ಸಮಾಜದ ಅಭಿವೃದ್ಧಿಗೆ ಜನಪ್ರತಿನಿಧಿಗಳ ಶ್ರಮ ಮುಖ್ಯವಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಬಂಕಾಪುರ ಕೆಂಡದಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಶಿಗ್ಗಾಂವಿ:ಸಮಾಜದ ಅಭಿವೃದ್ಧಿಗೆ ಜನಪ್ರತಿನಿಧಿಗಳ ಶ್ರಮ ಮುಖ್ಯವಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಬಂಕಾಪುರ ಕೆಂಡದಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಬೆಳವಲಕೊಪ್ಪ ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಬಂಕಾಪುರ ಕೆಂಡದಮಠದ ಸಿದ್ದಯ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕೇಂದ್ರ ಸಚಿವ ಜೋಶಿಯವರು ತಮ್ಮ ಎಂಪಿಎಲ್‌ಎಡಿ ಯೋಜನೆಯಡಿ ₹ ೫ ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಹಲವು ಜನಪರ ಯೋಜನೆಗಳು ಜನಮನ ಮೆಚ್ಚುಗೆ ಪಡೆದಿದೆ ಎಂದು ಹೇಳಿದರು.ಸಮಾಜದ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸಕ್ಕಾಗಿ ಅತ್ಯಂತ ಅಗತ್ಯವಾಗಿದ್ದ ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆದಿರುವುದು ಹೆಮ್ಮೆಯ ಸಂಗತಿ ಎಂದರು.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾಜಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಭವನದ ನಿರ್ಮಾಣವು ಕೇವಲ ಕಟ್ಟಡ ನಿರ್ಮಾಣವಲ್ಲ. ಇದು ಗ್ರಾಮದ ಸಾಮಾಜಿಕ ಏಕತೆ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು, ಯುವಕರ ಪ್ರತಿಭಾ ಪ್ರದರ್ಶನ ಹಾಗೂ ಸಮೂಹ ಸಭೆಗಳಿಗೆ ಶಾಶ್ವತ ವೇದಿಕೆ ಕಲ್ಪಿಸುವಂತಹ ಗ್ರಾಮದ ಅಭಿವೃದ್ಧಿಯ ಪ್ರಮುಖ ಹಂತವಾಗಿದೆ ಎಂದರು.ಸಚಿವ ಜೋಶಿ ಅವರು ಸದಾ ಗ್ರಾಮ ಗಳ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು, ಮೂಲಸೌಕರ್ಯ, ಧಾರ್ಮಿಕ ಕೇಂದ್ರ ಗಳು, ಶಿಕ್ಷಣ, ಕುಡಿಯುವ ನೀರು, ರಸ್ತೆ, ಸಮುದಾಯ ಭವನಗಳ ಅಭಿವೃದ್ಧಿಗೆ ನಿರಂತರವಾಗಿ ನಡೆದಿದೆ ಎಂದು ಹೇಳಿದರು.ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಸಮುದಾಯದ ನಾಯಕರು ಈ ಸಮುದಾಯ ಭವನ ನಿರ್ಮಾಣದಿಂದ ಭವಿಷ್ಯದಲ್ಲಿ ಹಲವು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯಲಿವೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ನರಹರಿ ಕಟ್ಟಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಈಶ್ವರ ಬಿಶೆಟ್ಟಿ, ಸಹದೇವ ಭರಮಣ್ಣನವರ, ದ್ಯಾಮನಗೌಡರ ಪಾಟೀಲ, ನಿಂಗಪ್ಪ ಸಂಶಿ, ಮಹದೇವಪ್ಪ ಲಂಡೆತ್ತಿನವರ, ಹೊನ್ನಪ್ಪ ಬಿಶೆಟ್ಟಿ, ರವಿ ಬಿಶೆಟ್ಟಿ, ದೇವೇಂದ್ರಪ್ಪ ಸೊರಟೂರ ಹಾಗೂ ಗ್ರಾಮದ ಹಿರಿಯರು, ಯುವಕರು ಇದ್ದರು.