ಸಾರಾಂಶ
ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆಯಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿಯನ್ನು ಅಗಲೀಕರಣ ಗೊಳಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ರಸ್ತೆ ಮಧ್ಯದಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಈಜಾಡುವ ಮೂಲಕ ಸೋಮವಾರ ಮಧ್ಯಾಹ್ನ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರು.
ಇತ್ತೀಚೆಗೆ ಎಮ್ಮೆಗಳನ್ನು ಮೈತೊಳೆದು ಪ್ರತಿಭಟನೆ ನಡೆಸಿದ್ದ ಅಗಲೀಕರಣ ಹೋರಾಟ ಸಮಿತಿ ಸದಸ್ಯರು, ಇದೀಗ ನಿಂತ ನೀರಿನಲ್ಲಿ ಈಜಾಡುವ ಮೂಲಕ ಲೋಕೋಪಯೋಗಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು,ನೀರಿನಲ್ಲಿ ಈಜಾಡಿ ಪ್ರತಿಭಟನೆ ನಡೆಸಿದ ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಬಿನ್ನಾಳ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಸೇರಿದಂತೆ ಸಾರ್ವಜನಿಕರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಕಳೆದ 15 ವರ್ಷದಿಂದ ಅಗಲೀಕರಣಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಆದರೆ ಯಾವುದೇ ಸರ್ಕಾರಗಳು ಅಗಲೀಕರಣಕ್ಕೆ ಮುಂದಾಗದೇ ಕೇವಲ ಭರವಸೆ ನೀಡುತ್ತಿವೆಯೇ ಹೊರತು ಕಾರ್ಯರೂಪಕ್ಕೆ ತಂದಿಲ್ಲ ಎಂದು ಆರೋಪಿಸಿದರು.
ಪಟ್ಟಣದ ಕೇವಲ 850 ಮೀ.ಅಗಲೀಕರಣಕ್ಕಾಗಿ ಇಷ್ಟೊಂದು ಹೋರಾಟ ಮಾಡಬೇಕಾಗಿದೆ. ಇಲ್ಲಿರುವ 150 ಜನರ ಹಿತಾಸಕ್ತಿಗೆ ಸುಮಾರು 1.50 ಲಕ್ಷ ಜನರು ತೊಂದರೆ ಅನುಭವಿಸುತ್ತಿದ್ದಾರೆ, ಮುಖ್ಯರಸ್ತೆ ಸಾರ್ವಜನಿಕರ ಹಕ್ಕು ಒತ್ತುವರಿ ತೆರವುಗೊಳಿಸಿ ರಸ್ತೆ ಮಾಡಬೇಕು ಇಲ್ಲಿ ಯಾರಪ್ಪನ ಮನೆ ಆಸ್ತಿಯನ್ನು ಕಬಳಿಸುತ್ತಿಲ್ಲ, ಸರ್ಕಾರ ಪರಿಹಾರ ನೀಡಲೂ ಸಿದ್ಧವಿದ್ದರೂ ಅದನ್ನು ಪಡೆದುಕೊಳ್ಳದ ಅಭಿವೃದ್ಧಿ ವಿರೋಧಿಗಳ ಗುಂಪಿನ ಮಾತನ್ನು ಸರ್ಕಾರ ಕೇಳುತ್ತಿದೆ ಎಂದು ಆರೋಪಿಸಿದರು.ಆ. 15ಕ್ಕೆ ರಸ್ತೆ ಶಾಶ್ವತ ಬಂದ್:ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಅಗಲೀಕರಣಕ್ಕಾಗಿ ನಾವು ಉಪವಾಸ ಸತ್ಯಾಗ್ರಹ, ಬ್ಯಾಡಗಿ ಬಂದ್, ಅಹೋರಾತ್ರಿ ಧರಣಿ, ಕೇಶ ಮುಂಡನ, ಕತ್ತೆ ಮೆರವಣಿಗೆ, ಎಮ್ಮೆಗಳ ಮೈತೊಳೆಯುವುದು ಸೇರಿದಂತೆ ಹತ್ತು ಹಲವು ಪ್ರತಿಭಟನೆ ಮಾಡಿದ್ದೇವೆ ಇನ್ನೆಷ್ಟು ಹೋರಾಟ ಮಾಡಬೇಕು ಮುಖ್ಯರಸ್ತೆಯಲ್ಲಿದ್ದವರಿಗೆ ಅಗಲೀಕರಣ ಬೇಡ ಎಂದಾದರೆ, ನಮಗೆ ಮುಖ್ಯರಸ್ತೆಯೂ ಬೇಡ ಎರಡು ಬದಿಗಳಲ್ಲಿ ಜೆಸಿಬಿಯಿಂದ ರಸ್ತೆ ಅಗೆದು ಶಾಶ್ವತವಾಗಿ ರಸ್ತೆ ಬಂದ್ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಬದಲ್ಲಿ ಕೃಷಿಕ ಶಿವಕುಮಾರ ಕಲ್ಲಾಪುರ, ಪಾಂಡುರಂಗ ಸುತಾರ, ಪರೀದಾಬಾನು ನದಿಮುಲ್ಲಾ, ಎಂ.ಎಲ್.ಕಿರಣಕುಮಾರ. ಸೇರಿದಂತೆ ವಿವಿಧ ಮಹಿಳೆಯರು ಭಾಗವಹಿಸಿದ್ದರು.