಷರದೊಂದಿಗೆ ಬೌದ್ಧಿಕವಾಗಿ ಬೆಳೆಸಿದ್ದವು. ನೈತಿಕ ಶಿಕ್ಷಣಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದರು. ಇಂದು ಅಂತಹ ಗಟ್ಟಿ ಶಿಕ್ಷಣದ ಅವಶ್ಯಕತೆ ಇದೆ. ಈಗ ಯುವಕರು ಕ್ಲಾಸಿಗೆ ಸೀಮಿತವಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕುಳಿತುಕೊಳ್ಳಬೇಕು. ಅವರಿಗೆ ಆ ನಿಟ್ಟಿನಲ್ಲಿ ಶಿಕ್ಷಕರು ಮಾರ್ಗದರ್ಶನ ಮಾಡುವುದು ಅಗತ್ಯವಾಗಿದೆ. ಜೊತೆಗೆ ಆರೋಗ್ಯಕ್ಕು ಆದ್ಯತೆಯನ್ನು ನೀಡಬೇಕು. ಕೇವಲ ನೌಕರಿಗಾಗಿ ಕಲಿಯಬೇಡಿ, ಜ್ಞಾನ ಹಾಗೂ ನಾಯಕತ್ವಕ್ಕಾಗಿ ಅಧ್ಯಯನ ಮಾಡಿ. ಮಾತೃಭಾಷೆಯ ಮಹತ್ವವನ್ನು ನಾವು ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.ಈ ವೇಳೆ ಡಾ.ಪ್ರಭಾಕರ ಕೋರೆಯವರಿಗೆ ಎಲ್ಲ ಶಾಲೆಗಳ ಮುಖ್ಯಸ್ಥರು ಸತ್ಕರಿಸಿ ಅಭಿನಂದಿಸಿದರು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೈದ ೫ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಶಿಷ್ಯವೇತನ ಹಾಗೂ ಮುಂದಿನ ಶೈಕ್ಷಣಿಕ ಭವಿಷ್ಯತ್ತಿಗೆ ಅವರಿಗೆ ಅಗತ್ಯ ಸೌಲಭ್ಯ ನೀಡುವುದಾಗಿ ಡಾ.ಕೋರೆ ಅವರು ತಿಳಿಸಿದರು.ಈ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ನೃತ್ಯ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ನಂತರದಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ಪ್ರದಾನ ಮಾಡಲಾಯಿತು. ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರಾದ ಡಾ.ವಿ.ಎಸ್.ಸಾಧುನವರ, ಜಯಾನಂದ ಮುನವಳ್ಳಿ, ಬಿ.ಆರ್.ಪಾಟೀಲ, ಡಾ.ಪ್ರೀತಿ ಕೋರೆ ದೊಡವಾಡ, ಕೆಎಲ್‌ಇ ಜಂಟಿಕಾರ್ಯದರ್ಶಿಗಳು, ಆಜೀವ ಸದಸ್ಯರು, ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.-------------------------------------------

ಕೋಟ್‌ನನ್ನ ವಿಕಾಸಕ್ಕೆ ಗುರುಗಳೇ ಕಾರಣ, ನನಗೆ ರಾಜಕೀಯ ಗುರುವಾದವರು ಮಾಜಿ ಸಿಎಂ ದಿ.ಎಸ್.ನಿಜಲಿಂಗಪ್ಪನವರು, ನನ್ನ ಕೌಟುಂಬಿಕ ಮುನ್ನಡೆಗೆ ಪತ್ನಿ ಆಶಾ ಕೋರೆಯವರು ಕಾರಣ. ಅವರ ಸಹಕಾರ ಸಹಾಯದಿಂದ ಸಮಾಜದಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ನನ್ನ ಬಾಲ್ಯದಲ್ಲಿ ಅತ್ಯುತ್ತಮ ಶಿಕ್ಷಕರನ್ನು ನೋಡಿದ್ದೇನೆ. ನನ್ನ ವಿಕಾಸಕ್ಕೆ ಅವರ ಕೊಡುಗೆ ಅನನ್ಯ. ಅವರು ಇಂದಿಗೂ ಕ್ರಿಯಾಶೀಲವಾಗಿ ಚಟುವಟಿಕೆಯಿಂದ ಇರುವುದನ್ನು ಕಂಡಿದ್ದೇನೆ.ಡಾ.ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು ಕೆಎಲ್‌ಇ