ಕನ್ನಡಪ್ರಭ ವಾರ್ತೆ ಹನೂರು

ಕತ್ತಲೆಯಲ್ಲೇ ಹಲವು ದಶಕ ಜೀವನವನ್ನು ಸವೆಸಿ ಸಾಕಾಗಿ ದಯಾಮರಣ ಕೋರಿದ್ದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮೆದಗಾಣೆ ಗ್ರಾಮದ ಆದಿವಾಸಿ ಕೆಂಪಮ್ಮಳ ಮನೆಗೆ ವಿದ್ಯುತ್‌ ಹರಿದು ಬಂದಿದ್ದು, ಮನೆ ಬೆಳಕಾಗಿದೆ.

‘ವಿದ್ಯುತ್‌ ಕೊಡದಿದ್ರೆ, ದಯಾಮರಣ ಕೊಡಿ: ಸಿಎಂಗೆ ಚಾ.ನಗರ ವೃದ್ಧೆ ಪತ್ರ’ ಶೀರ್ಷಿಕೆಯಡಿ ಏ.17ರಂದು ‘ಕನ್ನಡಪ್ರಭ’ ವರದಿ ಪ್ರಕಟಿಸಿದ್ದ ಹಿನ್ನೆಲೆ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿಗಳು ಸೆಸ್ಕಾಂಗೆ ಪತ್ರ ಬರೆದು ಮೆದಗಾಣೆ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ತಿಳಿಸಿದ್ದರು. ಈಗ ಆದಿವಾಸಿ ಕೆಂಪಮ್ಮ ಮನೆ ಬೆಳಕು ಕಂಡಿದೆ.

ತಾಲೂಕಿನ ಮಲೆಮದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಗಾಣೆ ಗ್ರಾಮದ ಕೆಂಪಮ್ಮ ವಿದ್ಯುತ್ ಸಂಪರ್ಕಕ್ಕೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ದಯಾಮರಣಕ್ಕೆ ಪತ್ರ ಬರೆದಿದ್ದರು. ‘ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ನಮಗೆ ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ನಮ್ಮ ಮೊಮ್ಮಕ್ಕಳು ವಿದ್ಯುತ್ ಇಲ್ಲದೇ ಕಷ್ಟ ಅನುಭವಿಸುತ್ತಿದ್ದು, ನಮ್ಮ ಕಣ್ಣಲ್ಲಿ ನೋಡಲಾಗುತ್ತಿಲ್ಲ. ದಯವಿಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಿ, ಇಲ್ಲವೇ ದಯಾ ಮರಣ ಅನುಮತಿ ಕೊಡಿ’ ಎಂದು ಸಿಎಂಗೆ ಅಂಚೆ ಮೂಲಕ ಕಳುಹಿಸಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.

ಕೊನೆಗೂ ಬಂತು ಹಾಡಿಗೆ ಬೆಳಕು:


ಮುಖ್ಯಮಂತ್ರಿ ಸಿದ್ದರಾಮಯ್ಯ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಲೆಮದೇಶ್ವರ ಬೆಟ್ಟಕ್ಕೆ ಆಗಮಿಸಿದ ವೇಳೆ ಜಿಲ್ಲೆಯ 31 ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಸೂಚನೆ ನೀಡಿದ್ದರು. ಇದರ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತವು ಸಹ ಮನವಿ ಮಾಡಿತ್ತು. ಅದರಂತೆ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದು ಮೆದಗಾಣೆ ಹಾಡಿಗೆ ಶುಕ್ರವಾರ ಸರ್ಕಾರ ವಿದ್ಯುತ್ ಭಾಗ್ಯ ಕರುಣಿಸಿದೆ.