ಶಿಕ್ಷಕರ ಶೈಕ್ಷಣಿಕ ಸೇವೆ ಅನನ್ಯ

| Published : Mar 03 2024, 01:30 AM IST

ಸಾರಾಂಶ

ಮಕ್ಕಳಿಗೆ ವಿದ್ಯಾದಾನ ಮಾಡಿ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತಿರುವ ಶಿಕ್ಷಕರ ಶೈಕ್ಷಣಿಕ ಸೇವೆ ಅನನ್ಯವಾದದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಮಕ್ಕಳಿಗೆ ವಿದ್ಯಾದಾನ ಮಾಡಿ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತಿರುವ ಶಿಕ್ಷಕರ ಶೈಕ್ಷಣಿಕ ಸೇವೆ ಅನನ್ಯವಾದದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಬಸ್ಸಾಪೂರದ ಶ್ರೀ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಬಗರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಈರಣ್ಣಾ ಮಹಾದೇವ ಜಗಜಂಪಿ ಅವರ ಸೇವಾನಿವೃತ್ತಿ ಹಾಗೂ ಷಷ್ಠ್ಯಬ್ಧಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈರಣ್ಣಾ ಜಗಜಂಪಿ ಅವರು ತಮ್ಮ ಶೈಕ್ಷಣಿಕ ಸೇವಾವಧಿಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಿದ್ದು, ಅವರೊಬ್ಬ ಒಳ್ಳೆಯ ಶಿಕ್ಷಕರೆಂದು ಈ ಭಾಗದಲ್ಲಿ ಎನಿಸಿಕೊಂಡಿದ್ದಾರೆ. ಈರಣ್ಣಾ ಜಗಜಂಪಿಯವರು ನಿವೃತ್ತಿಯಾದರೂ ತಮ್ಮ ಸಮಾಜಸೇವೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ, ಸಂಘರ್ಷ, ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ಹೋಗಲಾಡಿಸಲು ಇಂದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಸಮಾಜ ಕಟ್ಟುವ ಕೆಲಸ ಮಾಡಬೇಕು. ಯಮಕನಮರಡಿ ಮತಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ರಸ್ತೆ ಕುಡಿಯುವ ನೀರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಮಕನಮರಡಿ ಮತಕ್ಷೇತ್ರದಲ್ಲಿ ಒಟ್ಟು 50 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ 48 ಶಾಲಾ ಕೊಠಡಿಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದು, ಇದರಿಂದ ಕ್ಷೇತ್ರದಲ್ಲಿ ಶೇ.100 ಶಾಲಾ ಕೊಠಡಿಗಳನ್ನು ನಿರ್ಮಿಸುವ ಹೆಗ್ಗಳಿಕೆಯಿದೆ ಎಂದು ಹೇಳಿದರು.

ಶಿಕ್ಷಕ ಸಾಹಿತಿಗಳಾದ ಆರ್. ಎಸ್. ಪಂಗನ್ನವರ ಮಾತನಾಡಿ, ಈರಣ್ಣಾ ಜಗಜಂಪಿ ಅವರು ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜೊತೆಗೆ ಸಮಾಜಮುಖಿಯಾಗಿ ತಮ್ಮ ಸೇವೆಯನ್ನು ಸಮಾಜಕ್ಕೆ ಮಾಡಿದ್ದಾರೆ. ಉತ್ತಮ ಯೋಜನೆಗಳನ್ನು ಹಾಕಿಕೊಂಡು ಮುಂಬರುವ ದಿನಗಳಲ್ಲಿ ಅವರೊಬ್ಬರು ಪ್ರಬುದ್ಧತೆವುಳ್ಳ ರಾಜಕಾರಣಿಯಾಗುವ ಲಕ್ಷಣಗಳಿವೆ. ತಮ್ಮ ಶಿಕ್ಷಣ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸೇವೆಯನ್ನು ಮಾಡಿದ್ದಾರೆ. ಅವರೊಬ್ಬರು ಬಹುಮುಖ ಪ್ರತಿಭೆಯೆಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಗುಟಗುದ್ದಿಯ ಬ್ರಹ್ಮಶ್ರೀ ಶಿವಾನಂದ ಮಹಾಸ್ವಾಮಿಗಳು ಜಾರಕಿಹೊಳಿ ಅವರು, ಶ್ರೀ ಕೃಪಾನಂದ ಮಹಾಸ್ವಾಮಿಗಳು ಬಸ್ಸಾಪೂರ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ನಿವೃತ್ತ ಶಿಕ್ಷಕ ಜಿ.ವ್ಹಿ. ಮಾಳಗಿ, ಜಿ.ಪಂ ಮಾಜಿ ಸದಸ್ಯ ಸುರೇಖಾ ಈರಣ್ಣಾ ಜಗಜಂಪಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಇ.ಓ ಪ್ರಭಾವತಿ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಬಸ್ಸಾಪೂರ ಗ್ರಾ.ಪಂ ಅಧ್ಯಕ್ಷ ಭೀಮಸಿ ಕಳ್ಳಿಮನಿ, ಮಾಜಿ ಜಿ.ಪಂ. ಸದಸ್ಯ ಯಲ್ಲಪ್ಪ ಹಂಚಿನಮನಿ, ಸಾಗರ ಜಗಜಂಪಿ, ಚಿಕ್ಕೋಡಿ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಆರ್.ಡಿ.ತೇರದಾಳ, ವಿಶ್ವನಾಥ ಕಮತೆ, ರಾಕೇಶ ಚಿಂಚಣಿ, ಮಲ್ಲಿಕಾರ್ಜುನ ಜಗಜಂಪಿ, ರಾಜುಗೌಡ ಪಾಟೀಲ, ರವಿ ಕರಾಳೆ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ಗ್ರಾ.ಪಂ ಅಧ್ಯಕ್ಷರು ಸದಸ್ಯರು ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕ ಗಿರೀಶ ಜಗಜಂಪಿ, ಭಜಂತ್ರಿ ಇವರು ಕಾರ್ಯಕ್ರಮ ನಡೆಸಿಕೊಟ್ಟರು.