ಗಳಗನಾಥರು 20ನೇ ಶತಮಾನದಲ್ಲೇ ವಿಪುಲ ಹಾಗೂ ವೈವಿಧ್ಯಮಯ ಕನ್ನಡ ಸಾಹಿತ್ಯ ರಚಿಸಿ ಅವುಗಳನ್ನು ತಲೆ ಮೇಲೆ ಹೊತ್ತು ಊರೂರು ತಿರುಗಿ ಕನ್ನಡಿಗರ ವಾಚಾನಾಭಿರುಚಿಯ ಬೆಳವಣಿಗೆಗೆ ಅಸ್ತಿವಾರ ಹಾಕಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಆಧುನಿಕ ಕರ್ನಾಟಕವನ್ನು ಕಟ್ಟಲು ಆಲೂರು ವೆಂಕಟರಾಯರು, ಗಳಗನಾಥರು ಸಾಕಷ್ಟು ಶ್ರಮಿಸಿದ್ದಾರೆ. ಇವರೇ ಕನ್ನಡ ಬದುಕಿಗೆ ನಿಜವಾದ ಕೊಡುಗೆ ಸಲ್ಲಿಸಿದವರು ಎಂದು ಹನುಮಂತನಗರದ ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಲಿಂಗೇಗೌಡ ಹೇಳಿದರು.

ಭಾರತೀ ಕಾಲೇಜಿನ ಗ್ರಂಥಾಲಯದ ಹಿಪ್ಪೆಮರದ ಆವರಣದಲ್ಲಿ ಭಾರತೀ ಕಾಲೇಜು, ಸ್ನಾತಕ, ಸ್ನಾತಕೊತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಮಾತನಾಡಿದರು.

ಗಳಗನಾಥರು 20ನೇ ಶತಮಾನದಲ್ಲೇ ವಿಪುಲ ಹಾಗೂ ವೈವಿಧ್ಯಮಯ ಕನ್ನಡ ಸಾಹಿತ್ಯ ರಚಿಸಿ ಅವುಗಳನ್ನು ತಲೆ ಮೇಲೆ ಹೊತ್ತು ಊರೂರು ತಿರುಗಿ ಕನ್ನಡಿಗರ ವಾಚಾನಾಭಿರುಚಿಯ ಬೆಳವಣಿಗೆಗೆ ಅಸ್ತಿವಾರ ಹಾಕಿದರು. ಸರ್ಕಾರಿ ಸೇವೆ ತ್ಯಜಿಸಿ ಮುದ್ರಣಾಲಯ ಸ್ಥಾಪಿಸಿ, ಪತ್ರಿಕೆ ನಡೆಸುವ ಸಾಹಸ ಮಾಡಿದರು. ಸಂಕಷ್ಟದ ಸಮಯದಲ್ಲಿ ನುಡಿ ಸೇವೆಯಲ್ಲೇ ತಮ್ಮ ಜೀವ ತೇಯ್ದುರು ಎಂದರು.

ಕನ್ನಡ ಭಾಷೆ, ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಭಾಷೆ ಉಳಿದರೆ ದೇಶ ಸಂಪದ್ಭರಿತವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಎಸ್. ಮಹದೇವಸ್ವಾಮಿ ಮಾತನಾಡಿ, ಕನ್ನಡಿಗರು ಪ್ರತಿ ದಿನವೂ ಕನ್ನಡ ಭಾಷೆ ಬಳಸಬೇಕು, ಇತರರಿಗೂ ಅಭಿಮಾನದಿಂದ ಕಲಿಸಬೇಕು. ಆಗ ಭಾಷೆ ಬೆಳೆಯುಲು ಸಾಧ್ಯವಾಗುತ್ತದೆ ಎಂದರು.

ಬ್ಯಾಂಕಿನಲ್ಲಿ ಇತ್ತೀಚೆಗೆ ಕನ್ನಡ ಬಳಕೆ ಕಡಿಮೆಯಾಗಿದೆ. ಕನ್ನಡಿಗರು ಎಟಿಎಂಗೆ ಹೋದಾಗ ಭಾಷಾ ಬಳಕೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡವನ್ನು ಬಳಸಿದರೆ ಕನ್ನಡ ಭಾಷೆ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.

ಇದೇ ವೇಳೆ ಶಾಲಾ ಮಕ್ಕಳು ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕರುನಾಡ ತಾಯಿ ಸದಾ ಚಿನ್ಮಯಿ ಹಾಡುಗಳನ್ನು ಹಾಡಿ, ನಾಡು, ನುಡಿಯ ಅಭಿಮಾನ ಗೀತೆಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ಥಟ್ ಅಂತ ಹೇಳಿ ಪ್ರಶ್ನೆಗಳಿಗೆ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಚಾಲಕರಾದ ಅರ್ಚನಾ, ಬಿ.ಕೆ.ಕೃಷ್ಣ, ಐಕ್ಯೂಎಸಿ ಸಂಯೋಜಕರಾದ ಡಾ.ಎಂ.ಪಿ.ತೇಜೇಶ್ ಕುಮಾರ್, ನಿಜಲಿಂಗು, ಅಧ್ಯಾಪಕರು, ಅಧ್ಯಾಪಕೇತರು, ವಿದ್ಯಾರ್ಥಿಗಳು ಭಾಗವಹಿಸಿದರು.